ಮತದಾನ ಜಾಗೃತಿ ಅವಶ್ಯ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 6
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಎಲ್ಲ ಇಲಾಖೆ ಅಧಿಕಾರಿಗಳು, ಮಾಧ್ಯಮಗಳು ಹಾಗೂ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದು ಅವಶ್ಯ ಎಂದು ರೋಣ ಚುನಾವಣಾಧಿಕಾರಿ ಎನ್.ಆರ್.ಉಮೇಶ, ಶಿರಹಟ್ಟಿ ಚುನಾವಣಾಧಿಕಾರಿ ದಿನೇಶ ಹೇಳಿದರು.
ಅವರು ಶನಿವಾರ ಮುಂಡರಗಿ ಮಿನಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಂಡರಗಿ ತಾಲೂಕು ಶಿರಹಟ್ಟಿ ಮತ್ತು ರೋಣ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಹೋಗಿದ್ದು, ರೋಣ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ರೋಣ ತಾಲೂಕು ಕಚೇರಿಯಲ್ಲಿ ಮತ್ತು ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಶಿರಹಟ್ಟಿ ತಾಲೂಕು ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಲು ವ್ಯವಸ್ಥೆಯನ್ನು ಮಾಡಲಾಗಿದೆ.
ಏ. 7ರಂದು ಸಂಜೆ 5-30ರ ವರೆಗೆ 18 ವರ್ಷ ತುಂಬಿದವರಿಗೆ ಫಾರಂ ನಂ 6ರಲ್ಲಿ ಅರ್ಜಿ ಸಲ್ಲಿಸಿ ಹೊಸದಾಗಿ ಸೇರುವ ಮತದಾರರನ್ನು ಸೇರಿಸಲು ಅವಕಾಶವಿದೆ. ಈ ಕುರಿತು ಈಗಾಗಲೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರಿಗೆ ತರಬೇತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 08381-267006 ಹಾಗೂ ಮುಂಡರಗಿ ತಹಸೀಲ್ದಾರ್ ಕಾರ್ಯಲಯದ ದೂ. 08371 262235 ಗೆ ಶಿರಹಟ್ಟಿಯಲ್ಲಿ 08487-242100 ಸಂಪರ್ಕಿಸಬಹುದು.
ರೋಣದಲ್ಲಿ 170 ಮತಗಟ್ಟೆ, ಮುಂಡರಗಿ ಭಾಗದಲ್ಲಿ 56 ಮತಗಟ್ಟೆ ಮತ್ತು ಗದಗ ಭಾಗದ ಹಳ್ಳಿಗಳಲ್ಲಿ 15 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 68 ಮತಗಟ್ಟೆಗಳು ಸೂಕ್ಷ್ಮ, 67 ಅತಿಸೂಕ್ಷ್ಮ ಮತಗಟ್ಟೆಗಳು, 121 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ರೋಣ ಕ್ಷೇತ್ರಕ್ಕೆ 21 ಚುನಾವಣಾ ಅಧಿಕಾರಿಗಳು, ಶಿರಹಟ್ಟಿ ಕ್ಷೇತ್ರಕ್ಕೆ 18 ಚುನಾವಣಾಧಿಕಾರಿಗಳನ್ನು ನೇಮಕಮಾಡಲಾಗಿದೆ ಎಂದರು.
ನೀತಿಸಂಹಿತೆಯನ್ನು ಉಲ್ಲಂಘಿಸುವ ಯಾವುದೇ ಚಟುವಟಿಕೆಯನ್ನು ತಡೆಗಟ್ಟಲು ರೋಣ ಕ್ಷೇತ್ರದಲ್ಲಿ 3 ಮತ್ತು ಶಿರಹಟ್ಟಿ ಕ್ಷೇತ್ರದಲ್ಲಿ 1 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. 14 ಜನರ 3 ತಂಡಗಳನ್ನು ಮತ್ತು ಪ್ಲಾಯಿಂಗ್ ದಳವನ್ನು ರಚಿಸಲಾಗಿದೆ. ರೋಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1.88.478 ಮತದಾರರಿದ್ದಾರೆ. ಇವರಲ್ಲಿ 96430 ಪುರುಷರು, 92048 ಮಹಿಳಾ ಮತದಾರರಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ 177072 ಮತದಾರರಿದ್ದಾರೆ. ಇವರಲ್ಲಿ ಮುಂಡರಗಿಯ 42477 ಮತದಾರರು ಸೇರಿದ್ದಾರೆ. ಇವರಲ್ಲಿ 21973 ಪುರುಷರು, 20503 ಮಹಿಳಾ ಮತದಾರರಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸುವಾಗ ಪ್ರತ್ಯೇಕ ಖಾತೆಯನ್ನು ತೆರೆದಿರುವುದು ಕಡ್ಡಾಯವಾಗಿದೆ. ಒಟ್ಟು ಒಬ್ಬ ಅಭ್ಯರ್ಥಿ ರು. 16 ಲಕ್ಷ ಖರ್ಚು ಮಾಡಬಹುದಾಗಿದೆ. ಚುನಾವಣೆಯ ಪ್ರಕ್ರಿಯೆ ಮುಗಿದ 30 ದಿನಗಳೊಳಗಾಗಿ ಖರ್ಚಿನ ಲೆಕ್ಕಪತ್ರವನ್ನು ಒಪ್ಪಿಸುವುದು ಕಡ್ಡಾಯವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎ.ಟಿ. ನೆರೇಗಲ್, ಸಿಪಿಐ ಸುನೀಲ ಸವದಿ, ಪ.ಪೂ. ಶಿಕ್ಷಣ ಇಲಾಖೆಯ ಬಿ.ಎಸ್. ಗೌಡರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ವಿ.ತಿಗರಿಮಠ, ಬಿಇಓ ಎಂ.ಎ. ರಡ್ಡೇರ, ತೋಟಗಾರಿಕೆ ಇಲಖೆಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

