ಬಳ್ಳಾರಿ

ಬಳ್ಳಾರಿ ಪಾಲಿಕೆ ಸದಸ್ಯೆ ಮನೆ ತೆರವು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 11
ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ನಿವೇಶನವನ್ನು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿದ್ದಾರೆ ಎಂದು ತಾಳೂರು ರಸ್ತೆಯಲ್ಲಿರುವ 22ನೇ ವಾರ್ಡ್‌ನ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಡಿ. ಲಕ್ಷ್ಮಿ ನಾರಾಯಣಪ್ಪ ಅವರದೂ ಸೇರಿದಂತೆ ಮೂರು ಮನೆಗಳನ್ನು ಪೊಲೀಸ್ ಭದ್ರತೆಯಲ್ಲಿ ಸೋಮವಾರ ತೆರವುಗೊಳಿಸಲಾಯಿತು.
ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದಂತೆ 12 ಸೆಂಟ್ಸ್ ನಿವೇಶನ ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಬಳ್ಳಾರಿ ಉಪವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ನೇತೃತ್ವದಲ್ಲಿ ಕಟ್ಟಡ ತೆರವುಗೊಳಿಸಲಾಯಿತು.
ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ನ್ಯಾಯಾಂಗ ಇಲಾಖೆಯ ಜಾಗೆಯಲ್ಲಿ ಈ ಮನೆ ಕಟ್ಟಲಾಗಿತ್ತು. ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದ್ದು, ಈ ಕುರಿತಾಗಿ ಡಿ. ನಾರಾಯಣಪ್ಪ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈಗ ತಡೆಯಾಜ್ಞೆ ತೆರವುಗೊಂಡಿದ್ದು, ಮನೆ ತೆಗೆಯಬೇಕೆಂದು ನಾರಾಯಣಪ್ಪ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೂ ಸ್ವಯಂ ಪ್ರೇರಿತವಾಗಿ ತೆರವು ಮಾಡದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ತೆರವು ಕಾರ್ಯಾಚರಣೆಗೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟಿಎಸ್ ನಂ. 11ರಲ್ಲಿರುವ ನ್ಯಾಯಾಂಗ ಇಲಾಖೆಯ ನಿವೇಶನ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ಕಟ್ಟಲಾಗಿತ್ತು.
ವ್ಯಾಜ್ಯ ಹೈಕೋರ್ಟಲ್ಲಿದೆ: ನಾವು ನ್ಯಾಯಯುತವಾಗಿ ನಿವೇಶನ ಖರೀದಿಸಿದ್ದೇವೆ. ಬುಡಾ ಹಾಗೂ ಮಹಾನಗರ ಪಾಲಿಕೆಯ ಪರವಾನಿಗೆ ಪಡೆದು, ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡು ಮನೆ ಕಟ್ಟಿಸಿದ್ದೇನೆ. ಯಾವುದೇ ಜಾಗವನ್ನು ಅತಿಕ್ರಮಣ ಮಾಡಿಲ್ಲ. ಈ ಕುರಿತಾಗಿ ವಾಜ್ಯ ಹೈಕೋರ್ಟ್‌ನಲ್ಲಿದೆ. ಆದರೂ ತೆರವುಗೊಳಿಸುವುದು ಸರಿಯಲ್ಲ ಎಂದು ನಾರಾಯಣಪ್ಪ ಕಡೆಯವರು ವಾದಿಸಿದರು. ನ್ಯಾಯವಾದಿಗಳೂ ಅಧಿಕಾರಿಗಳಿಗೆ ಮನವಿ ಮಾಡಿದರು. ಹೀಗಿದ್ದರೂ. ನ್ಯಾಯಾಲಯದ ಆದೇಶದಂತೆ ತೆರವು ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿ, ಪೊಲೀಸ್ ಭದ್ರತೆಯಲ್ಲಿ, 4 ಜೆಸಿಬಿ ಬಳಸಿ, ಮನೆಗಳನ್ನು ತೆರವು ಮಾಡಿದರು.
ಡಿ. ನಾರಾಯಣಪ್ಪ ಮಾತನಾಡಿ, ತಾವು ಯಾವುದೇ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಿಲ್ಲ. 12 ವರ್ಷದ ಹಿಂದೆ 30್ಢ40 ನಿವೇಶನ ಖರೀದಿ ಮಾಡಲಾಗಿತ್ತು. ದಾಖಲೆಗಳಿವೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಬಿ.ಎಂ. ಎರ್ರಿಸ್ವಾಮಿ ಅವರಿಂದ ನಿವೇಶನ ಖರೀದಿಸಿದ್ದೆ. ನ್ಯಾಯಾಂಗ ಇಲಾಖೆಯದ್ದು ಟಿ.ಎಸ್. 11, ನಮ್ಮದು ಟಿ.ಎಸ್. 7 ಆಗಿತ್ತು. ನಾವು ಊರಿಗೆ ಹೋಗಿದ್ದಾಗ ನೋಟಿಸ್ ನೀಡಿದ್ದಾರೆ. ಹೀಗಾಗಿ, ಶನಿವಾರ-ಭಾನುವಾರ ಅಧಿಕಾರಿಗಳ ಬಳಿಗೆ ತೆರಳಿ, 8 ದಿನಗಳ ಕಾಲಾವಕಾಶ ಕೇಳಲಾಗಿತ್ತು. ಆದರೂ ಏಕಾಏಕಿ ತೆರವು ಮಾಡಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿ ಉಪವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ಮಾತನಾಡಿ, ನ್ಯಾಯಾಂಗ ಆದೇಶದ ಹಿನ್ನೆಲೆಯಲ್ಲಿ ಅತಿಕ್ರಮಣ ಮಾಡಿರುವ 12 ಸೆಂಟ್ಸ್ ತೆರವುಗೊಳಿಸಲಾಗುತ್ತಿದೆ. ಈ ಬಗ್ಗೆ ಅಂತಿಮ ನೋಟಿಸ್ ನೀಡಲಾಗಿತ್ತು. ತೆರವಿಗೆ ಸಮಯ ನಿಗದಿಪಡಿಸಲಾಗಿತ್ತು. ಆದದೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಬೇಕಾಯಿತು ಎಂದರು.
ಡಿವೈಎಸ್ಪಿ ಮುರುಗಣ್ಣನವರ ಮಾತನಾಡಿ, ಗಲಾಟೆ ಸಂಭವಿಸಿದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. 3 ಡಿಎಆರ್ ತುಕಡಿ, 1ಡಿವೈಎಸ್ಪಿ, 1 ಇನ್‌ಸ್ಪೆಕ್ಟರ್, 3 ಪಿಎಸ್‌ಐ, 20 ಎಚ್‌ಸಿ, 35 ಪಿಸಿಗಳನ್ನು ನಿಯೋಜಿಸಲಾಗಿದ್ದು, ವಿಡಿಯೋ ಕ್ಯಾಮರಾ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.