ಗದಗ

ಬಂಡಾಯದ ಊರಲ್ಲಿ ಚುನಾವಣೆ ಬಿಸಿ

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 3
ಬಂಡಾಯದ ಮೂಲಕ ಹೆಸರು ಮಾಡಿರುವ ನರಗುಂದ ವಿಧಾನಸಭಾ ಕ್ಷೇತ್ರದ ಚುನಾವಣೆ ಇತಿಹಾಸ ಮತ್ತು ಅಲ್ಲಿನ ಮತದಾರರ ಪಟ್ಟಿಯನ್ನು ಅವಲೋಕಿಸಿದಲ್ಲಿ ಇಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರವಹಿಸಲಿದ್ದು, ಕ್ಷೇತ್ರದಲ್ಲಿ ಚುನಾಯಿತರಾಗಿರುವ ಅಭ್ಯರ್ಥಿಗಳ ಜಾತಿಗಳನ್ನು ಗಮನಿಸಿದಲ್ಲಿಯೂ ಮತದಾರರ ಸಂಖ್ಯೆಗೂ ಜಾತಿಗೂ ನೇರ ಸಂಬಂಧವಿದೆ ಎನ್ನುವುದು ಸ್ಪಷ್ಟವಾಗುತ್ತದೆ.
1957ರಲ್ಲಿ ಕಾಂಗ್ರೆಸ್,ನ ಎ.ಎಸ್. ಪಾಟೀಲ 18,143 ಮತ ಪಡೆದು ಆಯ್ಕೆಯಾಗಿದ್ದರು. 1962ರಲ್ಲಿ ಮತ್ತೆ ಅವರೇ 24,601 ಮತ ಪಡೆದು ಆಯ್ಕೆಯಾದರು. ನಂತರ ಕ್ಷೇತ್ರವು ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದ ಮೊದಲ ಚುನಾವಣೆಯಲ್ಲಿ 1967ರಲ್ಲಿ ಕಾಂಗ್ರೆಸ್,ನಿಂದ ಆರ್.ವಿ. ದೊಡ್ಡಮನಿ 14,402 ಮತ ಪಡೆದು ಆಯ್ಕೆಯಾಗಿದ್ದರು. 1972ರಲ್ಲಿ ಕಾಂಗ್ರೆಸ್,ನಿಂದ ಸ್ಪರ್ಧಿಸಿದ್ದ ವೈ.ವಿ. ಜೋಗಣ್ಣವರ 20,070 ಮತ ಪಡೆದು ಗೆಲವು ಸಾಧಿಸಿದ್ದರು.  
1978ರಲ್ಲಿ ಕಾಂಗ್ರೆಸ್,ನ ಬಿ.ಆರ್. ಪಾಟೀಲ 16,496 ಮತ ಪಡೆದು ಆಯ್ಕೆಯಾಗಿದ್ದು, ಅವರ ಪ್ರತಿಸ್ಪರ್ಧಿಯಾಗಿದ್ದ ಜನತಾ ಪಕ್ಷದ ಪಿ.ಎಲ್. ಪಾಟೀಲ 15,450 ಮತ ಪಡೆದು, ಕೇವಲ 1046 ಮತಗಳ ಅಂತರದಿಂದ ಸೋಲುಂಡಿದ್ದರು. 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಆರ್. ಯಾವಗಲ್ಲ 22,675 ಮತ ಪಡೆದು ಗೆಲವು ಸಾಧಿಸಿದ್ದರು. 1985 ರಲ್ಲಿ ಮತ್ತೆ ಜನತಾ ಪಕ್ಷದಿಂದ ಬಿ.ಆರ್. ಯಾವಗಲ್ಲ 36,506 ಮತ ಪಡೆದು ಆಯ್ಕೆಯಾಗಿದ್ದರು. 1989ರಲ್ಲಿ ಕಾಂಗ್ರೆಸ್,ನಿಂದ ಸ್ಪರ್ಧಿಸಿದ್ದ ಎಸ್.ಎಫ್. ಪಾಟೀಲ 30,284 ಮತ ಪಡೆದು ಗೆಲುವು ಸಾಧಿಸಿದ್ದರು. ಜನತಾದಳದಿಂದ ಸ್ಪರ್ಧಿಸಿದ್ದ ಬಿ.ಆರ್. ಯಾವಗಲ್ಲ 29,595 ಮತ ಪಡೆದು ಕೇವಲ 689 ಮತಗಳ ಅಂತರದಲ್ಲಿ ಸೋಲುಂಡಿದ್ದರು. 1994ರಲ್ಲಿ ಮತ್ತೆ ಜನತಾದಳದಿಂದ ಸ್ಫರ್ಧಿಸಿದ್ದ ಬಿ.ಆರ್. ಯಾವಗಲ್ಲ 37,154 ಮತ ಪಡೆದು ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯಾಗಿದ್ದ ವೀರಣ್ಣ ಮತ್ತಿಕಟ್ಟಿ ವಿರುದ್ಧ ಜಯ ಸಾಧಿಸಿದ್ದರು. 1999ರಲ್ಲಿ ಪಕ್ಷ ಬದಲಾವಣೆ ಮಾಡಿ ಕಾಂಗ್ರೆಸ್,ಗೆ ಸೇರ್ಪಡೆಗೊಂಡ ಬಿ.ಆರ್. ಯಾವಗಲ್ಲ 34,870 ಮತ ಪಡೆದು ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿದ್ದ ಸಿ.ಸಿ. ಪಾಟೀಲ ವಿರುದ್ಧ ಗೆಲುವು ಸಾಧಿಸಿದ್ದರು. 2004ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸಿ.ಸಿ. ಪಾಟೀಲ 43,382 ಮತಗಳನ್ನು ಪಡೆದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2008 ರಲ್ಲಿಯೂ ಅವರ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಯಿತು. 2013ರ ಚುನಾವಣೆಯಲ್ಲಿಯೂ ಮತ್ತೊಮ್ಮೆ ಇಬ್ಬರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಲಿಂಗಾಯತರ ಪ್ರಾಬಲ್ಯ: ನರಗುಂದ ಕ್ಷೇತ್ರದಲ್ಲಿಯೂ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದರೆ, ಲಿಂಗಾಯತರೂ ಕೇವಲ ಒಂದೇ ಪಕ್ಷವನ್ನು ಬೆಂಬಲಿಸದೆ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೂ ಮತ ನೀಡಿರುವುದು ವಿಶೇಷ. ಆದರೆ, ಜಿಲ್ಲೆಯ ಇನ್ನುಳಿದ ಕ್ಷೇತ್ರಗಳಿಗೆ ಹೋಲಿಕೆ ಮಾಡಿದಲ್ಲಿ ಇಲ್ಲಿನ ಜನತೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಮನೋಭಾವನೆಯನ್ನು ಹೊಂದಿದ್ದು ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಅದನ್ನು ಫಲಿತಾಂಶದ ಮೂಲಕ ತಿಳಿಸಿದ್ದಾರೆ.
 ಒಟ್ಟು ಮತದಾರರು: ನರಗುಂದ ಕ್ಷೇತ್ರವು ನರಗುಂದ ತಾಲೂಕು ಹಾಗೂ ರೋಣ ತಾಲೂಕಿನ ಹೊಳೆಆಲೂರ ಹೋಬಳಿಯ 28 ಹಳ್ಳಿಗಳು, ನರೇಗಲ್ಲ ಹೋಬಳಿಯ 5 ಗ್ರಾಮಗಳು, ಬೆಟಗೇರಿ ಹೋಬಳಿಯ 27 ಹಳ್ಳಿಗಳನ್ನು ಒಳಗೊಂಡಿದ್ದು, ಅತ್ಯಂತ ದೊಡ್ಡ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರವಾಗಿದೆ.
ಇಲ್ಲಿ ಒಟ್ಟು 1,64,897 ಮತದಾರರಿದ್ದು ಅವರಲ್ಲಿ 84,595 ಪುರುಷರು, 80,302 ಮಹಿಳಾ ಮತದಾರರಿದ್ದಾರೆ.

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.