ಮಳೆಗೆ ಮನೆ, ಬೆಳೆ ಹಾನಿ: ಭಾರಿ ನಷ್ಟ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 9
ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8 ಗಂಟೆ ವರೆಗೆ ಜಿಲ್ಲೆಯಲ್ಲಿ ಸರಾಸರಿ 56.77 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸುರಿದ ಮಳೆಗೆ ಪ್ರಾಣಹಾನಿ ಸಂಭವಿಸಿಲ್ಲ, 10 ಗುಡಿಸಲು, 17 ಮನೆಗಳು ಹಾಳಾಗಿವೆ. ಹಂಪಿಯಲ್ಲಿ 2.42 ಎಕರೆ ಪ್ರದೇಶದಲ್ಲಿ ಬಾಳೆ ತೋಟ ಹಾನಿಯಾಗಿದ್ದು, ಒಟ್ಟಾರೆ ರು. 3.66 ಲಕ್ಷ ಹಾನಿಯಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಗುರುವಾರ ಸಂಜೆ, ಶುಕ್ರವಾರ ರಾತ್ರಿ, ಬೆಳಗಿನ ಜಾವ ಉತ್ತಮ ಮಳೆ ಸುರಿದಿದ್ದು, ಈ ವರ್ಷದಲ್ಲಿ ಉತ್ತಮ ಮಳೆ ಇದಾಗಿದೆ. ಸಂಡೂರು ತಾಲೂಕಿನಗಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಸಿರುಗುಪ್ಪ ತಾಲೂಕಿನಲ್ಲಿ ಕಡಿಮೆ ಮಳೆಯಾಗಿದೆ. ಸಂಡೂರು ತಾಲೂಕಿನಲ್ಲಿ 114 ಮಿಮೀ, ಬಳ್ಳಾರಿ ತಾಲೂಕು- 36.4 ಮಿಮೀ, ಹಡಗಲಿ ತಾಲೂಕು 58.2 ಮಿಮೀ, ಹಗರಿಬೊಮ್ಮನಹಳ್ಳಿ ತಾಲೂಕು- 49.4 ಮಿಮೀ, ಹೊಸಪೇಟೆ ತಾಲೂಕು 74.4 ಮಿಮೀ, ಕೂಡ್ಲಿಗಿ ತಾಲೂಕು- 41.2 ಮಿಮೀ, ಸಿರುಗುಪ್ಪ ತಾಲೂಕು- 23.8 ಮಿಮೀ ಮಳೆಯಾಗಿದೆ. ಹೊಸಪೇಟೆ ತಾಲೂಕಿನ ಹಂಪಿ ವ್ಯಾಪ್ತಿಯಲ್ಲಿ 2.42 ಹೆಕ್ಟೇರ್ ಪ್ರದೇಶದ ಬಾಳೆ ಬೆಳೆ ಹಾಳಾಗಿ ರು. 2.50 ಲಕ್ಷ ನಷ್ಟವಾಗಿದೆ. ಬಳ್ಳಾರಿ ಗೆಣಿಕೆಹಾಳ್ ಗ್ರಾಮದಲ್ಲಿ 7 ಗುಡಿಸಲುಗಳಿಗೆ ಹಾನಿಯಾಗಿ ರು. 33 ಸಾವಿರ ನಷ್ಟವಾಗಿದೆ. ಹೂವಿನ ಹಡಗಲಿ ತಾಲೂಕಿನ 63 ತಿಮ್ಮಾಲಾಪುರದಲ್ಲಿ 3 ಮನೆಗಳು, ಹಡಗಲಿಯಲ್ಲಿ 3 ಮನೆಗಳು, ದಾಸರಹಳ್ಳಿಯಲ್ಲಿ 6 ಮನೆಗಳು, ಜಿ.ಪಿ. ತಾಂಡಾ ನಂ. 2ರಲ್ಲಿ ಒಂದು ಮನೆಗೆ ಹಾನಿಯಾಗಿ ರು. 33 ಸಾವಿರ ರು. ನಷ್ಟವಾಗಿದೆ, ಕೂಡ್ಲಿಗಿ ತಾಲೂಕಿನ ಹರವಿಡಿ ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿ ರು. 25 ಸಾವಿರ ನಷ್ಟವಾಗಿದೆ.
12 ತಾಸು ಮಳೆ: ಮನೆಗಳಿಗೆ ನುಗ್ಗಿದ ನೀರು
ಕನ್ನಡಪ್ರಭ ವಾರ್ತೆ, ಕಂಪ್ಲಿ, ಮೇ 9
ಪಟ್ಟಣ ಸೇರಿದಂತೆ ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಸುರಿದ 55.3 ಮಿಮೀ ಮಳೆ ಕಾದ ಭೂಮಿಗೆ ತಂಪೆರೆದಿದೆ.
ಗುರುವಾರ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದ್ದು, ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಕಂಪ್ಲಿ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ನಷ್ಟ ಮಾಡಿದೆ. 12 ತಾಸಿಗೂ ಹೆಚ್ಚು ಕಾಲ ಸುರಿದ ಮಳೆಗೆ ಪಟ್ಟಣದ ತಗ್ಗು ಪ್ರದೇಶದ ಕೆಲವು ಮನೆ, ಗುಡಿಸಲುಗಳಲ್ಲಿ ನೀರು ನುಗ್ಗಿದೆ.
ಸ್ಥಳೀಯ 9ನೇ ವಾರ್ಡ್ನಲ್ಲಿ ಮಳೆ ನೀರು ಚರಂಡಿಯಿಂದ ಮುಂದೆ ಸಾಗದೆ ಅಕ್ಕ-ಪಕ್ಕದ ಮನೆ, ಗುಡಿಸಲುಗಳಿಗೆ ನುಗ್ಗಿ ನಿವಾಸಿಗಳು ಅಹೋರಾತ್ರಿ ಜಾಗರಣೆ ಮಾಡುವ ಸ್ಥಿತಿ ತಂದಿದೆ. ವಾರ್ಡ್ನ ಪುರಸಭೆ ಸದಸ್ಯ ಮರೆಣ್ಣ ಬೆಳಗ್ಗೆ 4 ಗಂಟೆಗೆ ಜೆಸಿಬಿಯಿಂದ ಚರಂಡಿಯಲ್ಲಿನ ತ್ಯಾಜ್ಯ ತೆರವುಗೊಳಿಸಿ, ಮಳೆ ನೀರನ್ನು ಮುಂದೆ ಸಾಗುವಂತೆ ಮಾಡಿದ್ದಾರೆ. ಪುರಸಭೆ ಪೌರಕಾರ್ಮಿಕರು ಬಂದು ಚರಂಡಿ ದುರಸ್ತಿಗೊಳಿಸಿದರು.
ಇಲ್ಲಿನ ಚಂದ್ರಕಲಾ ಚಲನಚಿತ್ರ ಮಂದಿರದ ಎದುರಿನ ತಗ್ಗು ಪ್ರದೇಶವೊಂದರಲ್ಲಿ ವಾಸಿಸುತ್ತಿದ್ದ 13 ಕುಟುಂಬಗಳ ಗುಡಿಸಲುಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ನಿದ್ರೆ ಇಲ್ಲದೆ ಪರಿತಪಿಸಿದರು. ರಾತ್ರಿ ಇಡಿ ಅಲ್ಲಿನ ಕುಟುಂಬಗಳು ಮಳೆ-ಚಳಿ-ಗಾಳಿಗೆ ನಲುಗಿದ್ದಾರೆ.
ಸೂಕ್ತ ಬೆಂಬಲ ಬೆಲೆಯಿಲ್ಲದೆ ಪಟ್ಟಣದ ಎಪಿಎಂಸಿ ಸೇರಿದಂತೆ ಅನೇಕ ಭಾಗಗಳಲ್ಲಿ ರೈತರು ಹಾಕಿದ್ದ ಬತ್ತದ ರಾಶಿಗಳು ಮಳೆ ನೀರಿಗೆ ತೊಯ್ದಿವೆ. ಅದರಿಂದ ಬತ್ತದ ಬೆಲೆ ಕುಸಿತವಾಗಲಿದೆ ಎಂಬುದು ರೈತರು ಅಳಲು.
ಮುಂಗಾರು ಮಳೆಗಳಲ್ಲಿ ಎರಡನೇ ಮಳೆಯಾದ ಭರಣಿ ಸುರಿಯುವುದು ತೀರಾ ಅಪರೂಪ. ಯಾರೂ ನಿರೀಕ್ಷಿಸದ ಈ ಮಳೆ ಈ ವರ್ಷ ಬಂದು ಕೆಲವರಿಗೆ ಸಂತಸ ಮೂಡಿಸಿದರೆ, ಇನ್ನೂ ಕೆಲವರಿಗೆ ತೀವ್ರ ತೊಂದರೆ ಉಂಟು ಮಾಡಿತು. ಕಂಪ್ಲಿ ಸೇರಿದಂತೆ ಈ ಭಾಗದ ಹಳ್ಳಿಗಳ ರಸ್ತೆಯ ತಗ್ಗು ಗುಂಡಿಗಳು ಕೆರೆಗಳಂತಾಗಿ ಜನರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದವು.
ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು. ಬಹುತೇಕ ಭಾಗಗಳಲ್ಲಿ ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಮಿನಿ ಹೊಂಡದಂತಾಗಿದ್ದು, ಶಾಲೆ ಮೈದಾನಗಳು ಮಳೆ ನೀರಿನಿಂದ ಆವೃತವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

