ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಮಹಿಳೆಗೆ ಅದೃಷ್ಟ ಖುಲಾಯಿಸುವುದೇ?
ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 19
ಶಿರಹಟ್ಟಿ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಕಣಕ್ಕಿಳಿದು, ವಿಧಾನಸಭೆ ಪ್ರವೇಶಿಸಿ ಅರ್ಧ ಶತಮಾನವೇ ಉರುಳಿದೆ. ಈಗ ಪರಿಶಿಷ್ಟ ಜಾತಿಗೆ ಮೀಸಲಿರುವ ಈ ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಜಯಶ್ರೀ ಹಳ್ಳೆಪ್ಪನವರ ಹಾಗೂ ಕೆಜೆಪಿಯಿಂದ ಶೋಭಾ ಕೃಷ್ಣಪ್ಪ ಲಮಾಣಿ ಸ್ಪರ್ಧೆಗಿಳಿದಿದ್ದು, ಕ್ಷೇತ್ರದಲ್ಲಿ ಮತ್ತೆ ಮಹಿಳಾ ಶಾಸಕರು ಆಯ್ಕೆಯಾಗುವರೇ ಎನ್ನುವ ಕುತೂಹಲ ಮೂಡಿದೆ.
ಕ್ಷೇತ್ರದಲ್ಲಿ ಈ ಹಿಂದೆ ಅಂದರೆ 1957ರಲ್ಲಿ ಮಹಿಳಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೀಲಾವತಿ ಮಾಗಡಿ ಸ್ಪರ್ಧಿಸಿ ಶಾಸಕರಾಗಿದ್ದರು. ತದನಂತರ ಈವರೆಗೂ ಯಾರೊಬ್ಬರೂ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ಈ ಬಾರಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಪ್ರಮುಖ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ. ಆದ್ದರಿಂದ ಇಲ್ಲಿನ ಮಹಿಳೆಯರಲ್ಲಿ ಆಸೆ ಚಿಗುರಿದೆ.
ಶಿರಹಟ್ಟಿ ಕ್ಷೇತ್ರ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿದ್ದರಿಂದ ಸಾಮಾನ್ಯ ವರ್ಗದ ಸ್ಪರ್ಧಾ ಆಕಾಂಕ್ಷಿಗಳು ಕಣದಿಂದ ವಂಚಿತರಾಗಿದ್ದಾರೆ.
ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ ತಾಲೂಕಿನ ಹೊಳೆ-ಇಟಗಿ ಗ್ರಾಮದ ವಾಲ್ಮೀಕಿ ಜನಾಂಗದ ಸಣ್ಣವೀರಪ್ಪ ಹಳ್ಳೆಪ್ಪನವರ ಸೊಸೆ. ಹಳ್ಳೆಪ್ಪನವರ ಕುಟುಂಬ ಜಯಶ್ರೀ ಅವರನ್ನು ಕಣಕ್ಕೆ ಇಳಿಸಿದೆ.
ಕೆಜೆಪಿಯಿಂದ ಶೋಭಾ ಸ್ಪರ್ಧೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಕೆಜೆಪಿಯಿಂದ ಮತ್ತೋರ್ವ ಮಹಿಳಾ ಅಭ್ಯರ್ಥಿ ಶೋಭಾ ಕೃಷ್ಣಪ್ಪ ಲಮಾಣಿ ಸ್ಪರ್ಧೆಗಿಳಿದಿದ್ದಾರೆ. ಹಾಗಾಗಿ ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರವಾಗಿರುವ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಚುನಾವಣೆ ರಂಗೇರುತ್ತಿದೆ. ಬಿಎಸ್ವೈ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಪ್ರಚಾರ ಕೈಗೊಂಡಿರುವ ಕೆಜೆಪಿ ಅಭ್ಯರ್ಥಿಯು ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಸ್ಪರ್ಧೆ ನೇರವಾಗಿ ಬಿಜೆಪಿ ಹಾಲಿ ಶಾಸಕ ರಾಮಣ್ಣ ಲಮಾಣಿ ಗೆಲುವಿಗೆ ಅಡ್ಡಗಾಲಾಗುವ ಸಾಧ್ಯತೆ ಇದೆ. ಬಿಎಸ್ಆರ್ ಕಾಂಗ್ರೆಸ್ನ ಜಯಶ್ರೀ ಹಳ್ಳೆಪ್ಪನವರ ಕಾಂಗ್ರೆಸ್ ಮತಗಳನ್ನು ಸೆಳೆದಲ್ಲಿ ಫಲಿತಾಂಶದಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆ ಇದೆ.
ಕ್ಷೇತ್ರದಲ್ಲಿ ಒಟ್ಟು 177055 ಮತದಾರರಿದ್ದು, 85335 ಮಿಕ್ಕಿ ಮಹಿಳಾ ಮತದಾರರಿದ್ದಾರೆ. ಇವರೆಲ್ಲಾ ಜಾತಿ, ಪಕ್ಷದ ಹಂಗು ತೊರೆದು ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳನ್ನು ಬೆಂಬಲಿಸಿದಲ್ಲಿ ಕ್ಷೇತ್ರದಲ್ಲಿ ಮಹಿಳಾ ಶಾಸಕಿ ಆಯ್ಕೆಯಾಗುವುದು ಗ್ಯಾರಂಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

