ಬಣವೆಗೂ ಬರ: ರೈತರು ಕಂಗಾಲು
ಕನ್ನಡಪ್ರಭ ವಾರ್ತೆ, ಗದಗ, ಏ. 1
ರೈತರು ಬೆಳೆಗಳನ್ನು ಬೆಳೆದ ನಂತರ ಬರುವ ಮೇವು ಹಾಗೂ ಹೊಟ್ಟನ್ನು ವರ್ಷಾನುಗಟ್ಟಲೇ ಸಂಗ್ರಹಿಸುವ ಉದ್ದೇಶದಿಂದ ಬಣವೆ ನಿರ್ಮಿಸಲು ಬಣವೆಕಾರರನ್ನು ಕರೆಸಿ ಅವರಿಗೆ ಧವಸಟ ಧಾನ್ಯ ನೀಡಿ ಬಣವೆ ನಿರ್ಮಿಸುತ್ತಿದ್ದರು. ಆದರಿಂದು ಬಣವೆಕಾರರ ಸಮಸ್ಯೆಯಿಂದಾಗಿ ರೈತರು ತೊಂದರೆ ಅನುಭವಿಸುತ್ತಿದ್ದು, ಬಣವೆಕಾರರ ಕೊರತೆಯಿಂದಾಗಿ ರೈತರು ತಾವೇ ಹಗಲು ರಾತ್ರಿ ನಿಂತು ಬಣವೆ ನಿರ್ಮಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ರೈತರು ಬೆಳೆದ ಮೇವು ಹಾಗೂ ಹೊಟ್ಟನ್ನು ಸಂಗ್ರಹಿಸಲು ಬಣವೆ ನಿರ್ಮಿಸಲಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕ ರೈತರು ಒಣ ಬೇಸಾಯ ಅವಲಂಬಿಸಿದ್ದು, ವರ್ಷಕ್ಕೆ ಒಂದು ಬಾರಿ ಬೇಸಾಯ ಮಾಡುವ ಜೋಳ, ಗೋದಿ, ಶೇಂಗಾ ಹಾಗೂ ಕಡಲೆ ಹೊಟ್ಟು ಸೇರಿದಂತೆ ಇನ್ನಿತರ ಮೇವನ್ನು ವರ್ಷಪೂರ್ತಿ ಸಂಗ್ರಹಿಸಿಡಲು ರೈತರು ಬಣವೆ ಮೊರೆ ಹೋಗುತ್ತಿದ್ದರು. ಆದರೀಗ ಕಾಲ ಬದಲಾಗಿದ್ದು, ರೈತರು ಸಹ ಈ ಬಣವೆ ನಿರ್ಮಿಸುವ ಕಾರ್ಯಕ್ಕೆ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಪ್ರಮುಖ ಕಾರಣವೇ ಬಣವೆಕಾರರ ಕೊರತೆ.
ಇದೊಂದು ವಿಶಿಷ್ಟ ಕಲೆ: ಬಣವೆ ನಿರ್ಮಿಸುವುದು ಒಂದು ಪ್ರಮುಖ ಕಲೆಯಾಗಿದೆ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ನೀತಿ ನಿಯಮಗಳಿಲ್ಲವಾದರೂ ರೈತರು ತಮ್ಮ ಸ್ವ ನೀತಿ, ನಿಯಮಗಳನ್ನು ಅಳವಡಿಸಿಕೊಂಡು ಬಣವೆಯನ್ನು ನಿರ್ಮಿಸುತ್ತಿದ್ದರು. ಕೆಳಮಟ್ಟದಿಂದ ಒಂದೇ ರೀತಿಯಲ್ಲಿ ನಿರ್ಮಿಸಿ ನಂತರ ಗೋಪೂರಾಕೃತಿಯಲ್ಲಿ ಮುಕ್ತಾಯಗೊಳಿಸುವುದು ಒಂದು ಸಾಹಸ ಕಲೆ ಇದ್ದಂತೆ. ಹೀಗೆ ನಿರ್ಮಿಸಲು ಒಂದು ಉದ್ದೇಶವಿದ್ದು, ವರ್ಷಪೂರ್ತಿ ಸಂಗ್ರಹಿಸಬೇಕಾದ ಮೇವು ಕೆಡದಂತೆ ನೋಡಿಕೊಳ್ಳಲು ಹಾಗೂ ಮಳೆಯಾದ ಸಂದರ್ಭ ಬಣವೆಯ ಮೇಲ್ಮಟ್ಟದಲ್ಲಿ ನೀರು ಸಂಗ್ರಹವಾಗದಿರಲು ಈ ರೀತಿಯ ಗೋಪುರಾಕೃತಿಯ ಬಣವೆ ನಿರ್ಮಿಸಲಾಗುತ್ತದೆ.
ಕ್ಷೀಣಿಸುತ್ತಿರುವ ಬಣವೆಕಾರರ ಸಂಖ್ಯೆ: ಸುಮಾರು 5ಟ 6 ವರ್ಷಗಳ ಹಿಂದೆ ಪ್ರತಿಯೊಂದು ಊರಿನಲ್ಲಿ ಸುಮಾರು 25ರಿಂದ 30 ಜನ ಬಣವೆಕಾರರು ಸಿಗುತ್ತಿದ್ದರು. ಆದರಿಂದು ಬೆರಳೆಣಿಕೆ ಮಟ್ಟದಲ್ಲಿ 10ರಿಂದ 15 ಜನ ಬಣವೆಕಾರರು ಸಿಗುವುದೇ ವಿರಳ. ಹಾಗಾಗಿ ರೈತರೇ ಬಣವೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಣವೆಗಳ ನಿರ್ಮಾಣಕ್ಕಾಗಿ ಬಣವಿಕಾರರಿಗೆ ರೈತರು ಆಹಾರ ಧಾನ್ಯಗಳನ್ನೇ ನೀಡುತ್ತಾರೆ. ಧಾನ್ಯಗಳನ್ನು ನೀಡದಿದ್ದಲ್ಲಿ ಬಣವೆಕಾರರು ಸಿಗುವುದೇ ವಿರಳ. ಹಾಗಾಗಿ ಇಂದಿಗೂ ಹಳೆಯ ಪದ್ಧತಿಯನ್ನೇ ರೈತರು ಅಳವಡಿಸಿಕೊಂಡು ಬಂದಿದ್ದಾರೆ.
-ಅಜೀಜಅಹ್ಮದ್ ಬಳಗಾನೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

