ಗದಗ

ಮುಂಡರಗಿಗೆ ಒಲಿದ 'ಕೈ' ಟಿಕೆಟ್

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 6
ಕ್ಷೇತ್ರ ಮರುವಿಂಗಡನೆಯಲ್ಲಿ ಮುಂಡರಗಿ ಮತಕ್ಷೇತ್ರ ರದ್ದಾಗಿ, ಅರ್ಧಭಾಗ ರೋಣ ಮತಕ್ಷೇತ್ರಕ್ಕೆ ಇನ್ನರ್ಧ ಭಾಗ ಶಿರಹಟ್ಟಿ ಮತಕ್ಷೇತ್ರಕ್ಕೆ ಹರಿದು ಹಂಚಿಹೋಗಿದ್ದು, ಕಳೆದ 5 ವರ್ಷಗಳಿಂದ ತಾಲೂಕಿನ ಶಾಸಕರಿಲ್ಲದೇ ಅಭಿವೃದ್ಧಿಗಾಗಿ ಶಿರಹಟ್ಟಿ ಅಥವಾ ರೋಣ ಕ್ಷೇತ್ರದ ಶಾಸಕರನ್ನೇ ಎದುರು ನೋಡುವಂತಾಗಿತ್ತು. ಆದರೆ, ಆ ಬಾರಿ ಚುನಾವಣೆಗೆ ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂಡರಗಿಯ ರಾಮಕೃಷ್ಣ ಸಿದ್ಧಲಿಂಗಪ್ಪ ದೊಡ್ಡಮನಿಯವರ ಹೆಸರನ್ನು ಪ್ರಕಟಿಸಿದ್ದು, ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.
ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಹಲವು ದಿನಗಳು ಕಳೆದರೂ ಇದುವರೆಗೂ ಮುಂಡರಗಿ ತಾಲೂಕಿನಲ್ಲಿ ಚುನಾವಣಾ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿಲ್ಲ.
ಟಿಕೆಟ್ ಆಕಾಂಕ್ಷಿಗಳಿಂದ, ಕಾರ್ಯಕರ್ತರಿಂದ, ವಿವಿಧ ಪಕ್ಷಗಳ ಮುಖಂಡರುಗಳಿಂದ ತುಂಬಿ ತುಳುಕುತ್ತಿದ್ದ ಪಟ್ಟಣದ ಬೃಂದಾವನ ಸರ್ಕಲ್ ಹಾಗೂ ಕೊಪ್ಪಳ ಸರ್ಕಲ್‌ಗಳು ಭಣಗುಡುತ್ತಿದ್ದವು. ಕಾಂಗ್ರೆಸ್ ಟಿಕೆಟ್ ಸ್ಥಳೀಯರಿಗೆ ದೊರೆತ ವಿಷಯ ಪ್ರಕಟವಾಗುತ್ತಿದ್ದಂತೆಯೇ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ. ದಲಿತ ಕುಟುಂಬದಲ್ಲಿ ಜನಿಸಿದ ರಾಮಕೃಷ್ಣ ದೊಡ್ಡಮನಿ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು, ಜನರ ಪ್ರೀತಿಗಳಿಸುವ ಮೂಲಕ 1976ರಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. 2008ರಲ್ಲಿ ಜರುಗಿದ ಚುನಾವಣೆಯಲ್ಲಿಯೇ ಸ್ಪರ್ಧೆಗೆ ಆಕಾಂಕ್ಷಿಗಳಾಗಿದ್ದರು. ಆದರೆ, ಕಾರಣಾಂತರಗಳಿಂದ ನಿಲ್ಲಲಾಗಲಿಲ್ಲ. ಈ ಬಾರಿಯ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಈಚೆಗೆ ಕಾಂಗ್ರೆಸ್ ಸಂಭಾವ್ಯರ ಪಟ್ಟಿಯಲ್ಲಿ ಗದಗ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿಯವರ ಹೆಸರಿತ್ತಾದರೂ ಕೊನೆ ಕ್ಷಣದಲ್ಲಿ ರಾಮಕೃಷ್ಣ ಅವರಿಗೆ ಟಿಕೆಟ್ ದೊರೆತಿದೆ.
ಜನರಲ್ಲಿ ಸಂತಸ: ಈಗಾಗಲೇ ರೋಣ ಮತಕ್ಷೇತ್ರಕ್ಕೂ ಜೆಡಿಎಸ್ ಅಭ್ಯರ್ಥಿಯಾಗಿ ಮುಂಡರಗಿಯ ಹೇಮಗಿರೀಶ ಹಾವಿನಾಳಗೆ ಟಿಕೆಟ್ ನಿಗದಿಯಾಗಿದ್ದು, ಕೆಜೆಪಿಯಿಂದ ತಾಲೂಕಿನ ಮುರುಡಿ ತಾಂಡಾದ ಶಿವಪ್ಪ ಪವಾರ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲು ಪ್ರೊ. ರಾಜೇಶ್ವರಿ ಇನಾಮದಾರ್ ಸಹ ಸಾಕಷ್ಟು ಪ್ರಯತ್ನದಲ್ಲಿದ್ದಾರೆ. ಎಲ್ಲಕ್ಕಿಂತ ಮೊದಲು ಕಾಂಗ್ರೆಸ್ ಸ್ಥಳೀಯರಿಗೆ ಆದ್ಯತೆ ನೀಡಿರುವುದು ಜನತೆಗೆ ಸಂತಸ ತಂದಿದೆ.

-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.