ಬಳ್ಳಾರಿ

ಪರಂಪರೆ ಪಟ್ಟಿಗೆ ಉಜ್ಜಿನಿ ಪೀಠ ಸೇರಿಸಿ: ಸ್ವಾಮೀಜಿ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮೇ 9
ಆಧ್ಯಾತ್ಮಿಕ ಮತ್ತು ಐತಿಹಾಸಿಕ ತಾಣವಾದ ಉಜ್ಜಿನಿ ಸದ್ಧರ್ಮ ಪೀಠವನ್ನು ಪರಂಪರೆಯ ಪಟ್ಟಿಯಲ್ಲಿ ಸರ್ಕಾರ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು. ಈ ಮೂಲಕ ರಾಜ್ಯದಲ್ಲಿರುವ ಪಂಚಪೀಠಗಳ ಕ್ಷೇತ್ರಗಳಿಗೆ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳುವತ್ತ ಸರ್ಕಾರ ಮುಂದಾಗಬೇಕು ಎಂದು ಕಾಶೀ ಜ್ಞಾನಪೀಠದ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಸಮೀಪದ ಉಜ್ಜಿನಿ ಸದ್ಧರ್ಮ ಪೀಠದ ಆರಾಧ್ಯದೈವ ಶ್ರೀ ಗುರು ಮರುಳಸಿದ್ಧೇಶ್ವರ ಸ್ವಾಮಿಯ ಜಾತ್ರ್ಯೋತ್ಸವದ ಐದನೇ ದಿನ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಆಶೀರ್ವದಿಸಿದ ಜಗದ್ಗುರುಗಳು, ಮಧ್ಯಪ್ರದೇಶದಲ್ಲಿರುವ ಉಜ್ಜಯಿನಿ ಸದ್ಧರ್ಮ ಪೀಠದ ಮೂಲ ಪೀಠವಾಗಿದ್ದು, ಕಾಲಾನಂತರದಲ್ಲಿ ಇದು ರಾಜ್ಯದ ಉಜ್ಜಿನಿಗೆ ಸ್ಥಳಾಂತರಗೊಂಡು ಅತ್ಯದ್ಭುತವಾಗಿ ಬೆಳವಣಿಗೆ ಕಾಣಲಾರಂಭಿಸಿದೆ. ಇದಕ್ಕೆ ಹಾಲಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಬಹುಬಗೆಯ ಕರ್ತೃತ್ವ ಸೇವೆ ಕಾರಣ ಎಂದು ಹೇಳಿದರು.
ಸತಿಪತಿಗಳು ಜೀವನದಲ್ಲಿ ಯಾವುದೇ ಹಂತದಲ್ಲಿ ಮನಸ್ತಾಪ ಮಾಡಿಕೊಳ್ಳದೇ ಸುಖೀ ಜೀವನ ಸಾಗಿಸುವ ನಿಟ್ಟಿನತ್ತ ತೊಡಗಿಸಿಕೊಳ್ಳಬೇಕು ಎಂದರು.
ಉಜ್ಜಿನಿ ಸದ್ಧರ್ಮಪೀಠದ ಜಗದ್ಗುರು ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಉಜ್ಜಿನಿ ಸದ್ಧರ್ಮ ಪೀಠ ಸೇರಿದಂತೆ ಪಂಚಪೀಠಗಳು ಸದಾ ಇತಿಹಾಸ ಬದ್ಧ ಕಾರ್ಯವೆಸಗುತ್ತಿವೆ ಎಂದ ಅವರು ಕೇವಲ ಪ್ರಚಾರಕ್ಕಾಗಿ ಸಮಾಜ ಸೇವೆ ಮಾಡದೇ ನಿರಂತರ ಸೇವೆ ಮಾಡುವ ಮೂಲಕ ರಾಜ್ಯದ ಜನತೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೀಠಗಳು ಸದಾ ತೊಡಗಿಸಿಕೊಂಡಿವೆ ಎಂದರು. ಸಾಮೂಹಿಕ ವಿವಾಹ ಸಮಾರಂಭದಲ್ಲಿ 42 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ವಕೀಲ ಎಂ.ಎಂ.ಜೆ. ಸ್ವರೂಪಾನಂದ, ರಾಜ್ಯ ಬೀಜ ನಿಗಮ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಮಾತನಾಡಿ, ಉಜ್ಜಿನಿ ಪೀಠದಲ್ಲಿನ ಕಾರ್ಯಗಳಿಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು. ಮರಿಯಮ್ಮನಹಳ್ಳಿ, ಮುಷ್ಟೂರು, ಕಲಿಕೇರಿ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ದಾನಿ ಸುರೇಶ್ ಬಾಬು, ನಿವೃತ್ತ ಶಿಕ್ಷಕ ಚನ್ನವೀರಸ್ವಾಮಿ, ಬಸವರಾಜ್, ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥಗೌಡ, ಪೀಠದ ವ್ಯವಸ್ಥಾಪಕ ಲಿಂಗಶೆಟ್ಟಿ ಮರುಳಸಿದ್ದಪ್ಪ, ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.