ವಿವಿಧ ಬೇಡಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಆತ್ಮಹತ್ಯೆ ಯತ್ನ
ಬಳ್ಳಾರಿ: ತಮ್ಮ ಸೇವೆ ಕಾಯಂಗೊಳಿಸಬೇಕು ಹಾಗೂ ಕಾರಣವಿಲ್ಲದೆ ಕೆಲಸದಿಂದ ವಜಾಗೊಳಿಸಿದ ಪೌರ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ, ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ನೂರಾರು ದಿನಗೂಲಿ ಪೌರಕಾರ್ಮಿಕರು, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು.
ಸ್ಥಳೀಯ ಮಹಾನಗರಪಾಲಿಕೆ ಕಚೇರಿ ಮುಂಭಾಗ ಅನಿರೀಕ್ಷಿತ ಪ್ರತಿಭಟನೆ ನಡೆಸಿದ ಗುತ್ತಿಗೆ ಆಧಾರದ ಪೌರ ಕಾರ್ಮಿಕರು, ಡಬ್ಬಿಗಳಲ್ಲಿ ತಂದಿದ್ದ ಸೀಮೆಎಣ್ಣೆ ಮೈಮೇಲೆ ಎರಚಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸೀಮೆಎಣ್ಣೆ ಎರಚಿಕೊಂಡಿದ್ದ ಪೌರಕಾರ್ಮಿಕರಾದ ರೇಣುಕಾ, ಲಲಿತಾ, ಲಕ್ಷ್ಮಿದೇವಿ, ಈಶ್ವರಿ, ಮಾರೆಕ್ಕ, ರತ್ನಮ್ಮ, ಪುಲ್ಲಮ್ಮ, ನಾಗಮ್ಮ, ಓಬುಳಮ್ಮ ಅವರನ್ನು 108 ಆ್ಯಂಬ್ಯುಲೆನ್ಸ್ನಲ್ಲಿ ವಿಮ್ಸ್ಗೆ ದಾಖಲಿಸಲಾಗಿದೆ. ಈ ಪೈಕಿ ಅಸ್ವಸ್ಥಗೊಂಡಿದ್ದ ಐವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಪಾಲಿಕೆ ಆಯುಕ್ತರು ಭೇಟಿ ನೀಡಿ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದರು. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ದಶಕದಿಂದ ಸುಮಾರು 250 ಜನರು ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈಚೆಗೆ ಹೊಸದಾಗಿ ನೇಮಕ ಮಾಡಿಕೊಂಡಿರುವ ಜಿಲ್ಲಾಧಿಕಾರಿ ಕೇವಲ 163 ಜನರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಂಡಿದ್ದು, ಇನ್ನುಳಿದವರನ್ನು ನಿರಾಕರಿಸಿದ್ದಾರೆ. ಮೇಲಾಗಿ ಮೂರು ತಿಂಗಳಿಂದಲೂ ವೇತನ ಪಡೆಯದ ಕಾರ್ಮಿಕರು ಜಿಲ್ಲಾಧಿಕಾರಿ ನಿರ್ಧಾರದಿಂದಾಗಿ ಕೋಪಗೊಂಡು ಬುಧವಾರ ಪಾಲಿಕೆ ಕಚೇರಿ ಎದುರು ಜಮಾಯಿಸಿ, ವೇತನ ನೀಡಬೇಕು. ಕೆಲಸದಿಂದ ಕೈಬಿಟ್ಟವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಪ್ರತಿಭಟಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆರೋಗ್ಯ, ಸೇವಾ ಭದ್ರತೆ, ರಕ್ಷಣಾ ಸೌಲಭ್ಯಗಳಿಲ್ಲದೇ ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಗುತ್ತಿಗೆ ಪೌರ ಕಾರ್ಮಿಕರನ್ನು ಕೇವಲ ಕೆಲಸಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ ಹೊರತು, ಬೇಡಿಕೆ ಈಡೇರಿಕೆಗೆ ಕೇಳಿದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಸುಳ್ಳು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇವರ ಸುಳ್ಳು ಭರವಸೆಗಳಲ್ಲೇ ಹಲವು ವರ್ಷಗಳು ದೂಡಲಾಗಿದೆ. ರು. 6500 ವೇತನವೆಂದು ರಸೀದಿ ಮೇಲೆ ಸಹಿ ಮಾಡಿಕೊಳ್ಳುವ ಗುತ್ತಿಗೆದಾರರು ಕಾರ್ಮಿಕರಿಗೆ ರು. 5500 ನೀಡಲಾಗುತ್ತಿದ್ದು, ಪಾಲಿಕೆಯಲ್ಲಿ ಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆಯ ನೂರಾರು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.
ಗುತ್ತಿಗೆ ಆಧಾರದ ಕಾರ್ಮಿಕರಿಗೂ ಪಾಲಿಕೆಗೂ ನೇರ ಸಂಬಂಧವಿಲ್ಲ. ಆತ್ಮಹತ್ಯೆಗೆ ಪ್ರಯತ್ನದ ಬದಲು, ಮಾನವೀಯತೆ ಆಧಾರದ ಮೇಲೆ ಕೆಲಸ ಕೇಳಬಹುದಿತ್ತು. ಸಂಜೆ ಒಳಗೆ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
- ಸಿ. ಚಿಕ್ಕಣ್ಣ,
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

