ಹಂದಿ ಹಾವಳಿ: ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 16
ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಭಾನುವಾರ ವಿನಾಯಕ ನಗರದ ಸಮೃದ್ಧ ರಮೇಶ ಬಾವಿಕಟ್ಟಿ ಎಂಬ 3 ವರ್ಷದ ಮಗುವಿಗೆ ಹಂದಿ ಕಚ್ಚಿ ಗಾಯಗೊಳಿಸಿದೆ. ಹಂದಿಗಳ ಹಾವಳಿಯಿಂದ ಅಲ್ಲಿನ ಸಾರ್ವಜನಿಕರು ಆಕ್ರೋಶಗೊಂಡು ಹಂದಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಎಲ್ಲ ಪ್ರದೇಶಗಳಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ಚಿಕ್ಕಮಕ್ಕಳನ್ನು ಹೊರಗಡೆ ಆಟವಾಡಲೂ ಬಿಡಲಾರದಂತಾಗಿದೆ. ಈ ಹಿಂದೆ ಅನೇಕ ಬಾರಿ ಇದೇ ರೀತಿಯಾಗಿದ್ದು, ಹಂದಿಗಳನ್ನು ಊರ ಹೊರಗೆ ಸಾಗಿಸಬೇಕೆಂದು ಆಗ್ರಹ ಪಡಿಸಿದರೂ ಪುರಸಭೆಯು ಯಾವುದೇ ಕ್ರಮ ಕೈಗೊಂಡಿಲ್ಲ. ಸೈಕಲ್ ಮತ್ತು ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ ಎಂದು ಗಾಯಗೊಂಡ ಮಗುವಿನ ತಂದೆ ರಮೇಶ ಬಾವಿಕಟ್ಟಿ ತಿಳಿಸಿದರು.
ಪಟ್ಟಣದ ಹಲವಾರು ಕಡೆಗಳಲ್ಲಿ ಖಾಲಿ ಜಾಗೆಗಳಲ್ಲಿ ಹಂದಿಗಳು ಬಿಡಾರ ಹೂಡಿದ್ದು, ಆ ಪ್ರದೆಶಗಳು ಹಂದಿಗಳನ್ನು ಉತ್ಪಾದಿಸುವ ಜತೆಗೆ ರೋಗಗಳು ಹರಡುವ ತಾಣಗಳಾಗಿವೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮವುಂಟಾಗುತ್ತದೆ. ಈ ಕುರಿತು ಪುರಸಭೆಗೆ ಸಾಕಷ್ಟು ಬಾರಿ ಲಿಖಿತವಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಪುರಸಭೆಯವರು ಕೂಡಲೇ ಕ್ರಮಕೈಗೊಂಡು ಮುಂದಾಗುವ ಅನಾಹುತ ತಡೆಯಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ ಮಾತನಾಡಿ, ಕೂಡಲೇ ಹಂದಿ ಸಾಕಾಣಿಕೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಹಂದಿಗಳ ಸ್ಥಳಾಂತರಕ್ಕೆ ಮುಂದಾಗುತ್ತೇವೆ ಎಂದರು. ವಿನಾಯಕ ನಗರದ ಯುವ ಮುಖಂಡ ಸತೀಶ ಪಾಟೀಲ, ಸಂತೋಷ ಹೂಲಿಕಟ್ಟಿ, ಜಗದೀಶ ಆಚಾರ್, ಎನ್.ಎಂ. ವಾಲಿ, ಎಸ್.ಎಸ್. ಅಕ್ಕಿ, ಎಸ್.ಡಿ. ಪತ್ತಾರ, ಎಸ್.ಎಫ್. ಘಂಟಾಮಠ, ಬಂಗಾರೆಪ್ಪ ಅರಳಿ, ಡಾ. ಪಿ.ಜಿ. ಪಾಟೀಲ, ಪಿ.ಕೆ. ಬದಿ, ಅನೀಲ ಕುಲಕರ್ಣಿ, ಗಂಗಾಧರ ಬಾಲೇಹೊಸೂರ, ರವಿ. ಚರ್ಕಸಾಲಿ, ಶಿವಪ್ಪ ಕೊರದಾಳ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

