ಸಮಾನ ಶಿಕ್ಷಣ ಅವಶ್ಯ: ಮಹಮ್ಮದ್
ಹೊಸಪೇಟೆ: ಪ್ರತಿ ಮಗುವಿಗೆ ಶಿಕ್ಷಣದ ಅವಶ್ಯಕತೆ ಇದೆ. ಎಲ್ಲ ಮಕ್ಕಳಿಗೂ ಸಮಾನವಾಗಿ ಅವಕಾಶ ಮತ್ತು ಕಡ್ಡಾಯವಾಗಿ ಶಿಕ್ಷಣ ಸಿಗಬೇಕು. ಬಾಲ್ಯವಿವಾಹ ವಿರೋಧಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್ ಸರ್ವರ್ ಹೇಳಿದರು.
ನಗರದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ, ಸಮಾನ ಮಕ್ಕಳ ಮಂಟಪ, ಹೊಸಪೇಟೆಯ ವಿವಿಧ ಸ್ಲಂಗಳ ಮಕ್ಕಳಿಗಾಗಿ ಚಿತ್ತವಾಡ್ಗಿಯ ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಅವರು ಹೇಳಿದರು.
ಚಿತ್ತವಾಡ್ಗಿ ಸರ್ಕಾರಿ ಶಾಲೆ ಮುಖ್ಯ ಗುರು ಧನರಾಜ್, ಶಿಕ್ಷಕಿ ಗಾಯತ್ರಿ, ಸಮಾನ ಮಕ್ಕಳ ಮಂಟಪ ಅಧ್ಯಕ್ಷ ಮೋಹನ್, ಸಂಯೋಜಕ ಕೆ. ವೆಂಕಟೇಶಲು, ಕಾರ್ಯಕರ್ತರು ವೆಂಕಮ್ಮ, ಗದುಗಿನ ಗಿರೀಶ್, ಗೀತಾಂಜಲಿ, ಸಣ್ಣತಿಪ್ಪಮ್ಮ, ನಾಗಲಕ್ಷ್ಮಿ, ಯುವಘಟಕದ ಎಂ. ಹನುಮಂತರಾಯ ಭಾಗವಹಿಸಿದ್ದರು. ಸಭೆಯಲ್ಲಿ ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಇಂದು ಉಜ್ಜಿನಿ ಶ್ರೀ ರಥೋತ್ಸವ
ಇಲ್ಲೊಂದು ಅಪರೂಪದ ದೇವಸ್ಥಾನವಿದೆ. ರಾಜ್ಯದ ಖ್ಯಾತ ಎರಡು ರಾಜವಂಶಸ್ಥರ ಶೈಲಿಯಲ್ಲಿರುವ ಈ ದೇವಸ್ಥಾನವನ್ನು ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಸೂಕ್ಷ್ಮಾತೀ ಸೂಕ್ಷ್ಮ ಕಲೆಗಳನ್ನು ನೋಡುವುದೇ ಅದಮ್ಯ ಅನುಭವ. ಅಂಥ ಕುತೂಹಲ ಮೂಡಿಸುವ ದೇವಾಲಯ ಯಾವುದು ಅಂತೀರಾ...!
ಉಜ್ಜಯಿನಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಮಧ್ಯಪ್ರದೇಶದ ಕಾಳಿಕಾ ಉಜ್ಜೈನಿ. ಆ ಉಜ್ಜೈನಿಗೂ ಬಳ್ಳಾರಿ ಜಿಲ್ಲೆಯಲ್ಲಿರುವ ಈ ಉಜ್ಜಿನಿಗೂ ಏನು ಸಂಬಂಧ ಎನ್ನುವ ಪಶ್ನೆ ಎಲ್ಲರನ್ನು ಕಾಡುವುದು ಸಾಮಾನ್ಯ. ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮಪೀಠ ಮೊದಲು ಮಧ್ಯಪ್ರದೇಶದ ಕಾಳಿಕಾ ಉಜ್ಜೈನಿಯಲ್ಲಿಯೇ ಇತ್ತು. 10ನೇ ಶತಮಾನದಲ್ಲಿ ಅಲ್ಲಿಯ ಉಜ್ಜಯಿನಿ ಜಗದ್ಗುರು ಶಂಭುಮುನಿ ಶಿವಾಚಾರ್ಯರು ಪೀಠಾಧ್ಯಕ್ಷರಾಗಿದ್ದಾಗ ಅಲ್ಲಿಯ ಜೈನ ಧರ್ಮದ ರಾಜ ವೀರಸೇನ ಉಜ್ಜಯಿನಿ ಪೀಠಕ್ಕೆ ತೊಂದರೆ ನೀಡುತ್ತಿದ್ದರು. ಕೊನೆಗೆ ರಾಜ ವೀರಸೇನ ವೀರಶೈವರ ಮೇಲೆ ಯುದ್ಧ ಸಾರಿದ, ಯುದ್ದದಲ್ಲಿ ವೀರಶೈವರು ಗೆದ್ದರೂ ಉಜ್ಜೈನಿ ಪೀಠದ ಆಗಿನ ಜಗದ್ಗುರುಗಳು ಸಾವು-ನೋವು ನೋಡಿ ಬೇಸತ್ತು ತಮ್ಮ ಶಿಷ್ಯ ಮರಳರಾಧ್ಯರಿಗೆ ಪಟ್ಟಾಧಿಕಾರ ನೀಡಿ ಲಿಂಗೈಕ್ಯರಾದರು. ಅಲ್ಲಿಂದ ಶ್ರೀ ಮರುಳಾರಾಧ್ಯರು ಶಾಂತಿ ಅರಸಿ ದೇಶಾದ್ಯಂತ ಸಂಚರಿಸಿ ಕೊನೆಗೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಈಗಿನ ಉಜ್ಜಿನಿಯಲ್ಲಿ ಪೀಠ ಸ್ಥಾಪಿಸಿದರು ಎಂಬ ಹಿನ್ನೆಲೆ ಇದೆ.
ಮಿಶ್ರ ಶೈಲಿ: ಚಾಲುಕ್ಯ ಅರಸ 6ನೇ ವಿಕ್ರಮಾದಿತ್ಯ ಶ್ರೀ ಮರುಳಸಿದ್ಧೇಶ್ವರ ದೇವಾಲಯ ನಿರ್ಮಿಸಿದನೆಂದು ಶಾಸನಗಳಿಂದ ತಿಳಿದು ಬರುತ್ತಿದ್ದು, ಈತನು ಹೊಯ್ಸಳರೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದರಿಂದ ಈ ನೆನಪಿಗಾಗಿ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನವನ್ನು ಚಾಲುಕ್ಯ ಮತ್ತು ಹೊಯ್ಸಳ ಮಿಶ್ರ ಶೈಲಿಯಲ್ಲಿ 11ನೇ ಶತಮಾನದಲ್ಲಿ ನಿರ್ಮಿಸಿದ್ದಾಗಿ ಇತಿಹಾಸದಿಂದ ತಿಳಿದು ಬಂದಿದೆ.
ದೇವಾಲಯದೊಳಗೆ ಕಲ್ಲಿನಲ್ಲಿ ಕೆತ್ತಿರುವ ಸಹಸ್ರದಳ ಕಮಲ, ಕಂಬಗಳಲ್ಲಿ ಕೆತ್ತನೆಯ ಸೂಕ್ಷ್ಮತೆಯ ಕಲೆ, ದೇವಾಲಯದ ಮುಂದಿರುವ ಲಕ್ಷ್ಮಿ ಧ್ಯಾನದಲ್ಲಿ ಕುಳಿತಿರುವ ಶಿಲ್ಪ, ಅಂಕಳೆ ಬಸವಣ್ಣ, ತಂಗಾಳಿ ಗೋಪುರ, ಎಲ್ಲದಕ್ಕಿಂತ ಹೆಚ್ಚಾಗಿ ಗರ್ಭಗುಡಿ ಮೇಲಿರುವ ಬಳಪದ ಕಲ್ಲಿನಿಂದ ಕೆತ್ತಿರುವ ಸುಂದರ ಶಿಖರ ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತವೆ.
ಧರ್ಮ ಸಂಬಂಧಿ ವ್ಯಾಜ್ಯ ಪರಿಹಾರ: ಈ ದೇವಾಲಯ ಪಕ್ಕದಲ್ಲಿರುವ ಸದ್ಧರ್ಮಪೀಠದ ಜಗದ್ಗುರುಗಳ ಮಠ, ಮಠದ ಬಾಗಿಲಿನಲ್ಲಿರುವ ಸೂಕ್ಷ್ಮಾತಿ ಸೂಕ್ಷ್ಮ ಕಾಷ್ಟ ಕಲೆಯಂತೂ ಬೆರಗುಗೊಳಿಸದೇ ಇರಲಾರದು. ಗೋ ಶಾಲೆ, ಸದ್ಧರ್ಮ ನ್ಯಾಯಾಲಯ, ನಿತ್ಯಾನ್ನ ದಾಸೋಹ ಕೇಂದ್ರ ಸದ್ಧರ್ಮಪೀಠದ ಪರಂಪರೆ ಎತ್ತಿ ಹಿಡಿಯುತ್ತದೆ. ಉಜ್ಜಯಿನಿ ಪೀಠದಲ್ಲಿ ನ್ಯಾಯಲಯವೂ ಇತ್ತು. ಇದಕ್ಕೆ ಬ್ರಿಟೀಷರೇ ತಲೆಬಾಗುತ್ತಿದ್ದರು ಧರ್ಮಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು. ಉಜ್ಜಯಿನಿ ಪೀಠದ ನ್ಯಾಯಾಲಯ ನೀಡಿದ ತೀರ್ಪುಗಳನ್ನು ಈಗಿನ ಕೋರ್ಟ್ಗಳು ಮಾನ್ಯ ಮಾಡಿದ ಹತ್ತು ಹಲವು ಉದಾಹರಣೆಗಳಿವೆ.
ಉಜ್ಜಯಿನಿ ಪೀಠಕ್ಕೂ, ಕೂಡ್ಲಿಗಿ ತಾಲೂಕಿನ ಜರ್ಮಲಿ ಪಾಳೇಗಾರರಿಗೂ ಉತ್ತಮ ಬಾಂಧವ್ಯವಿದ್ದು, ಒಮ್ಮೆ ಜರ್ಮಲಿ ಪಾಳೇಗಾರರು ತಪ್ಪಾಗಿ ನಡೆದುಕೊಂಡಾಗ ಮಾಡಿದ ತಪ್ಪಿಗೆ ಆಗಿನ ಜಗದ್ಗುರು ಶಾಪ ಕೊಟ್ಟಿದ್ದರು. ಶಾಪ ಪರಿಹಾರವಾಗಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರಕ್ಕೆ ಕಪ್ಪ ಕಾಣಿಕೆಯಾಗಿ ತೈಲ ಎರೆಯಿರಿ ಎಂದು ಆಜ್ಞೆ ಇತ್ತರಂತೆ ಅಂದಿನಿಂದ ಇಂದಿನವರೆಗೂ ಜರ್ಮಲಿ ರಾಜರ ವಂಶಸ್ಥರು ಪ್ರತಿವರ್ಷ ನಡೆಯುವ ಶಿಖರಕ್ಕೆ ತೈಲ ಎರೆಯುವ ಅಪರೂಪದ ಆಚರಣೆಯನ್ನೂ ಇಲ್ಲಿ ಕಾಣಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

