ಮಳೆ ಮುನಿಸು: ನೆಲಕಚ್ಚಲಿರುವ ಬೆಳೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 9
ಎರಡು ವರ್ಷಗಳಿಂದ ಪೂರ್ತಿ ಬರದ ಛಾಯೆಯಲ್ಲಿಯೇ ಬದುಕಿದ ಜಿಲ್ಲೆಯ ರೈತರಿಗೆ ಈ ಬಾರಿಯೂ ಬರ ಎದುರಾಗುವ ಭಯ ಶುರುವಾಗಿದೆ.
ಎಂದೂ ಅಧಿಕ ಮಳೆಯಾಗದ ಬಿಜಾಪುರ ಜಿಲ್ಲೆಯಲ್ಲಿಯೂ ವರುಣ ಕೃಪೆ ತೋರಿದ್ದರೆ, ಅರೆ ಮಲೆನಾಡು ಧಾರವಾಡ ಜಿಲ್ಲೆಗೆ ಮಾತ್ರ ಮುನಿಸಿಕೊಂಡಿದ್ದಾನೆ.
ಬರೋಬ್ಬರಿ ಇನ್ನು ಹತ್ತು ದಿನ ಮಳೆರಾಯ ಸುಳಿಯದಿದ್ದರೆ ಜಿಲ್ಲಾದ್ಯಂತ ಪ್ರಸ್ತುತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಬೆಳೆ ನೆಲಕಚ್ಚುವ ಸಂಭವ ಇದೆ. ಆದ್ದರಿಂದ ರೈತರ ಚಿತ್ತ ಈಗ ಆಕಾಶದತ್ತ ಹೊರಳಿದೆ. ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಆದಿಯಲ್ಲಿ ಬಂದ ಮಳೆರಾಯ ಬಿತ್ತನೆಗೆ ಅತ್ಯುತ್ತಮ ಹದ ಮಾಡಿಕೊಟ್ಟಿದ್ದ. ಬೀಜ, ಗೊಬ್ಬರ, ಕಳೆ ಹೀಗೆ ಅನೇಕ ಕಾರಣಗಳಿಗೆ ಸಾಲ ಮಾಡಿ ತಂದ ಹಣವನ್ನು ಖರ್ಚು ಮಾಡಿದ ರೈತನೀಗ ಮಮ್ಮಲ ಮರುಗುತ್ತಿದ್ದಾನೆ. ಎರಡು ವರ್ಷ ಬರಗಾಲದಿಂದ ಉಂಟಾದ ನಷ್ಟವನ್ನು ಈ ಮುಂಗಾರಿನಲ್ಲಿ ನೀಗಿಸಿಕೊಳ್ಳಬಹುದೆಂಬ ನಿರೀಕ್ಷೆ ಹೊತ್ತ ರೈತರಂತೂ ದಿನದಿಂದ ದಿನಕ್ಕೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಜು. 7ರ ವರೆಗೆ 289 ಮಿ.ಮೀ. ಮಳೆಯಾಗಬೇಕಿತ್ತು. ಆ ಪೈಕಿ 235 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ವರದಿ ಸೂಚಿಸುತ್ತಿದೆ. ಜಿಲ್ಲಾ ಕೃಷಿ ಇಲಾಖೆ 2,08.900 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಹೊಂದಿತ್ತು. ಈ ಪೈಕಿ 1,47.927 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಒಟ್ಟು ಶೇ.71 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ನವಲಗುಂದ ಪೂರ್ತಿ ತಾಲೂಕು, ಶಿರಗುಪ್ಪಿ, ಅಮ್ಮಿನಬಾವಿ, ಗರಗ ಹೋಬಳಿ ರೈತರಂತೂ ಬಿತ್ತನೆಯೇ ಮಾಡಿಲ್ಲ.
ರೋಗಗಳು: ಮಳೆ ಅಭಾವದಿಂದ ಸಾಲ ಮಾಡಿ ಭೂಮಿ ಹಸನುಗೊಳಿಸಿದ ರೈತರ ಚಿಗರೊಡೆದ ಬೆಳೆಗಳು ಇದೀಗ ಒಣಗಲಾಂಭಿಸಿವೆ. ರೈತರ ಬೆಳೆಗಳಿಗೆ ಅನೇಕ ರೋಗಗಳು ಅಂಟಿಕೊಳ್ಳುತ್ತಿವೆ. ಅವುಗಳಿಗೆ ಔಷಧೋಪಚಾರ ಮಾಡಬೇಕಾದ ರೈತ ಮೊದಲೇ ಸಾಲದ ಬಾಧೆಯಲ್ಲಿ ನರಳುತ್ತಿದ್ದಾನೆ. ಸಾಕಷ್ಟು ರೈತರು ಮತ್ತಷ್ಟು ಸಾಲ ಮೈಮೇಲೆ ಎಳೆದುಕೊಳ್ಳಬಾರದೆಂಬ ಉದ್ದೇಶದಿಂದ ಔಷಧೋಪಚಾರಕ್ಕೆ ಮುಂದಾಗುತ್ತಿಲ್ಲ. ಈಗಾಗಲೇ ಬೋರ್ವೆಲ್ ಹಾಗೂ ಇತರೆ ಮೂಲದಿಂದ ಕೆಲ ರೈತರು ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ನೀರಾವರಿ ವ್ಯವಸ್ಥೆ ಇರುವ ರೈತರು ಬೆಳೆಗಳಿಗೆ ನೀರುಣಿಸುವ ಕಾರ್ಯದಲ್ಲಿ ತಲ್ಲೀನರಾಗುತ್ತಿದ್ದಾರೆ. ಒಣ ಬೇಸಾಯ ಅಥವಾ ಮಳೆಯಾಧಾರಿತ ರೈತರು ಮಾತ್ರ ಮಳೆರಾಯನ ದಾರಿ ಕಾಯುತ್ತಿದ್ದಾರೆ. ನೀರಾವರಿ ವ್ಯವಸ್ಥೆಯಿಲ್ಲದ ರೈತರ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ, ಹತ್ತಿ, ಆಲೂಗಡ್ಡೆ, ವಠಾಣಿ ಸೇರಿದಂತೆ ಅನೇಕ ಬೆಳೆಗಳು ಅನೇಕ ರೋಗಗಳಿಗೆ ತುತ್ತಾಗಿ ಒಣಗಲಾಂಭಿಸಿವೆ. ಇದು ಜಿಲ್ಲೆಯ ರೈತರ ಪಾಲಿಗೆ ದುರಂತವೇ ಸರಿ.
ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಬೆಳೆಗಳು ನೀರಿಲ್ಲದೆ ನರಳುತ್ತಿದ್ದು, ಬಹು ನಿರೀಕ್ಷಿತ ಬೆಳೆಗಳು ಕೈಗೆಟುಕುವ ಮುನ್ನವೇ ಬಾಡುತ್ತಿವೆ. ರೈತರು ಮುಂಗಾರು ಬೆಳೆಗಳ ಮೇಲಿಟ್ಟ ಎಲ್ಲ ಭರವಸೆಗಳು ಸಾಕಾರಗೊಳ್ಳುವ ಮೊದಲೇ ಹುಸಿಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿರುವುದು ವಿಪರ್ಯಾಸ.
- ಕಲ್ಮೇಶ ಪಟ್ಟಣದವರ
ಕೃಷಿ ಇಲಾಖೆ ಹವಾಮಾನ ಆಧಾರಿತ ಬೆಳೆವಿಮೆ ತುಂಬಲು ಜು. 31ರ ಗಡುವು ನೀಡಿದೆ. ರೈತರು ಬೆಳೆವಿಮೆ ಪಡೆಯುವ ಹವಣಿಕೆಯಲ್ಲಿದ್ದಾರೆ. ಆದರೆ, ಸಾಕಷ್ಟು ರೈತರ ಕೈಯಲ್ಲಿ ಸದ್ಯ ಕಾಸಿಲ್ಲದ ಕಾರಣಬೆಳೆ ವಿಮೆ ಪ್ರಯೋಜನ ಪಡೆಯುವ ಆಸೆ ಕೈ ಚೆಲ್ಲುತ್ತಿದ್ದಾರೆ. ಕೆಲ ರೈತರಿಗೆ ಈ ಬಗ್ಗೆ ಸೂಕ್ತ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಸರ್ಕಾರದ ಬೆಳೆವಿಮೆ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.
- ಭೀಮಪ್ಪ ಕಾಸಾಯಿ, ರೈತ ಮುಖಂಡ, ತಡಕೋಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

