ಕಡಲೆ ಬೆಲೆ ಕುಸಿತ: ರೈತ ಕಂಗಾಲು
ಕನ್ನಡಪ್ರಭ ವಾರ್ತೆ, ನರಗುಂದ, ಏ. 4
ಗದಗ ಜಿಲ್ಲೆಯಲ್ಲಿ ಸತತ 2 ವರ್ಷ ಭೀಕರ ಬರಗಾಲದಿಂದಾಗಿ ಕೃಷಿಯನ್ನೇ ನಂಬಿಕೊಂಡು ಬಂದ ರೈತ ಸಮೂಹವು ಸಂಕಷ್ಟ ಅನುಭವಿಸುವಂತಾಗಿದೆ.
ಕೆಲವು ಕಡೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ರೈತರು ಇದೇ ಮಳೆಯನ್ನು ನಂಬಿ ಕಡಲೆ ಬಿತ್ತನೆ ಮಾಡಿ, ಬೆಳೆತೆಗೆದು ಮಾರಾಟ ಮಾಡಲು ಮಾರುಕಟ್ಟೆಗೆ ತೆರಳಿದರೆ ಅಲ್ಲಿ ಬೆಲೆ ಕೇಳಿದರೆ ರೈತರು ಮೂರ್ಚೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಲೆ ಕುಸಿತ: ಪ್ರತಿ ವರ್ಷ ಈ ಭಾಗದಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ಬೆಳೆದು ಮಾರುಕಟ್ಟೆಗೆ ತಂದರೆ ದಿಢೀರನೆ ಬೆಲೆ ಇಳಿಕೆಯಾಗುತ್ತದೆ. ಮಳೆಯ ಕೊರತೆಯ ಮಧ್ಯೆಯೂ ಬೆಳೆದಂತಹ ಕಡಲೆಯನ್ನು ರೈತರು ಮಾರಾಟಕ್ಕೆ ತರುತ್ತಿದ್ದಾರೆ. ಆದರೆ, ಈಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ ರು. 3000-3200 ಇರುವುದರಿಂದ ರೈತರಿಗೆ ಬಾಡಿಗೆ ವಾಹನದಲ್ಲಿ ತಂದ ಕಡಲೆಯನ್ನು ಕಡಿಮೆ ಬೆಲೆಯಲ್ಲಿಯೇ ಮಾರಿ ಹೋಗುವ ಅನಿವಾರ್ಯತೆ ಎದುರಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯು ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಹಿಂಗಾರು ಮಳೆ ಅಲ್ಪ ಪ್ರಮಾಣದಲ್ಲಿ ಆಗಿದ್ದರಿಂದ ಅದನ್ನೇ ನಂಬಿಕೊಂಡು ರೈತರು ಹರ್ಷದಿಂದ ಕಡಲೆ ಬಿತ್ತನೆ ಮಾಡಿದ್ದರು. ಪ್ರತಿ ಕ್ವಿಂಟಾಲ್ಗೆ ಸುಮಾರು ರು. 5800-6300 ದುಬಾರಿ ಬೆಲೆ ತೆತ್ತು ಮಾರುಕಟ್ಟೆಯಿಂದ ಕಡಲೆ ಬೀಜ ಕೊಂಡು ಬಿತ್ತನೆ ಮಾಡಿದ್ದರು. ಸರಿಯಾದ ಪ್ರಮಾಣದಲ್ಲಿ ಮಳೆಯಾಗಿದ್ದರೆ ಪ್ರತಿ ಎಕರೆಗೆ 8-10 ಕ್ವಿಂಟಲ್ ಬೆಳೆ ಬೆಳೆ ಬರಬಹುದಿತ್ತು. ಆದರೆ ಸಮರ್ಪಕ ಮಳೆಯಾಗದೆ ನೀರಿನ ಕೊರತೆಯಿಂದ 3-4 ಕ್ವಿಂಟಲ್ ಮಾತ್ರ ಬೆಳೆ ಬಂದಿದೆ. ದುಬಾರಿ ಬೆಲೆ ನೀಡಿ ಬೀಜ ತಂದು ಬಿತ್ತನೆ ಮಾಡಿ ಈಗ ಕಡಿಮೆ ಬೆಲೆಯಲ್ಲಿ ಮಾರುವಂತಾಗಿದ್ದು ರೈತರನ್ನು ಕಂಗಾಲಾಗಿಸಿದೆ.
-ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

