ಬಳ್ಳಾರಿ

ಜೂ. 6ಕ್ಕೆ ಅಶ್ವಿನಿ ಅಂಗಡಿ ವಸತಿ ಶಾಲೆ

Published On :

ಬಳ್ಳಾರಿ: ಅಂಧ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಅಶ್ವಿನಿ ಅಂಗಡಿ ಟ್ರಸ್ಟ್ ಹುಟ್ಟುಹಾಕಿದ್ದು, ಅದರ ಅಡಿಯಲ್ಲಿ 'ಅಂಧ ಮಕ್ಕಳ ಶಿಕ್ಷಣಕ್ಕೆ ಬೆಳಕು ಅಕಾಡೆಮಿ' ಎಂಬ ವಸತಿ ಶಾಲೆಯನ್ನು ಬೆಂಗಳೂರು ಕೋಣನಕುಂಟೆಯ ಸುಪ್ರಜಾನಗರದಲ್ಲಿ ಜೂ. 6ರಂದು ಆರಂಭಿಸಲಾಗುತ್ತಿದೆ ಎಂದು ಗಾರ್ಡನ್ ಬ್ರೌನ್ಸ್ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ತಿಳಿಸಿದ್ದಾರೆ.
ಶುಕ್ರವಾರ ಸ್ವಗ್ರಾಮ ಚೇಳ್ಳಗುರ್ಕಿಯ ಶ್ರೀ ಎರ್ರಿಸ್ವಾಮಿ ದೇವಸ್ಥಾನ ಆವರಣದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಶ್ವಿನಿ ಅಂಗಡಿ ಟ್ರಸ್ಟ್‌ನ್ನು ಜ್ಞಾನಪೀಠ ಪುರಸ್ಕೃತ ಡಾ೤ ಚಂದ್ರಶೇಖರ್ ಕಂಬಾರ, ಬೆಳಕು ಅಕಾಡೆಮಿ ವಸತಿ ಶಾಲೆಯನ್ನು ಶಿಕ್ಷಣ ತಜ್ಞೆ ರಾಧಾ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ವಸತಿ ಶಾಲೆಯಲ್ಲಿ ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಮಹಾದಾಸೆಯಿದೆ. ರಾಜ್ಯದ ಯಾರಾದರೂ, ಅಂಧ ಮಕ್ಕಳನ್ನು ಈ ಶಾಲೆಗೆ ಸೇರಿಸಬಹುದು ಎಂದರು.
ನೃತ್ಯ, ಕರಾಟೆ, ಯೋಗ, ಚಿತ್ರಕಲೆ, ಸಂಗೀತ ಮುಂತಾದ ಯಾವುದೇ ಪ್ರತಿಭೆ ಅವರಲ್ಲಿದ್ದರೆ, ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಶಾಲೆ ಮಾಡುತ್ತದೆ. ನನ್ನಂತೆ ಎಲ್ಲರೂ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಬೇಕೆಂಬ ಉದ್ದೇಶವಿದೆ. ಯುವಶಕ್ತಿಯು ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ತಿಳಿಸಿದರು.
ಬೆಂಗಳೂರು ಮಹಾನಗರದಲ್ಲಿ 15-20 ಅಂಧ ಮಕ್ಕಳ ಶಾಲೆಗಳಿದ್ದು, ಅವುಗಳಿಗಿಂತ ತಮ್ಮ ಶಾಲೆ ಭಿನ್ನವಾಗಿದ್ದು, ಆಧುನಿಕ ಬ್ರೈಲ್ ಲಿಪಿಯ ತಂತ್ರಜ್ಞಾನ ಅಳವಡಿಸುವ ಮೂಲಕ ಅಂಧ ವಿದ್ಯಾರ್ಥಿಗಳು ತಾವೇ ಸ್ವತಃ ಕಂಪ್ಯೂಟರ್‌ನಲ್ಲಿ ಪರೀಕ್ಷೆ ಬರೆಯಬಹುದಾಗಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅನುತ್ತೀರ್ಣಗೊಂಡರೆ ಅಥವಾ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಶಾಲೆಗೆ ರು. 20 ಸಾವಿರದ ಪೀಠೋಪಕರಣ ನೀಡುವುದಾಗಿ ಚೇಳ್ಳಗುರ್ಕಿ ಗ್ರಾಮಸ್ಥರು ಘೋಷಿಸಿದರು. ಅಶ್ವಿನಿ ಅಂಗಡಿ ತಂದೆ ಅಂಗಡಿ ಪ್ರಕಾಶ್, ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಾಳನಗೌಡ, ದಾಸೋಹ ಸೇವಾ ಸಂಘ ಅಧ್ಯಕ್ಷ ವೈ.ಎಸ್. ಎರ್ರೆಣ್ಣ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ವಿರೂಪಾಕ್ಷಗೌಡ, ಕರಿಬಸವನಗೌಡ, ಭೀಮನಗೌಡ, ಎಚ್. ಶಶಿಧರ, ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.