ಹೊರಟ್ಟಿ ಇರುವವರೆಗೂ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬೆಳೆಯಲ್ಲ
ಕನ್ನಡಪ್ರಭ ವಾರ್ತೆ, ಗದಗ, ಏ. 12
ಬಸವರಾಜ ಹೊರಟ್ಟಿ ಜೆಡಿಎಸ್ನಲ್ಲಿರುವವರೆಗೂ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬೆಳವಣಿಗೆ ಹೊಂದುವುದಿಲ್ಲ. ಬದಲಾಗಿ ಕ್ಷೀಣಿಸುತ್ತದೆ ಎಂದು ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಶ್ರೀನಿವಾಸ ಶೇಠ ಹೇಳಿದರು. ಅವರು ಶುಕ್ರವಾರ ನಗರದ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೊರಟ್ಟಿ ಉತ್ತರ ಕರ್ನಾಟಕದಲ್ಲಿ ನಾಯಕರೆಂದು ಜೆಡಿಎಸ್ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಬಂದ ನಂತರ ಈ ಭಾಗದಲ್ಲಿ ಪಕ್ಷವು ಒಂದೇ ಒಂದು ವಿಧಾನಸಭಾ ಕ್ಷೇತ್ರವನ್ನು ಗೆದ್ದಿಲ್ಲ. ಅವರ ಅನುಕೂಲ ಸಿಂಧು ರಾಜಕಾರಣದಿಂದಾಗಿ ನೈಜ ಕಾರ್ಯರ್ಕರಿಗೆ ತೀವ್ರ ನೋವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬೆಳೆಸಬೇಕು ಎನ್ನುವ ಕುಮಾರಸ್ವಾಮಿ ಹಾಗೂ ದೇವಗೌಡರಿಗೆ ಈ ವಿಷಯವನ್ನು ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಅದಕ್ಕಾಗಿಯೇ ನಾವೆಲ್ಲ ಇಂದು ಸಾಮೂಹಿಕವಾಗಿ ಜೆಡಿಎಸ್ ತ್ಯಜಿಸಿ, ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ. ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಅತ್ಯಂತ ಹೀನಾಯ ಸೋಲುಂಡಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೊರಟ್ಟಿಯವರು ಕನಿಷ್ಟ ಪಕ್ಷ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿಲ್ಲ ಎಂದು ಆರೋಪಿಸಿದರು.
ಮತ್ತೋರ್ವ ಮಾಜಿ ಜಿಲ್ಲಾಧ್ಯಕ್ಷ ರವಿ ದಂಡಿನ ಮಾತನಾಡಿ, ನಾನು ಹಲವಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ನಮ್ಮ ತಂದೆಯವರೂ ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಹೊರಟ್ಟಿ ಅವರ ತಪ್ಪು ನಿರ್ಧಾರಗಳಿಂದ ಮನಸ್ಸಿಗೆ ತೀವ್ರ ನೋವಾಗಿದೆ. ನಾನು ಈ ಬಾರಿ ಎಲ್ಲಿಯೂ ಟಿಕೆಟ್ ನೀಡುವಂತೆ ಮನವಿ ಮಾಡಿರಲಿಲ್ಲ. ಆದಾಗ್ಯೂ ನನ್ನ ಹಾಗೂ ನಮ್ಮ ಹಿಂಬಾಲಕರನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ಮನನೊಂದು ನಾವೆಲ್ಲ ಪಕ್ಷ ತ್ಯಜಿಸುತ್ತಿದ್ದೇವೆ ಎಂದರು. ಹಾಲಪ್ಪ ಹರ್ತಿ, ಗಣೇಶ ರಾಠೋಡ, ಶಿವಪ್ಪ ರಾಠೋಡ, ಡಿ.ಜಿ.ನಾಯಕ ಸೇರಿದಂತೆ ಅಪಾರ ಬೆಂಬಲಿಗರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

