ಗದಗ

ಸಿಎಂ ಸ್ಥಾನಾಕಾಂಕ್ಷಿಯಲ್ಲ

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 14  
ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನನ್ನ ಮುಂದಿರುವ ಪ್ರಮುಖ ಗುರಿ ಎಂದು ಗದಗ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು.
ಕಳೆದ ಬಾರಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎನ್ನುವ ಪ್ರಚಾರ ಪಡೆದಿದ್ದ ಎಚ್ಕೆ ಈ ಬಾರಿ ದೂರವಾಗಿದ್ದೇಕೆ ಎಂದು ಕೇಳಿದಾಗ, ಈ ಹಿಂದೆ ಕಾರ್ಯಕರ್ತರೇ ಹಾಗೆ ಪ್ರಚಾರ ಮಾಡಿದ್ದರು. ನಾನು ಹೆಚ್ಚಿನ ಗಮನ ನೀಡಿಲ್ಲ. ಈಗಲೂ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಇಲ್ಲಿ ಗೆಲುವು ಸಾಧಿಸುವುದು ಹಾಗೂ ಜಿಲ್ಲೆಯ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿ ಅಧಿಕಾರಕ್ಕೆ ತರುವುದು ನನ್ನ ಉದ್ದೇಶ ಎಂದು ಉತ್ತರಿಸಿದರು.
2 ಲಕ್ಷ ಎಕರೆ ನೀರಾವರಿ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಗದಗ ಜಿಲ್ಲೆಯ ವಿವಿಧ ತಾಲೂಕುಗಳ 2 ಲಕ್ಷ ಎಕರೆಗೂ ಅಧಿಕ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು. ನಾನು ನೀರಾವರಿ ಮಂತ್ರಿಯಾಗಿದ್ದ ವೇಳೆಯಲ್ಲಿ ಜಿಲ್ಲೆಯ 70 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ನೀಡುವ ಯೋಜನೆಗೆ ಅನುಮೋದನೆ ನೀಡಲಾಗಿತ್ತು ಎಂದು ಸ್ಮರಿಸಿದರು.
ಮನಮೋಹನ್‌ಸಿಂಗ್ ಕ್ರಮ ಶ್ಲಾಘನೀಯ
ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಜಾರಿಗೆ ತಂದಿರುವ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರವಾಗಿದೆ. ಸಾಕಷ್ಟು ಹಗರಣಗಳು ಹೊರ ಬರಲು ಇದು ಸಹಕಾರಿಯಾಗಿದೆ. ಎನ್‌ಆರ್‌ಇಜಿಎ, ಆಹಾರ ಭದ್ರತೆ ಸೇರಿದಂತೆ ಬಡವರಿಗಾಗಿ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ಅವರು ಜಾರಿಗೆ ತಂದಿದ್ದಾರೆ. ಇವೇ ಕಾಂಗ್ರೆಸ್‌ಗೆ ಶ್ರೀರಕ್ಷೆ ಎಂದರು.
ರಾಜ್ಯಕ್ಕೆ ಕೆಟ್ಟ ಹೆಸರು: ಐದು ವರ್ಷಗಳ ಕಾಲ ರಾಜ್ಯವನ್ನು ಆಳಿದ ಬಿಜೆಪಿ ಸರ್ಕಾರ ಮತ್ತು ಅದರ ಸಚಿವರು ನಡೆಸಿದ ಭ್ರಷ್ಟಾಚಾರಗಳಿಂದಾಗಿ ರಾಜ್ಯ ತಲೆ ತಗ್ಗಿಸುವ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಡಜನ್‌ಗಟ್ಟಲೆ ಮಂತ್ರಿಗಳು ಜೈಲು ಪಾಲಾಗಿದ್ದು ಇವರ ಸಾಧನೆ ಎಂದು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಲೇವಡಿ ಮಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಬಿ.ಬಿ. ಅಸೂಟಿ, ರೇವಣೆಪ್ಪ ಕೊಂಡಿಕೊಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.