ಬಳ್ಳಾರಿ

ಹಳ್ಳಿ ಜನತೆಗೆ ಉಮಾದೇವಿ ಮಹಾತಾಯಿ

Published On :

ರಾಜ್ಯದ ಎಲ್ಲ ಹಳ್ಳಿಗಾಡಿನಲ್ಲಿ ಕಿರಿಯ ಆರೋಗ್ಯ ಸಹಾಯಕ ಕೇಂದ್ರ ಇದ್ದೇ ಇರುತ್ತದೆ. ಅಲ್ಲೊಬ್ಬ ನರ್ಸ್ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಬೇಕು. ಆದರೆ ಎಷ್ಟೋ ಹಳ್ಳಿಗಳಲ್ಲಿ ನರ್ಸ್ ಇರುವುದೆ ಇಲ್ಲ. ಅದರಲ್ಲೂ 24 ತಾಸು ವೃತ್ತಿ ಗೌರವಿಸುವ ಶುಶ್ರೂಷಕಿ ಸಿಗುವುದು ಮಾತ್ರ ಕಠಿಣ. ಇಡಿ ಹಳ್ಳಿ ಜನತೆಗೆ ಭೇದ, ಭಾವ ಮಾಡದೆ, ಮಧ್ಯೆ ರಾತ್ರಿಯೂ ಚಿಕಿತ್ಸೆ, ಮಾರ್ಗದರ್ಶನ ನೀಡುವ ಮೂಲಕ ಆ ಊರಿನ ಪ್ರೀತಿ ಗಳಿಸಿದ ಶುಶ್ರೂಷಕಿ ನಮ್ಮ ಮಧ್ಯೆ ಇದ್ದಾಳೆ ಎಂದರೆ ಅಚ್ಚರಿಯೆ ಸರಿ.
ತಾಲೂಕಿನ ಗುಡೇಕೋಟೆ ಸಮೀಪದ ರಾಮದುರ್ಗ ಎಎನ್‌ಎಂ ಉಪ ಕೇಂದ್ರದದಲ್ಲಿ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿ. ಉಮಾದೇವಿ ಎಂದರೆ ಆ ಹಳ್ಳಿಯ ಜನತೆಗೆ ಎಲ್ಲಿಲ್ಲದ ಪ್ರೀತಿ. ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎನ್ನುವುದನ್ನು ಬರೀ ನಾಮಫಲಕಗಳಲ್ಲಿ ಕಾಣುತ್ತಿರುವ ಇಂದಿನ ದಿನಗಳಲ್ಲಿ ಉಮಾದೇವಿ ಶ್ರೀರಾಮ್ ಅಂಥವರು ನಿಜಮಾಡಿ ತೋರಿಸಿದ್ದಾರೆ. ಉಮಾದೇವಿಯನ್ನು ಹಳ್ಳಿಗರು ಮಹಾತಾಯಿ ಎಂತಲೆ ಕರೆಯುತ್ತಾರೆ. ರಾಜ್ಯದ ಎಷ್ಟೋ ಆರೋಗ್ಯ ಉಪ ಕೇಂದ್ರಗಳು ಅವ್ಯವಸ್ಥೆಗಳ ಆಗರವೆ ಆಗಿವೆ. ಮಾತ್ರೆ ಇಲ್ಲ, ಇಂಜೆಕ್ಷನ್ ಇಲ್ಲ ಎನ್ನುವ ಬಿರು ನುಡಿಗಳನ್ನಾಡುವ ನರ್ಸ್‌ಗಳೆ ಹೆಚ್ಚು. ಅಂಥದ್ದರಲ್ಲಿ  ಈ ನರ್ಸ್‌ನ್ನು ನೋಡಿದರೆ ತಬ್ಬಿಬ್ಬಾಗುತ್ತೀರಿ. ಮಮಕಾರ, ವಿನಯದಿಂದಲೆ ಕೆಲಸ ಮಾಡುವ ಗುಣ ಈಕೆಯಲ್ಲಿ ಕಾಣುತ್ತೀರಿ.
ಆರೋಗ್ಯ ಸಹಾಯಕಿಗೆ ರಾಷ್ಟ್ರ ಮನ್ನಣೆ: ಪೊಲಿಯೋ ಮುಕ್ತವನ್ನಾಗಿ ಮಾಡಿದ ಆರೋಗ್ಯ ಇಲಾಖೆಯ ಸೇವೆಯನ್ನು ಪ್ರಶಂಸಿಸಲು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆ ಫೆಬ್ರವರಿ 11ರಂದು ದೆಹಲಿಯಲ್ಲಿ ಆಯೋಜಿಸಿದ್ದ ಇಂಡಿಯಾ ವಿಕ್ಟರ್ ಓವರ್ ಪೊಲಿಯೋ ಸಮಾರಂಭಕ್ಕೆ ರಾಜ್ಯದಿಂದ 9 ಆರೋಗ್ಯ ಸಹಾಯಕಿಯರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ ರಾಮದುರ್ಗ ಉಪ ಕೇಂದ್ರದ ಜಿ. ಉಮಾದೇವಿ ಆಯ್ಕೆಯಾಗಿದ್ದರು. ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನ ಮೂಲೆಕಟ್ಟಿನ ರಾಮದುರ್ಗ ಗ್ರಾಮದ ಆರೋಗ್ಯ ಸಹಾಯಕಿ ಜಿ. ಉಮಾದೇವಿ ಆಯ್ಕೆಯಾದದ್ದು ಮಾತ್ರ ರಾಮದುರ್ಗದ ಜನತೆಗೆ ಹೆಮ್ಮೆ ವಿಷಯ.
ಹಳ್ಳಿಗಾಡಿನವರು: ಮೂಲತಃ ಚಳ್ಳಕೆರೆ ತಾಲೂಕು ದೊಡ್ಡೇರಿ ರೆಡ್ಡಿಹಳ್ಳಿಯ ಜಿ. ಉಮಾದೇವಿ ಚಿತ್ರದುರ್ಗ ಮೂಲದ ಎಚ್.ಎಸ್. ಶ್ರೀರಾಮ ಅವರನ್ನು ವಿವಾಹವಾಗಿದ್ದಾರೆ. ಎಚ್.ಎಸ್. ಶ್ರೀರಾಮ ಪತ್ನಿಯ ಕೆಲಸ, ಕಾರ್ಯಗಳಲ್ಲಿ ಸದಾ ಸಹಕಾರ ನೀಡುತ್ತಾರೆ. 1986ರಲ್ಲಿ ಆರೋಗ್ಯ ಸಹಾಯಕಿಯಾಗಿ ಆಯ್ಕೆಯಾದ ಉಮಾದೇವಿ 19 ವರ್ಷ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸಿ ಅಲ್ಲಿಯೂ ಜನ ಮೆಚ್ಚುಗೆ ಗಳಿಸಿದ್ದಾರೆ. ಈಗ್ಗೆ 10 ವರ್ಷದಿಂದ ರಾಮದುರ್ಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿಯೂ ನಿಸ್ವಾರ್ಥ ಸೇವೆಯಿಂದ ಸಾಮಾನ್ಯ ಜನತೆಗೂ ಆರೋಗ್ಯದ ಸೇವೆ ನೀಡುತ್ತ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಇತರೆ ಆರೋಗ್ಯ ಸಹಾಯಕಿಯರಿಗೆ, ಶುಶ್ರೂಷಕಿ ಯರಿಗೆ ಮಾದರಿಯಾಗಿದ್ದಾರೆ.
ರಾಮದುರ್ಗ ಗ್ರಾಮಸ್ಥರ ಸಂಭ್ರಮ: ಗ್ರಾಮದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಬಾಯಲ್ಲೂ ಜಿ. ಉಮಾದೇವಿ ಹೆಸರು ತುದಿನಾಲಿಗೆ ಮೇಲಿದೆ. ಕಾರಣ ನಮ್ಮ ಊರಿನಲ್ಲಿ ಯಾರಿಗಾದರೂ ಆರೋಗ್ಯದ ತೊಂದರೆ ಆಗಿ ಮಧ್ಯರಾತ್ರಿಯೂ ಅವರ ಮನೆ ಕದ ಬಡಿದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಸ್ಪಂದಿಸುತ್ತಾರೆ. ಆರೋಗ್ಯ ಇಲಾಖೆಯ ಯಾವುದೇ ಕೆಲಸ ಇದ್ದರೂ ಉಮಾದೇವಿ ಜತೆಗೆ ಅವರ ಪತಿ ಶ್ರೀರಾಮ್ ಸಹಾಯಕರಾಗಿ ಕೆಲಸ ಮಾಡುತ್ತಾರೆ. ನಮ್ಮ ಊರಿಗೆ ಇಂತಹ ಆರೋಗ್ಯ ಸಹಾಯಕಿ ಸಿಕ್ಕಿರುವುದು ಜನತೆಯ ಪುಣ್ಯ ಎನ್ನುತ್ತಾರೆ ತಾಪಂ ಮಾಜಿ ಅಧ್ಯಕ್ಷೆ ರಾಮದುರ್ಗದ ಸರೋಜಾ ಪಾಪಣ್ಣ.
ಗ್ರಾಮೀಣರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗದ ಇಂದಿನ ದಿನಗಳಲ್ಲಿ ಉತ್ತಮ ಸೇವೆ ಮಾಡುತ್ತ ಜನತೆಯ ಮಹಾತಾಯಿಯಾಗಿರುವ ಉಮಾದೇವಿಯವರಿಗೆ ನೀವು ಒಂದು ಕೃತಜ್ಞತೆ ಹೇಳಬೇಕೆ 9900805414 ಈ ಸಂಖ್ಯೆಗೆ ಒಂದು ಕಾಲ್ ಮಾಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.