ಗದಗ

ಅಭ್ಯರ್ಥಿಗಳ ಕಸರತ್ತು

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 12
ಒಂದೆಡೆ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದರೆ, ಮತ್ತೊಂದೆಡೆ ಮದುವೆ ಸಮಾರಂಭಗಳು ಜೋರಾಗಿಯೇ ನಡೆಯುತ್ತಿರುವುದರಿಂದ ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದ ರಸ್ತೆಗಳು, ಅಂಗಡಿ-ಮುಂಗಟ್ಟುಗಳು ಜನರಿಂದ ತುಂಬಿ ತುಳುಕುತ್ತಿವೆ.
ವಿಧಾನಸಭಾ ಚುನಾವಣೆಯ ಕಾವು ಬಿಸಿಲಿನೊಂದಿಗೆ ಸೇರಿ ಧಗಧಗಿಸುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ನಾನಾ ಕಸರತ್ತು ನಡೆಸಿರುವ ಅಭ್ಯರ್ಥಿಗಳು ಆರೋಪ, ಪ್ರತ್ಯಾರೋಪಗಳಲ್ಲಿಯೂ ತೊಡಗಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಈಗ ಚುನಾವಣಾ ಅಖಾಡಕ್ಕಿಳಿಯುತ್ತಿವೆ. ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ನಡೆಸುತ್ತಿರುವುದು ಕಂಡುಬರುತ್ತಿದೆ.
ಕಾಂಗ್ರೆಸ್ ಪಕ್ಷ ಸಜ್ಜು: ಕಳೆದ ಬಾರಿ ಗದಗ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅಗ್ನಿ ಪರೀಕ್ಷೆ ಎಂದೇ ಹೇಳಬಹುದು. ಆಡಳಿತ ಪಕ್ಷದೆದುರು ಕಾಂಗ್ರೆಸ್ ಸೆಡ್ಡು ಹೊಡೆಯಲು ಸಜ್ಜಾಗಿದೆ. ಆದರೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂಬ ಕೂಗು ಕೇಳಿ ಬರುತ್ತಿದ್ದು, ಬಂಡಾಯದ ಭೀತಿಯೂ ಕಾಡುತ್ತಿದೆ. ಕಾಂಗ್ರೆಸ್ ಮುಖಂಡರು ರಾಜೀ ಸಂಧಾನಕ್ಕೂ ಮುಂದಾಗಿದ್ದಾರೆ.
ಶಾಸಕ ಲಮಾಣಿ ಪ್ರಚಾರ: ಬಿಜೆಪಿ ಅಭ್ಯರ್ಥಿ ಶಾಸಕ ರಾಮಣ್ಣ ಲಮಾಣಿ ಈ ಬಾರಿಯೂ ಗೆಲುವು ನನ್ನದೇ ಎಂದು ವಿಶ್ವಾಸದಿಂದಲೇ ಹೇಳಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಬಿರುಸಿನ ಪ್ರಚಾರ ಕಾರ್ಯಕೈಗೊಂಡಿದ್ದಾರೆ.ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿದ ಮುಖಂಡರು ಪಕ್ಷದ ಸಾಧನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ನೀಡಿದ್ದು, ಬಹುತೇಕ ವಾರ್ಡ್‌ಗಳು ಅಭಿವೃದ್ಧಿಗೊಂಡಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕೈಗೊಳ್ಳಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಿಎಸ್‌ಆರ್ ಪ್ರಚಾರ: ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ ಕಳೆದ 10 ದಿನಗಳಿಂದ ಪಕ್ಷದ ಜಿಲ್ಲಾಧ್ಯಕ್ಷ ಗಂಗಣ್ಣ ಮಹಾಂತಶೆಟ್ಟರ್ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಮಾತ್ರ ನಿರ್ಲಿಪ್ತವಾಗಿದ್ದು, ಅಧಿಕೃತ ಪಕ್ಷದ ಅಭ್ಯರ್ಥಿಯನ್ನೇ ಘೋಷಣೆ ಮಾಡದಿರುವುದು ಕಾರ್ಯಕರ್ತರಲ್ಲಿ ಬೇಸರ ತರಿಸಿದೆ. ಪ್ರಚಾರ ಕಾರ್ಯದಲ್ಲೂ ಹಿನ್ನಡೆಯಾದಂತಾಗಿದೆ.
ಚುನಾವಣಾಧಿಕಾರಿಗಳಿಂದ ತೆರವು: ಗುರುವಾರ ಪಟ್ಟಣದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ  ತಂದೇ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಮಾಡಿದ್ದು, ಕಾರ್ಯಾಲಯ ಗುರುತು ಸಿಗುವ ಸಲುವಾಗಿ ಕೇವಲ ಪಕ್ಷದ ಧ್ವಜ ಹಾಗೂ ಬ್ಯಾನರ್ ಕಟ್ಟಬೇಕೆಂಬ ಚುನಾವಣಾ ನಿಯಮವಿದ್ದರೂ ಇದನ್ನು ಮೀರಿ ರಾಷ್ಟ್ರ, ರಾಜ್ಯಮಟ್ಟದ ನಾಯಕರ ಭಾವಚಿತ್ರ ಹೊಂದಿರುವ ಬೃಹತ್ ಪ್ರಮಾಣದ ಕಟೌಟ್ ನಿಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಎಲ್ಲವನ್ನು ತೆರವುಗೊಳಿಸಿದ್ದಾರೆ.
- ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.