ಬಳ್ಳಾರಿ

ಹಾಲು ಒಕ್ಕೂಟಕ್ಕೆ 24ರಂದು ಚುನಾವಣೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 12
ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಮೇ 24ರಂದು ಚುನಾವಣೆ ನಡೆಯಲಿದೆ. ಮೂರು ಜಿಲ್ಲೆಗಳಲ್ಲಿ 12 ಸದಸ್ಯರ ಸ್ಥಾನಗಳಿಗೆ ಪೈಪೋಟಿ ನಡೆಯುತ್ತಿದ್ದು, ಅದರಲ್ಲಿ 9 ಸಾಮಾನ್ಯಕ್ಕೆ ಮೀಸಲಾಗಿದ್ದರೆ, 3 ಮಹಿಳೆಯರಿಗೆ ಮೀಸಲಾಗಿದ್ದು, ಇಲ್ಲಿಯವರೆಗೆ 13 ನಾಮಪತ್ರ ಸಲ್ಲಿಕೆಯಾಗಿದೆ. ಮೇ 24ರಂದು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಚುನಾವಣೆ ನಡೆಯಲಿದೆ.
2014ರಿಂದ 2019ರ ವರೆಗೆ ಆಡಳಿತ ಮಂಡಳಿ ಸದಸ್ಯ ಚುನಾವಣೆಗೆ ಮೇ 8ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೂರು ಜಿಲ್ಲೆಗಳನ್ನೊಳಗೊಂಡು ಒಕ್ಕೂಟಕ್ಕೆ 12 ಸ್ಥಾನಗಳಿದ್ದು, ಅದರಲ್ಲಿ ಪ್ರತಿ ಜಿಲ್ಲೆಗೆ ತಲಾ ನಾಲ್ಕು ಸ್ಥಾನಗಳಿವೆ, 3 ಸಾಮಾನ್ಯ ವರ್ಗಕ್ಕೆ, 1 ಮಹಿಳೆಗೆ ಮೀಸಲಾಗಿದೆ. ಮೇ 16ರ ಮಧ್ಯಾಹ್ನ 3ಕ್ಕೆ ನಾಮಪತ್ರ ಸಲ್ಲಿಸಲು ಕೊನೆ ದಿನ. ಮೇ 17ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದ್ದು, ಮೇ 18 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನ. ನಾಮಪತ್ರ ಸಲ್ಲಿಸಲು ರಿಟರ್ನಿಂಗ್ ಆಫೀಸರಾಗಿರುವ ಬಳ್ಳಾರಿಯ ಉಪವಿಭಾಗಾಧಿಕಾರಿ ಅನಿರುದ್ಧ ಶ್ರಾವಣ್ ನೇಮಕರಾಗಿದ್ದು, ಇವರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಮೂರು ಜಿಲ್ಲೆಗಳ ಆಕಾಂಕ್ಷಿಗಳು ಇಲ್ಲಿಯೇ ನಾಮಪತ್ರ ಸಲ್ಲಿಸಬೇಕಾಗಿದೆ. ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದಾರೆ.
ರಂಗೇರುತ್ತಿದೆ ಚುನಾವಣೆ: ಮೂರು ಜಿಲ್ಗೆಗಳಲ್ಲಿ 437 ಮತದಾರರಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 102 ಮತದಾರರು, ಕೊಪ್ಪಳದಲ್ಲಿ 137, ಬಳ್ಳಾರಿಯಲ್ಲಿ 198 ಮತದಾರರಿದ್ದಾರೆ. ಇವರು 12 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಹೊಸಪೇಟೆ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೇ 24ರಂದು ಚುನಾವಣೆ ನಡೆಯಲಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಒಕ್ಕೂಟದಲ್ಲಿ ಎಂ. ಸತ್ಯನಾರಾಯಣ ಅವರು ಹಾಲಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತವಾಗಿ ಬಿಜೆಪಿಯ ಜಿ. ಸೋಮಶೇಖರ ರೆಡ್ಡಿ ಅವರು ಒಕ್ಕೂಟದಲ್ಲಿ ಪ್ರಭುತ್ವ ಸಾಧಿಸಿದ್ದು, ಇದೀಗ ಈ ಚುನಾವಣೆಯಲ್ಲಿ ಯಾರು ಪ್ರಾಬಲ್ಯ ಸಾಧಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಕೋಲಾರ, ಮಂಡ್ಯ, ಹಾಸನ, ಶಿವಮೊಗ್ಗ, ಧಾರವಾಡ, ಮೈಸೂರು, ಬೆಂಗಳೂರು ಒಕ್ಕೂಟಗಳಿಗೆ ಚುನಾವಣೆ ನಡೆಯಲಿದೆ. ಬೇರೆ ಬೇರೆ ಹಂತದಲ್ಲಿ ಚುನಾವಣೆ ನಡೆಯಲಿದೆ. ಒಕ್ಕೂಟದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೆಲ ಸ್ಥಾನಗಳಿಗೆ ಅವಿರೋಧ ಆಯ್ಕೆ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಆಕಾಂಕ್ಷಿಗಳು ತೀವ್ರ ಲಾಭಿ ನಡೆಸುತ್ತಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆ ಮಟ್ಟಿಗೆ 4 ಸ್ಥಾನಗಳಿಗೆ ಚುನಾವಣೆ ನಡೆವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.