ಸಿಐಡಿ ಅಧಿಕಾರಿಗಳಿಗೇ ಬಂಧನ ಭೀತಿ!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 9
ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿ ವೈದ್ಯನಿಗೆ ಬೇಡಿ ಹಾಕಿದ್ದು ಸಿಐಡಿ ಅಧಿಕಾರಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಸಿಐಡಿ ಅಧಿಕಾರಿಗಳು ಬೇಡಿ ಹಾಕಿ ವಿಮ್ಸ್ಗೆ ಕರೆದುಕೊಂಡು ಹೋಗಿದ್ದು, ತಮಗೆ ಅವಮಾನವಾಗಿದೆ ಎಂದು ಈ ವೈದ್ಯರು ನೀಡಿದ ಖಾಸಗಿ ದೂರನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ. ಇದೇ ವೇಳೆ, ದೂರನ್ನು ರದ್ದು (ಸ್ಕ್ವಾಷ್) ಮಾಡುವಂತೆ ಸಿಐಡಿ ಅಧಿಕಾರಿಗಳು ಧಾರವಾಡ ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡಿದೆ.
ಈ ಪ್ರಕರಣದಲ್ಲಿ ಆರೋಪಿಗಿದ್ದ ಕಾನೂನು ಜ್ಞಾನ ಈಗ ಅಧಿಕಾರಿಗಳಿಗೇ ಸಂಕಷ್ಟ ತಂದೊಡ್ಡಿದೆ. ವೈದ್ಯ ಆರೋಪಿಯಾಗಿದ್ದರೂ ಅವರಿಗೆ ಬೇಡಿ ಹಾಕಿದ್ದು, ಪಾಠ ಹೇಳುವ ಹಾಗೂ ಕೆಲಸ ಮಾಡುವ ಆಸ್ಪತ್ರೆಗೆ ಕರೆದೊಯ್ದಿದ್ದು ಗಂಭೀರ ವಿಚಾರವಾಗಿ ಬದಲಾಗಿದೆ.
ಏನಿದು ಪ್ರಕರಣ?: 2010ರಲ್ಲಿ ವಿಮ್ಸ್ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಡಾ ವಿನಾಯಕ ಪ್ರಸನ್ನ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ವಿಚಾರಣೆ ಕೈಗೊಂಡ ಮೇಲೆ ವೈದ್ಯ ವಿನಾಯಕ ಪ್ರಸನ್ನ ನ್ಯಾಯಾಲಯದ ಮುಂದೆ ಶರಣಾದರು. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಾಧೀಶರ ಅನುಮತಿ ಪಡೆಯದೆ ವೈದ್ಯರಿಗೆ ಬೇಡಿ ಹಾಕಿದ್ದು, ಈಗ ಸಿಐಡಿ ಅಧಿಕಾರಿಗಳೇ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ.
ಸಿಐಡಿ ಅಧಿಕಾರಿಗಳ ವಿರುದ್ಧವೇ ಖಾಸಗಿ ದೂರು: ನ. 5, 2011ರಂದು ಸಿಐಡಿ ಅಧಿಕಾರಿಗಳು ಡಾ ವಿನಾಯಕ ಪ್ರಸನ್ನ ಅವರನ್ನು ವಿಚಾರಣೆ, ತನಿಖೆಯ ಉದ್ದೇಶದಿಂದಾಗಿ ವಿಮ್ಸ್ಗೆ ( ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ) ಬೇಡಿ ಹಾಕಿ ಕರೆದೊಯ್ದಿದ್ದರು. ಆರೋಪಿಯನ್ನು ವಿಚಾರಣೆ ಮಾಡುವುದು ಸರಿ. ಆದರೆ, ಅನಗತ್ಯವಾಗಿ ಬೇಡಿ ಹಾಕಿ, ಕಾಲೇಜಿಗೆ ಕರೆದೊಯ್ದು ತಮ್ಮ ವಿದ್ಯಾರ್ಥಿಗಳು, ಸಹದ್ಯೋಗಿಗಳು ಹಾಗೂ ಮಾಧ್ಯಮಗಳ ಮುಂದೆ ತೋರಿಸಿದ್ದು ಸರಿಯೇ? ಇದರಿಂದಾಗಿ ಮಾನಸಿಕವಾಗಿ ನೊಂದಿರುವ ಡಾ ವಿನಾಯಕ ಪ್ರಸನ್ನ ಅವರು ಸಿಡಿಐ ಡಿವೈಎಸ್ಪಿ ಎನ್. ಚಲಪತಿ, ಇನ್ಸ್ಪೆಕ್ಟರ್ ಎಚ್.ಇ. ಮಂಜಪ್ಪ, ಜಗನ್ನಾಥ್ ರೈ, ಚಾಲಕ ಮಂಜುನಾಥ್, ಪೇದೆಗಳಾದ ಬಸವರಾಜ್, ರಂಗನಾಥ್ ಸೇರಿ ಏಳು ಜನರ ಮೇಲೆ ನ್ಯಾಯವಾದಿ ಆರ್. ಪಾಂಡು ಅವರ ಮೂಲಕ ಬಳ್ಳಾರಿಯ 2ನೇ ಅಡಿಷನಲ್ ಸಿವಿಲ್ ಜಡ್ಜ್ (ಜೂ.ಡಿ) ಅಂಡ್ ಜೆಎಂಎಫ್ಸಿ ಕೋರ್ಟ್ನಲ್ಲಿ ಖಾಸಗಿ ದೂರು ನೀಡಿದ್ದರು. ನ್ಯಾಯಾಧೀಶೆ ಜರೀನಾ ಬೇಗಂ ದೂರನ್ನು ಪರಿಗಣಿಸಿ, ಸಿಐಡಿ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದ್ದರು.
ಸಿಐಡಿಗೆ ಹಿನ್ನಡೆ
ಬಳ್ಳಾರಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಚಲಪತಿ ಮತ್ತಿತರ ಅಧಿಕಾರಿಗಳು ಧಾರವಾಡ ಹೈಕೋರ್ಟ್ ಪೀಠದಲ್ಲಿ ವೈದ್ಯ ವಿನಾಯಕ ಪ್ರಸನ್ನ ಅವರ ದೂರನ್ನು ರದ್ದುಮಾಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಿಐಡಿ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಕೆಳ ನ್ಯಾಯಾಲಯದಲ್ಲಿ ಟ್ರಯಲ್ಗೆ (ಸಾಕ್ಷಿ ವಿಚಾರಣೆ) ಹೋಗುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಕರಣ ರದ್ದುಪಡಿಸಲು ಸಿಐಡಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರೋ ಅಥವಾ ಕೆಳ ನ್ಯಾಯಾಲಯದಲ್ಲಿ ಟ್ರಯಲ್ಗೆ ಮುಂದಾಗುತ್ತಾರೋ ಎಂಬುದು ಕಾದು ನೋಡಬೇಕಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

