ದಕ್ಷಿಣ ಕನ್ನಡ

ಚತುಷ್ಪಥ ಕಾಮಗಾರಿ ಪೂರ್ತಿಗೂ ಮೊದಲೇ ಸುಂಕ ಸಂಕಟ ಶುರು...

Published On :

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ಪರಿಸರದಲ್ಲಿ ಇದೀಗ ನೋವು-ನಲಿವಿನ ಸನ್ನಿವೇಶ. ಬ್ರಹ್ಮರಕೂಟ್ಲಿನಲ್ಲಿ ಆರಂಭಗೊಂಡ ಟೋಲ್ ಫ್ಲಾಝಾಕ್ಕೆ ಕಳೆದ ಬಾರಿಗಿಂತ ದುಪ್ಪಟ್ಟು ಟೋಲ್ ನೀಡಬೇಕಾದ ನೋವು ಹೆದ್ದಾರಿ ವಾಹನ ಚಾಲಕರಿಗಿದ್ದರೆ, ಕಳೆದ 12 ವರ್ಷಗಳಿಂದ ನಡೆಯುತ್ತಿದ್ದ ಪಾಣೆಮಂಗಳೂರು ಟೋಲ್ ಸ್ಥಗಿತಗೊಂಡಿರುವ ಖುಷಿ ಇನ್ನೊಂದೆಡೆ.
ಏನು ಗೊಂದಲ?: ಸಾಮಾನ್ಯವಾಗಿ ಯಾವುದೇ ಹೆದ್ದಾರಿ, ಸೇತುವೆ ಕಾಮಗಾರಿ ನಡೆದು ಅದು ಜನರ ವಿನಿಯೋಗಕ್ಕೆ ಒದಗಿದ ಬಳಿಕ ಅದರ ಟೋಲ್ ಸಂಗ್ರಹಿಸುವುದು ನಿಯಮ. ಆದರೆ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾ ಇದಕ್ಕೆ ಅಪವಾದ.
ಇನ್ನೂ ಹೆದ್ದಾರಿಯ ಶೇ.20ರಷ್ಟು ಕಾಮಗಾರಿ ಬಾಕಿಯಿರುವಾಗಲೇ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ನಡೆಸುತ್ತಿದೆ. ಆರಂಭದಿಂದಲೂ ಅನೇಕ ಅಡೆತಡೆಗಳನ್ನು  ಎದುರಿಸುತ್ತಾ ಬಂದದ್ದೇ ಸುರತ್ಕಲ್-ಬಿ.ಸಿ.ರೋಡು ಚತುಷ್ಪಥ ಹೆದ್ದಾರಿ ಕಾಮಗಾರಿ ಆಮೆಗತಿಗೆ ಕಾರಣ ಎನ್ನಲಾಗಿದೆ.
ಕಾಮಗಾರಿ ಹಿನ್ನೆಲೆ: ರಾ.ಹೆ. 75ರಲ್ಲಿ ಸುರತ್ಕಲ್ ಎನ್‌ಐಟಿಕೆಯಿಂದ ನಂತೂರು ವರೆಗೆ 17.5 ಕಿ.ಮೀ. ಹಾಗೂ ಬಿ.ಸಿ.ರೋಡ್ ವರೆಗಿನ 19.5 ಕಿ.ಮೀ. ರಸ್ತೆ ಚತುಷ್ಪಥ ಕಾಮಗಾರಿ 2005ರ ಜೂನ್‌ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿ ಒಟ್ಟು 95 ಮೋರಿಗಳು, 15 ಬಾಕ್ಸ್ ಮೋರಿಗಳು, 7 ಫ್ಲೈಓವರ್‌ಗಳು ಹಾಗೂ 5 ಕಿರು ಸೇತುವೆಗಳ ನಿರ್ಮಾಣ ಒಳಗೊಂಡಿತ್ತು.
ಗುತ್ತಿಗೆ ವಹಿಸಿಕೊಂಡ ಇರ್ಕಾನ್ ಸಂಸ್ಥೆಗೆ ಕಾಮಗಾರಿ ಮುಗಿಸಲು ಪ್ರಾಧಿಕಾರ 30 ತಿಂಗಳ ಗಡುವು ನೀಡಿದ್ದು,  ಇದರಂತೆ 2007ರ ಡಿಸೆಂಬರ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.  ಅಂತಿಮವಾಗಿ 7ರ ಪೈಕಿ 5 ಫ್ಲೈಓವರ್‌ಗಳನ್ನು ಮಾತ್ರ ನಿರ್ಮಿಸಬೇಕಾಗಿದ್ದು, ಯಾವುದೂ ಕೂಡ ಪೂರ್ಣಗೊಂಡ ಸ್ಥಿತಿಯಲ್ಲಿ ಇಲ್ಲ.
ವಿಪರ್ಯಾಸವೆಂದರೆ ಟೋಲ್ ಸಂಗ್ರಹಿಸುವ ಬ್ರಹ್ಮರ ಕೂಟ್ಲಿನ ಟೋಲ್‌ಫ್ಲಾಝಾದ ಆಸುಪಾಸಿನಲ್ಲೇ ಚತುಷ್ಪಥ ರಸ್ತೆಯ ಹಲವು ಕಾಮಗಾರಿಗಳು ಬಾಕಿ ಉಳಿದಿವೆ.
ರಸ್ತೆ ವಿವಾದ: ಇತ್ತ ಬಿ.ಸಿ.ರೋಡಿನಲ್ಲಿ  ಸರ್ವಿಸ್ ರಸ್ತೆ, ಚರಂಡಿ ರಚನೆ, ತುಂಬೆಯಲ್ಲಿ ತಡೆ ಬೇಲಿ, ಬ್ರಹ್ಮರ ಕೂಟ್ಲಿನಲ್ಲಿ ಬಸ್ ನಿಲ್ದಾಣ, ಸಂಪರ್ಕ ರಸ್ತೆ ಜೊತೆಗೆ ಬ್ರಹ್ಮರಕೂಟ್ಲಿನಲ್ಲಿ ಸುಮಾರು 150 ಮೀಟರ್ ಉದ್ದದ ಹೆದ್ದಾರಿ ರಸ್ತೆಯೇ ವಿವಾದದಿಂದಾಗಿ ಬಾಕಿ ಉಳಿದಿದೆ.
ಚತುಷ್ಪಥ ಕಾಮಗಾರಿ ಸಂದರ್ಭ ಭೂ ಸ್ವಾಧೀನ ಪ್ರಕ್ರಿಯೆ ನಿಧಾನಗತಿ,  ಜಮೀನು, ಕಟ್ಟಡಗಳ ಮಾಲೀಕರು, ವರ್ತಕರು ಕೋರ್ಟ್ ಮೆಟ್ಟಿಲು ಏರಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು, ಹೀಗಾಗಿ ಹಲವು ವರ್ಷಗಳ ಹಿಂದೆಯೇ ಆರಂಭಗೊಳ್ಳಬೇಕಿದ್ದ ಟೋಲ್ ತಡವಾಗಿ ಆರಂಭಗೊಂಡಿದೆ.
ಈ ಮಧ್ಯೆ ಚತುಷ್ಪಥ ಹೆದ್ದಾರಿಯಿಂದ ಬರಬೇಕಿದ್ದ ಟೋಲ್ ಆದಾಯದ ಬಗ್ಗೆ ಎಚ್ಚರಿಕೆ  ನೋಟಿಸ್ ಕೂಡ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದೆ, ಈ ಕಾರಣದಿಂದ ಇಲಾಖೆ ಕಾಮಗಾರಿ ಶೇ.100 ರಷ್ಟು ಪೂರ್ಣಗೊಳ್ಳುವ ಮುಂಚಿತವಾಗಿಯೇ ಗುತ್ತಿಗೆದಾರರ ಮೂಲಕ ಟೋಲ್ ಫ್ಲಾಝಾ ತೆರೆದು ಕಾರ್ಯಾಚರಿಸುತ್ತಿದೆ ಎಂದು ತಿಳಿದು ಬಂದಿದೆ.
ಯಾವುದಕ್ಕೆ ಎಷ್ಟು?
ಟೋಲ್‌ಗೇಟ್‌ನಲ್ಲಿ ವಿವಿಧ ವಾಹನಗಳಿಂದ ವಸೂಲಿ ಮಾಡುವ ಶುಲ್ಕವನ್ನು ಪ್ರಾಧಿಕಾರ ಪ್ರಕಟಿಸಿದೆ. ಈ ದರ 2014ರ ಮಾ. 31ರ ವರೆಗೆ ಜಾರಿಯಲ್ಲಿರುತ್ತದೆ. ದ.ಕನ್ನಡ ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.
 ಕಾರು, ಜೀಪು, ವ್ಯಾನ್ ಅಥವಾ ಲಘು ಮೋಟಾರ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ ರು. 20. ಅದೇ ದಿನ ಮರಳಿ ಬಂದರೆ ರು. 25, ಒಂದು ತಿಂಗಳಿನಲ್ಲಿ 50 ಬಾರಿ ಬಂದರೆ ಮಾಸಿಕ ಪಾಸ್ ರು. 585. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ ರು. 10 ಶುಲ್ಕ.
 ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ ರು. 30, ಅದೇ ದಿನ ಮರಳುವಿಕೆ ರು. 40, ತಿಂಗಳಿನಲ್ಲಿ 50 ಬಾರಿ ಬಂದರೆ ಮಾಸಿಕ ಪಾಸ್ ಶುಲ್ಕ ರು. 945, ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ ರು. 15 ಶುಲ್ಕ.
 ಬಸ್ ಅಥವಾ ಟ್ರಕ್ (ಎರಡು ಆಕ್ಸಲ್‌ಗಳದ್ದು) ಏಕಮುಖ ಸಂಚಾರಕ್ಕೆ ರು. 60, ಅದೇ ದಿನ ಮರಳಿ ಬಂದರೆ ರು. 90, ತಿಂಗಳಿನಲ್ಲಿ 50 ಬಾರಿ ಬಂದರೆ ರು. 1,975 ಶುಲ್ಕ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ ರು. 30.
 3 ಆಕ್ಸಲ್ ವಾಣಿಜ್ಯ ವಾಹನಕ್ಕೆ ಏಕಮುಖ ಸಂಚಾರಕ್ಕೆ ರು. 65. ಅದೇ ದಿನ ಮರಳಿ ಬಂದರೆ ರು. 95 ಮಾಸಿಕ ಪಾಸ್ (50 ಬಾರಿ) ರು. 2,155 ಶುಲ್ಕ. ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ ರು. 30.
 ಭಾರಿ ನಿರ್ಮಾಣ ಯಂತ್ರಗಳು ಅಥವಾ ಭೂ ಅಗೆತದ ಸಾಧನಗಳು ಅಥವಾ ಬಹು ಆಕ್ಸಲ್ ವಾಹನಗಳಿಗೆ (4-6 ಆಕ್ಸಲ್) ಏಕಮುಖ ಸಂಚಾರ ರು. 95, ಅದೇ ದಿನ ಮರಳುವಿಕೆ ರು. 140, ಮಾಸಿಕ ಪಾಸ್ ರು. 3,100 ಶುಲ್ಕ. ಜಿಲ್ಲೆಯ ನೋಂದಣಿಗೆ ರು. 45.
 ಮಿತಿಮೀರಿದ ಅಳತೆ ವಾಹನಗಳು (7 ಅಥವಾ ಅದಕ್ಕಿಂತಲೂ ಹೆಚ್ಚು ಆಕ್ಸಲ್‌ಗಳದ್ದು) ಏಕಮುಖ ಸಂಚಾರ ರು. 115, ಅದೇ ದಿನ ಮರಳುವಿಕೆ ರು. 170, ಮಾಸಿಕ ಪಾಸ್ ರು. 3,775. ಜಿಲ್ಲೆಯ ನೋಂದಣಿಗೆ 55.
 ಸ್ಥಳೀಯ ವಾಣಿಜ್ಯ ರಹಿತ ವಾಹನಗಳಿಗೆ 2013- 14ನೇ ಸಾಲಿಗೆ ಅನ್ವಯವಾಗುವ ಮಾಸಿಕ ದರಗಳು ರು. 215.



-ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.