ಬಳ್ಳಾರಿ

ಕುಡಿವ ನೀರಿಗಾಗಿ ಗ್ರಾಮಸ್ಥರ ಗದ್ದಲ

Published On :

ಹಗರಿಬೊಮ್ಮನಹಳ್ಳಿ: ತಾಲೂಕಿನ ಕಿತ್ನೂರು ಗ್ರಾಮದಲ್ಲಿ ಹಲವು ತಿಂಗಳಿನಿಂದ ಉದ್ಭವಿಸಿರುವ ಕುಡಿವ ನೀರಿನ ಸಮಸ್ಯೆಯ ಬಿಸಿ ಶನಿವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಸಾಮಾನ್ಯ ಸಭೆಗೆ ಸಾಕಷ್ಟು ಚುರುಕು ಮೂಡಿಸಿತು.
ನಮ್ಮೂರಿನ ಕುಡಿವ ನೀರಿನ ಸಮಸ್ಯೆಯನ್ನು ನಿವಾರಿಸಿ ಎಂದು ನೂರಾರು ಸಲ ಮನವಿ ಮಾಡಿಕೊಂಡರೂ ನೀವು ನಮ್ಮ ಸಮಸ್ಯೆ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ ಎಂದು ಸಭಾಂಗಣದೊಳಕ್ಕೆ ಬಂದು ಗ್ರಾಮಸ್ಥರು ಏರಿದ ಧ್ವನಿಯಲ್ಲಿ ಗದ್ದಲ ಎಬ್ಬಿಸಿದರು.
ಇದು ತಾಪಂ ಸಾಮಾನ್ಯ ಸಭೆ, ಸಭೆ ಮುಗಿದ ಮೇಲೆ ನಿಮ್ಮ ಸಮಸ್ಯೆ ಬಗ್ಗೆ ಚರ್ಚಿಸೊಣ, ನೀವು ಸಭಾಂಗಣದಿಂದ ಹೊರಗೆ ಹೋಗಿ ಎಂದು ಇಓ ಬಿಎಂಎಸ್ ವೀರಯ್ಯ ಹೇಳಿದ ಮಾತು ಕಿತ್ನೂರು ಗ್ರಾಮಸ್ಥರನ್ನು ಸಿಟ್ಟಿಗೇಳಿಸಿತು. ಈ ವೇಳೆ ಗ್ರಾಮಸ್ಥರು ಮತ್ತು ಇಓ ಮಧ್ಯೆ ಸಾಕಷ್ಟು ಮಾತಿನ ಚಕಮಕಿ ನಡೆಯಿತು.
ಆಯ್ಕೆ ಮಾಡಿದ ಜನರಿಗೆ ನೀರು ಕೊಡಲು ಆಗದಿದ್ದರೆ ನಾವು ಜನಪ್ರತಿನಿಧಿಗಳಾಗಿರುವುದರಲ್ಲಿ ಪ್ರಯೋಜನವಿಲ್ಲ, ಜನರಿಂದ ನಿತ್ಯ ದೂಷಣೆಗೆ ಒಳಗಾಗಿ ಸಾರ್ವಜನಿಕವಾಗಿ ಮುಜುಗರ ಎದುರಿಸುವುದಕ್ಕಿಂತಲೂ ನಮ್ಮ ಸ್ಥಾನಗಳಿಗೆ ನಾವು ರಾಜಿನಾಮೆ ನೀಡುವುದೇ ವಾಸಿ ಎಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ರಾಜಿನಾಮೆ ಪಡೆದುಕೊಳ್ಳಿ ಎಂದು ಗ್ರಾಮದ ಪಂಚಾಯ್ತಿ ಸದಸ್ಯರಾದ ಕೆ. ದುರುಗಪ್ಪ, ಎಸ್.ಸಿ. ಪಾಟೀಲರವರು ಪ್ರಕಾಶ ಹಾಗೂ ತಾಪಂ ಇಓಗೆ ತಾಕೀತುಮಾಡಿದರು.
 ಈ ಸಭೆ ಮುಗಿದಾಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿ ನಿಭಾಯಿಸುತ್ತೇವೆ. ಅಲ್ಲದೆ ಕುಡಿವ ನೀರಿಗೆ ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಸುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಸಮಸ್ಯೆ ಪರಿಹರಿಸಿಕೊಡುವ ಖಚಿತ ಭರವಸೆಯನ್ನು ತಾಪಂ ಇಓ ವೀರಯ್ಯ ಹಾಗೂ ಪಂರಾಇಎಇಇ ಆರ್.ಪ್ರಭು ನೀಡಿದ ಮೇಲೆ ಗ್ರಾಮಸ್ಥರು ತಾಪಂ ಸಭಾಂಗಣದಿಂದ ಹೊರ ನಡೆದರು.
ಗ್ರಾಮದ ಮುಖಂಡರಾದ ಸಿದ್ದಪ್ಪ, ಮಂಜುನಾಥಗೌಡ, ಉಮೇಶ, ಹನುಮಂತಪ್ಪ, ಮಾರುತೇಶ ಸೇರಿ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.