ಜೆಡಿಎಸ್.ಗೆ ಟಿ.ಎಲ್. ನಾಯಕ ರಾಜಿನಾಮೆ
ಮುಂಡರಗಿ: ಗದಗ ಜಿಲ್ಲಾ ಜಾತ್ಯತೀತ ಜನತಾದಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧ್ಯಕ್ಷ ಟಿ.ಎಲ್. ನಾಯಕ ತಮ್ಮ ಸ್ಥಾನಕ್ಕೆ ಹಾಗೂ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜನಾಮೆ ನೀಡಿದ್ದಾಗಿ ಹೇಳಿದ್ದಾರೆ. ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದೇನೆ. ಸ್ಥಳೀಯ ಹಾಗೂ ಜಿಲ್ಲಾ ಜೆಡಿಎಸ್.ನ ಕೆಲವು ಮುಖಂಡರು ಪಕ್ಷ ಸಂಘಟಿಸದೆ ವೈಯಕ್ತಿಕ ಲಾಭಕ್ಕಾಗಿ ಮತ್ತೊಬ್ಬರನ್ನು ಬಲಿಪಶು ಮಾಡುತ್ತಿದ್ದಾರೆ. ಇದರಿಂದ ಉಸಿರುಕಟ್ಟಿಸುವ ವಾತಾವರಣ ಉಂಟಾಗಿದ್ದು, ತಾವು ಪಕ್ಷ ತ್ಯಜಿಸುವ ನಿರ್ಧಾರ ಕೈಗೊಂಡಿರುವುದಾಗಿ ವಿವರಿಸಿದರು. 2008ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರೂ ಈ ಬಾರಿ ಶಿರಹಟ್ಟಿ ಕ್ಷೇತ್ರದಿಂದ ತಾವು ಆಕಾಂಕ್ಷಿಯಾಗಿದ್ದು, ಟಿಕೆಟ್ ನೀಡುವ ಲಕ್ಷಣಗಳು ಕಾಣಿಸಲಿಲ್ಲ. ಪಕ್ಷ ಸಂಘಟನೆಗೆ ಬೆಲೆ ಸಿಗದ ಕಾರಣ ರಾಜಿನಾಮೆ ನೀಡಿದ್ದಾಗಿ ತಿಳಿಸಿದರು. ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದ ಕೆಜೆಪಿ ಸೇರುತ್ತಿದ್ದೇನೆ. ಅಲ್ಲಿ ಟಿಕೆಟ್ ಸಿಗದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು. ಈ ವೇಳೆ ತಾಲೂಕು ಕೆಜೆಪಿ ಅಧ್ಯಕ್ಷ ಕಾಂತರಾಜ ಹಿರೇಮಠ, ಕೆಜೆಪಿ ಉಪಾಧ್ಯಕ್ಷ ಅಶೋಕ ಮೇಗಳಮನಿ, ಶಿವಪ್ಪ ಪವಾರ, ಸುಲೇಮಾನ್.ಸಾಬ ಭಾವಾಜಿ, ಸುರೇಶ ಹಲವಾಗಲಿ, ಕುಬೇರ ಪೂಜಾರ, ದಿಲೀಪ ಪವಾರ ಇದ್ದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ?
ಹಾವೇರಿ: ಜಿಲ್ಲೆಯ ಎಲ್ಲ ಆರೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಬ್ಯರ್ಥಿಗಳ ಹೆಸರು ಅಂತಿಮಗೊಂಡಿವೆ. ರುದ್ರಪ್ಪ ಲಮಾಣಿ (ಹಾವೇರಿ), ಬಿ.ಸಿ. ಪಾಟೀಲ (ಹಿರೇಕೆರೂರು), ಬಸವರಾಜ ಶಿವಣ್ಣನವರ (ಬ್ಯಾಡಗಿ), ಅಜ್ಜಂಪೀರ ಖಾದ್ರಿ (ಶಿಗ್ಗಾಂವಿ), ಮನೋಹರ ತಹಸೀಲ್ದಾರ (ಹಾನಗಲ್ಲ) ಹಾಗೂ ಕೆ.ಬಿ. ಕೋಳಿವಾಡ (ರಾಣಿಬೆನ್ನೂರು) ಅವರ ಹೆಸರುಗಳು ಅಂತಿಮಗೊಂಡಿವೆ ಎಂದು ತಿಳಿದುಬಂದಿದೆ.
ಬ್ಯಾಡಗಿ ಕೆಜೆಪಿ ಅಭ್ಯರ್ಥಿಯಾಗಿ ಸಜ್ಜನರ?
ಬ್ಯಾಡಗಿ: ತಾಲೂಕಿನ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿಯಾಗಿ ಈ ಹಿಂದೆ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅವರ ಹೆಸರು ಅಂತಿಮಗೊಂಡಿತ್ತು. ಆದರೆ ಈ ಕುರಿತಂತೆ ಸುರೇಶಗೌಡ ಹತ್ತು ಹಲವಾರು ಹೇಳಿಕೆಗಳ ಮೂಲಕ ಗೊಂದಲ ಮೂಡಿಸಿದ್ದರು. ಸೋಮವಾರ ಈ ಕುರಿತಂತೆ ಕೆಜೆಪಿ ಸಭೆ ನಡೆದು, ಅಂತಿಮವಾಗಿ ಮಾಜಿ ಶಾಸಕ ಶಿವರಾಜ ಸಜ್ಜನರ ಅವರ ಹೆಸರನ್ನು ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

