ಗದಗ

ಜಾತಿ ಲೆಕ್ಕಾಚಾರ ಯಶಸ್ವಿಯಾದೀತೆ?

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 18
ವಿಧಾನಸಭೆ ಚುನಾವಣೆ ದಿನೇ ದಿನೇ ವಿಚಿತ್ರ ತಿರುವು ಪಡೆಯುತ್ತಿದ್ದು, ಹೊಸ ಕೆಮಿಸ್ಟ್ರಿಯೊಂದು ರೂಪು ತಳೆದಿದೆ. ಲಿಂಗಾಯತರೇ ನಿರ್ಣಾಯಕವಾಗಿರುವ ಗದಗ ಜಿಲ್ಲೆಯಲ್ಲಿ ಜಾತಿ ರಾಜಕಾರಣದ ಗಾಳಿ ಜೋರಾಗಿ ಬೀಸುತ್ತಿದೆ. ಇದರಿಂದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ತೊಂದರೆ ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆ.
1957ರಿಂದ 2008ರ ವರೆಗೆ ಎಲ್ಲ ಚುನಾವಣೆಗಳನ್ನು ಗಮನಿಸಿದಲ್ಲಿ ಲಿಂಗಾಯತ ಮತದಾರರೇ ಗದಗ ಜಿಲ್ಲೆಯಲ್ಲಿ ನಿರ್ಣಾಯಕವಾಗಿದ್ದಾರೆ. ಲಿಂಗಾಯತರನ್ನು ಮತ್ತು ತಮ್ಮ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ಅನ್ಯ ಸಮುದಾಯದವರನ್ನೂ ಗೆಲ್ಲಿಸಿದ್ದಾರೆ. ಇದು ಈ ಬಾರಿಯೂ ಅದು ಮರುಕಳಿಸುವ ಸಾಧ್ಯತೆ ಇದೆ.
ಲೆಕ್ಕಾಚಾರ ಯಶಸ್ವಿ: 2004 ಹಾಗೂ 2008ರ ಚುನಾವಣೆಯಲ್ಲಿ ಜಾತಿ ರಾಜಕಾರಣ ಬಲು ಜೋರಾಗಿ ಪ್ರಭಾವ ಬೀರಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಲಿಂಗಾಯತರ ನಾಯಕರಾಗಿ ಹೊರಹೊಮ್ಮಿ, ಸಮುದಾಯದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಯಶಸ್ವಿಯಾದರು. ಜಾತಿಯನ್ನು ಮಾನದಂಡವಾಗಿ ಪರಿಗಣಿಸಿ ಲಿಂಗಾಯತ ಸಮುದಾಯದ ಪ್ರಬಲ ಕೋಮುಗಳಿಗೆ ಟಿಕೆಟ್ ನೀಡಿದ್ದು ಬಿಜೆಪಿಗೆ ಅನುಕೂಲವಾಯಿತು. ಲೆಕ್ಕಾಚಾರ ಯಶಸ್ವಿಯೂ ಆಗಿತ್ತು.
ರಾಷ್ಟ್ರೀಯ ಪಕ್ಷಗಳಿಗೆ ತೊಂದರೆ: ಈ ಬಾರಿ ಬಿಜೆಪಿ ಮೂರು ಹೋಳಾಗಿದ್ದು ಬಿಎಸ್‌ವೈ ಗದಗ ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೀಸಲು ಕ್ಷೇತ್ರವಾದ ಶಿರಹಟ್ಟಿ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಲಿಂಗಾಯತರನ್ನೇ ಯಡಿಯೂರಪ್ಪ ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇದೆ.
ಜಾತಿವಾರು ಮತಗಳ ವಿವರ: ಜಿಲ್ಲೆಯಲ್ಲಿ 4 ವಿಧಾನಸಭೆ ಕ್ಷೇತ್ರಗಳ ಸೇರಿ ಒಟ್ಟು 7,10,987 ಮತಗಳಿವೆ. ಲಿಂಗಾಯತರು-2,49,069 (ಅದರಲ್ಲಿ ಪಂಚಮಸಾಲಿ ಸಮುದಾಯ 1,12,820, ಲಿಂಗಾಯತರ ಒಳಪಂಡಗಳು 1,36,249), ಕುರುಬರು-95,472, ಮುಸ್ಲಿಂ-89,075, ಎಸ್ಸಿ- 74,375, ಎಸ್ಟಿ-43,204, ಕ್ರಿಶ್ಚಿಯನ್-2,947, ಬ್ರಾಹ್ಮಣ-18,301, ಜೈನರು-5,907, ಮರಾಠಾ-17,455, ಲಂಬಾಣಿ-18,105 ಹಾಗೂ ಇತರೇ ಸಣ್ಣ ಸಮುದಾಯಗಳ ಒಟ್ಟು 97,077 ಮತದಾರರಿದ್ದಾರೆ.
ಬಿಜೆಪಿ ಜಾಣ ನಡೆ: ಲಿಂಗಾಯತ ಸಮುದಾಯದ ಪ್ರಮುಖ ಒಳಪಂಗಡವಾದ ಪಂಚಮಸಾಲಿಗೆ 2008ರಂತೆಯೇ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಪ್ರಾಧಾನ್ಯ ನೀಡುವ ಮೂಲಕ ಬಿಜೆಪಿ ಜಾಣ್ಮೆಯ ನಡೆ ಇಟ್ಟಿದೆ ಎಂದು ರಾಜಕೀಯ ವಿಶ್ಲೇಷಕರು ವಿಮರ್ಶಿಸುತ್ತಾರೆ. ಅತಂಹ ಬೆಳವಣಿಗೆ ಕಂಡು ಬರುತ್ತಿದೆ. ಆದರೆ, ಕಳೆದ ಚುನಾವಣೆಯಂತೆ ಈ ಬಾರಿಯೂ ಜಾತಿ ಲೆಕ್ಕಾಚಾರ ನಡೆಯುತ್ತಾ ಎಂದು ಕಾದು ನೋಡಬೇಕು.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.