ಬಿಸಿಲಿನ ಪ್ರತಾಪ: ಜನತೆಗೆ ಸಂಕಟ
ಕನ್ನಡಪ್ರಭ ವಾರ್ತೆ ರೋಣ, ಏ. 5
ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಬಿಸಿಲ ಬೇಗೆಯಿಂದ ಬಸವಳಿದ ತಾಲೂಕಿನ ಜನತೆ ತಂಪು ಪದಾರ್ಥಗಳಿಗೆ ಮೊರೆಹೋಗುತ್ತಿದ್ದಾರೆ.
ಬಿಸಿಲಿನ ಸಂಕಷ್ಟ ತಾಳಲಾರದೇ ತಂಪು ಪಾನೀಯಗಳನ್ನು ಸೇವಿಸಿ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ, ಇವುಗಳ ಬೆಲೆ ಗಗನಕ್ಕೇರಿದ್ದು ಇಲ್ಲಿಯೂ ಜನರಿಗೆ ಬಿಸಿ ತಟ್ಟುತ್ತಿದೆ. ಬರದ ಬರೆ ಒಂದೆಡೆಯಾದರೆ ಬಿಸಿಲಿನ ತಾಪ ಮತ್ತೊಂದೆಡೆ. ಬಿಸಿಲು ಉಗ್ರ ರೂಪ ತಾಳುತ್ತಿದ್ದು ಜನರು ಚಟಪಡಿಸುತ್ತಿದ್ದಾರೆ. ಸ್ವದೇಶಿ ಮತ್ತು ವಿದೇಶಿ ತಂಪು ಪಾನೀಯಗಳಿಗೆ ಹಾಗೂ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿಗೆ ಎಲ್ಲಿಲ್ಲದ ಬೇಡಿಕೆ.
ಎಲ್ಲವೂ ದುಬಾರಿ: ಬೇಸಿಗೆಯ ಬಿರು ಬಿಸಿಲಿನಲ್ಲಿ ದಾಹ ತಣಿಸಿಕೊಳ್ಳಲು ಅವಶ್ಯವಿರುವ ಕಲ್ಲಂಗಡಿ, ನಿಂಬೆಹಣ್ಣು, ಕಬ್ಬಿನ ಹಾಲು, ಎಳನೀರು, ಫೈನಾಪಾಲ್, ದ್ರಾಕ್ಷಿ, ಹಣ್ಣು, ಜ್ಯೂಸ್, ಐಸ್ಕ್ರೀಂ, ಅವಲಕ್ಕಿ ಮೊಸರು ಮತ್ತು ತಂಪು ಪಾನಿಯಗಳನ್ನು ಪಡೆಯಲು ಹೋದಾಗ ತಾಲೂಕಿನಲ್ಲಿ ಸತತ ಎರಡುವರೆ ವರ್ಷದಿಂದ ಮಳೆಯಿಲ್ಲದೇ ತೀವ್ರ ಬರ ಆವರಿಸಿದ್ದು ಜನತೆ ಕೈಯಲ್ಲಿ ಕಾಸಿಲ್ಲದೆ ಜೀವನ ನಡೆಸಲು ಹೆಣಗಾಡಬೇಕಾದ ಪರಿಸ್ಥಿತಿ ಬಂದಿದೆ.
ಕೈಗೆಟುಕದ ಕಲ್ಲಂಗಡಿ: ಕಳೆದ ಬಾರಿಗಿಂತ ಈ ಸಾರಿ ತಂಪು ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ಕಲ್ಲಂಗಡಿ ಈ ಬಾರಿ ದುಬಾರಿಯಾಗಿದೆ. ಯಾಕೆಂದರೆ ಕಳೆದ ಬಾರಿ ಬಾಗಲಕೋಟ, ಬಿಜಾಪುರ, ಸಿಂದನೂರ, ಮುಂಡರಗಿ ತಾಲೂಕಿನ ಹೆಸರೂರು, ಶಿರಸಿ, ಭಟ್ಕಳ, ಹೊನ್ನಾವರ, ಕಲಘಟಗಿಯಿಂದ ತಂದು ಮಾರಲಾಗುತ್ತಿತ್ತು. ಈ ಸಾರಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗದಿರುವುದರಿಂದ ಇಲ್ಲಿ ಕಲ್ಲಂಗಡಿ ಬೆಳೆದಿಲ್ಲ. ಪಕ್ಕದ ಆಂಧ್ರಪ್ರದೇಶದಿಂದ ತರಿಸಿಕೊಳ್ಳಬೇಕಾಗಿದ್ದರಿಂದ ಇದರ ಬೆಲೆ ಗಗನ ಕುಸುಮವಾಗಿದೆ. ರು. 20-30ಕ್ಕೆ ಸಿಗುತ್ತಿದ್ದ ಒಂದು ಕಲ್ಲಂಗಡಿ ಹಣ್ಣು, ಈ ಬಾರಿ ರು. 150-200 ರಷ್ಟು ಹೆಚ್ಚಿದೆ. ರೈತರಿಂದ ನೇರವಾಗಿ ಸಿಕ್ಕಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ದಲ್ಲಾಳಿಗಳ ಮೂಲಕ ಪಡೆಯಬೇಕಾದ್ದರಿಂದ ನಮಗೂ ದುಬಾರಿ ಬೆಲೆಗೆ ಸಿಗುತ್ತದೆ ಎನ್ನುತ್ತಾರೆ ಪಟ್ಟಣದ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಇಸ್ಮೈಲಸಾಬ್ ನಾಲಬಂದ ಮತ್ತು ಕಾಸಿಂಸಾಬ್ ಮುಲ್ಲಾ.
ಕಡ್ಡಿ ಐಸ್ಕ್ರೀಂ ವ್ಯಾಪಾರ ಜೋರು: ಎಲ್ಲರ ಕೈಗೆಟುಕುವ ದರದಲ್ಲಿ ಸೀಗುತ್ತಿರುವ ಬಡವರ ಪಾಲಿನ ತಂಪು ಪಾನೀಯವೆಂದು ಖ್ಯಾತಿ ಪಡೆದಿರುವ ಕಡ್ಡಿ ಐಸ್ಕ್ರೀಂ (ಬರ್ಪ) ಭರ್ಜರಿಯಾಗಿ ಮಾರಾಟವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚಿಗೆ ಮಾರಾಟವಾಗುತ್ತಿದೆ. ಪಟ್ಟಣದಿಂದ ಸೈಕಲ್ ಅಥವಾ ದ್ವಿಚಕ್ರ ವಾಹನ ಮೂಲಕ ಬಂದು ಹಳ್ಳಿಗಳಲ್ಲಿ ಮಾರುತ್ತಿದ್ದಾರೆ. ಜನತೆ ಮನೆಯಲ್ಲಿನ ಹಳೆ ಕಬ್ಬಿಣ ಮತ್ತು ತಗಡಿನ ವಸ್ತು, ಬಾಟಲ್ಗಳನ್ನು ಕೊಟ್ಟು ಐಸ್ಕ್ರೀಂ ಪಡೆಯುತ್ತಿದ್ದಾರೆ.
ರಸ್ತೆ, ಬೀದಿ, ಬಡಾವಣೆಯಲ್ಲಿ ಸಂಚರಿಸುವ ಜನತೆ ಬಿಸಿಲಿನ ತಾಪ ತಾಳದೆ ನೆರಳನ್ನು ಹುಡುಕುವಂತಾಗಿದೆ. ತಂಪು ಪದಾರ್ಥಗಳ ಅಂಗಡಿಗಳು ಗ್ರಾಹಕರಿಂದ ಸದಾ ತುಂಬಿರುತ್ತವೆ. ಈ ಅಂಗಡಿ ಮಾಲಿಕರು ಖುಷಿಯಲ್ಲಿದ್ದಾರೆ. ದುಬಾರಿ ಬೆಲೆ ನೀಡಿಯಾದರೂ ದೇಹ ತಂಪಾಗಿಸಿಕೊಳ್ಳುವ ಅನಿವಾರ್ಯತೆಯಿದೆ. ಆದರೆ, ಬರಗಾಲದಿಂದ ತತ್ತರಿಸಿದ ಸಾಮಾನ್ಯ ಜನರಿಗೆ ಈ ಬೆಲೆ ಏರಿಕೆಯಿಂದ ಮತಷ್ಟು ಬಿಸಿ ತಟ್ಟಿದೆ ಎನ್ನುತ್ತಾರೆ ಮುಗಳಿಯ ಶರಣಪ್ಪ ಮಲ್ಲಾಪುರ, ಕೊತಬಾಳದ ಈರಣ್ಣ ಯಾಳಗಿ, ಹಿರೇಹಾಳದ ಸಿದ್ದು ಗುಡಿಮನಿ, ಇಟಗಿಯ ಇಸ್ಮಾಯಿಲ್ ಹೋರಪೇಟಿ.
-ಪಿ.ಎಸ್. ಪಾಟೀಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

