ಖಾತ್ರಿ ಕೆಲಸಕ್ಕಾಗಿ ಕಾರ್ಮಿಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 22
ತಾಲೂಕಿನ ಅಮರಾಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಕೃಷಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಸ್ಥಳೀಯ ತಾ.ಪಂ. ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಕಚೇರಿ ಎದುರು ಕೆಲಕಾಲ ಧರಣಿ ಕುಳಿತ ಪ್ರತಿಭಟನಾ ನಿರತರು, ಅಮರಾಪುರ ಗ್ರಾ.ಪಂ. ಹಾಗೂ ಪಿಡಿಒ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯಸ್ಥ ಸತ್ಯಬಾಬು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಅಮರಾಪುರ ಗ್ರಾ.ಪಂ. ವ್ಯಾಪ್ತಿಗೆ ಕಕ್ಕಬೇವಿನಹಳ್ಳಿ, ಅಸುಂಡಿ ಗ್ರಾಮಗಳು ಬರಲಿದ್ದು, ಸಾಕಷ್ಟು ಜನರು ಕೆಲಸವಿಲ್ಲದೆ ಗುಳೆ ಹೊರಟಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಕ್ಕೆ ನೂರು ದಿನ ಕೆಲಸ ಕೊಡಬೇಕೆಂಬ ನಿಯಮವಿದ್ದರೂ, ಗ್ರಾ.ಪಂ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿ 20 ದಿನ ಕಳೆದಿದ್ದರೂ, ಕೆಲಸ ನೀಡುತ್ತಿಲ್ಲ. ಕೇಳಲು ಹೋದರೆ, ನಿಮ್ಮ ಸಂಘದ ನಾಯಕರನ್ನೇ ಕೆಲಸ ಕೇಳಿ ಎಂಬ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಆರೋಪಿಸಿದರು.
ಬಳ್ಳಾರಿ ತಾಲೂಕಿನ ಅಮರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕೂಲಿಕಾರರಿದ್ದು, ಅವರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ನೀಡದೇ ವಂಚಿಸಲಾಗುತ್ತಿದೆ. ಕೂಲಿ ಕೆಲಸವಿಲ್ಲದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಕೆಲಸ ಕೇಳಿದರೆ ಅಧಿಕಾರಿಗಳಿಂದ ನಿರ್ಲಕ್ಷ್ಯದ ಉತ್ತರ ಕೇಳಬೇಕಾಗಿದೆ. ದೇಶದಲ್ಲಿನ ಎಲ್ಲ ಗ್ರಾಮಗಳಲ್ಲಿನ ಕೂಲಿಕಾರರಿಗೆ ವರ್ಷದಲ್ಲಿ ನೂರು ದಿನ ಗ್ಯಾರಂಟಿ ಕೆಲಸ ನೀಡಬೇಕೆಂಬ ಮಹತ್ವದ ಕಾಯಿದೆಯನ್ನು ಜಾರಿಗೊಳಿಸುವಲ್ಲಿ ಪಂಚಾಯಿತಿಗಳು ಅಲಕ್ಷ್ಯತನ ತೋರುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಕೂಡಲೇ ಅಮರಾಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಕೃಷಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ವಿವಿಧ ಗ್ರಾಮಗಳ ನಾಗರಾಜ್, ನಾಗಮ್ಮ, ಹುಲಿಗೆಮ್ಮ, ಲಕ್ಷ್ಮಿ, ಯಲ್ಲಪ್ಪ, ಸಣ್ಣರುದ್ರಪ್ಪ, ಎಚ್.ಎರ್ರಿಸ್ವಾಮಿ, ಎಚ್.ಬಸಲಿಂಗಪ್ಪ, ಬಿ.ಜಯರಾಜ, ವುರುಕುಂದಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

