ಗದಗ

ಸಿದ್ರಾಮಣ್ಣಾ ಬದ್ಲಾದ್ರಾ...?

Published On :

ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಏ. 20
ನಮ್ಮ ಸಿದ್ರಾಮಣ್ಣಾ ಬದ್ಲಾದ್ರಾ.... ಅದ್ಯಾಕ ಹಿಂಗ್ ಮಾತಾಡಾಕತ್ತಾರಾ.... ಹೀಗೊಂದು ಚರ್ಚೆಗೆ ಮತ್ತು ಜಿಜ್ಞಾಸೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಲವಾಗಿ ಕಾಡಿತು...ಇದಕ್ಕೆ ಸಾಕ್ಷಿಯಾದದ್ದು ಶನಿವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ...
ಅದೇನು ವಿಶೇಷ ಅಂತಿರಾ... ಗದಗ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿ, ರಾಜ್ಯ ಮಟ್ಟದ ನಾಯಕ ಎಚ್.ಕೆ. ಪಾಟೀಲ ಪರ ಪ್ರಚಾರಾರ್ಥ ಆಯೋಜಿಸಿದ್ದ ಸಮಾವೇಶ ಪ್ರಾರಂಭವಾಗಬೇಕಾಗಿದ್ದು ಬೆಳಗ್ಗೆ 10ಕ್ಕೆ, ಆದ್ರೆ ಸಿದ್ದರಾಮಯ್ಯ ಬಂದಿದ್ದು ಮಧ್ಯಾಹ್ನ 1ಕ್ಕೆ, ಅಲ್ಲಿಯವರೆಗೆ ಕಾದು ಸುಸ್ತಾಗಿದ್ದ ಕಾರ್ಯರ್ಕತರಿಗೆ ಸಿದ್ದರಾಮಯ್ಯನವರು ಭಾಷಣ ಚೇತೋಹಾರಿಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು.   
ಆದ್ರೆ ಇಲ್ಲಿ ಹಾಗಾಗಲೇ ಇಲ್ಲ. ಸಿದ್ದರಾಮಯ್ಯ.. ತಮ್ಮ ಎಂದಿನ ಒರಟು ಧ್ವನಿ... ಮೋನಚಾದ ಮಾತಿನ ಶೈಲಿಯ ಮೂಲಕವೇ ಬಿಜೆಪಿ, ಜೆಡಿಎಸ್, ಕೆಜೆಪಿ ಪಕ್ಷಗಳ ತಪ್ಪುಗಳನ್ನು ಟೀಕಿಸುವುದು. ಅದನ್ನು ತಮ್ಮ ಭಾಷೆ ಮತ್ತು ವಾಸ್ತವ ಅಂಶಗಳಿಗೆ ಹೋಲಿಕೆ ಮಾಡಿ ಹೇಳುವ ಮೂಲಕ ಮಾತನಾಡುತ್ತಿದ್ದರು. ರಾಜಕೀಯ ವ್ಯವಸ್ಥೆಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುತ್ತಿದ್ದರು...ಆದ್ರೆ ಇದ್ಯಾವುದೂ ಈ ಸಭೆಯಲ್ಲಿ ಕೇಳಿ ಬರಲಿಲ್ಲ. ವಿರೋಧ ಪಕ್ಷಗಳನ್ನು ಟೀಕಿಸದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನೆಲ್ಲಾ ಮಾಡ್ತೀವಿ ಅಂತಾ ಹೇಳಿದರು. ಬಿಎಸ್‌ವೈ ಜೈಲಿಗೆ ಹೋದದ್ದೇ ಅವರ ಸಾಧನೆ ಎಂದು ಲೇವಡಿ ಮಾಡಿದ್ದನ್ನು ಹೊರತುಪಡಿಸಿದಲ್ಲಿ ಅವರ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ರಾಜ್ಯದ ಯಾವುದೇ ಕಾರ್ಯಕ್ರಮದಲ್ಲಿ (ಈ ಮೊದಲು) ಭಾಷಣ ಮಾಡುತ್ತಿದ್ದ ವೇಳೆಯಲ್ಲಿ ಯಾರಾದ್ರೂ ಮಧ್ಯೆ ಮಾತಾಡಿದ್ರೆ. ಹೌದು ಕೂತ್ಕೊಳಪ್ಪಾ... ನಾನ್ ಮಾತಾಡ್ತಾ ಇದ್ದೀನಿ.. ಮಧ್ಯೆ ಇವನೊಬ್ಬ... ಕೂತ್ಕೊ ಎನ್ನುತ್ತಿದ್ದರು. ಆದ್ರೆ ಶನಿವಾರ ಮಾತ್ರ ಹಲವಾರು ಕಾರ್ಯರ್ಕತರು ಅವರು ಮಾತನಾಡುವ ವೇಳೆಯಲ್ಲಿಯೇ ನಮ್ಗೆ ಅಕ್ಕಿ ಬಂದಿಲ್ಲಾ.....ಮನೆ ಕೊಟ್ಟಿಲ್ಲಾ ಎಂದು ಮಧ್ಯೆ ಮಧ್ಯೆ ಮಾತನಾಡಿದರೂ ಅವರ ಮಾತುಗಳನ್ನು ನಿಧಾನವಾಗಿ ಆಲಿಸಿ.. ನಂತರ ಅದೇ ವಿಷಯವನ್ನೇ ತಮ್ಮ ಭಾಷಣದಲ್ಲಿ ಬಳಕೆ ಮಾಡಿಕೊಂಡು ಮಾತನಾಡಿದ್ದು ಗಮನಾರ್ಹವಾಗಿತ್ತು.
ಆಸಕ್ತಿ ಇರಲಿಲ್ಲವೇ: ಕಾರ್ಯಕ್ರಮ ವಿಳಂಬವಾಗಿ ಪ್ರಾರಂಭವಾಯಿತು. ವೇದಿಕೆಗೆ ಬಂದ ಸಿದ್ದರಾಮಯ್ಯ ತಮ್ಮ ಸ್ಥಾನದಲ್ಲಿ ಕುಳಿತ 5 ನಿಮಿಷಕ್ಕೆ ನಿದ್ದೆಗೆ ಜಾರಿದರು. ಅವರ ನಿದ್ದೆ ಜೋರಾಗಿತ್ತು.  ಕಾರ್ಯಕರ್ತರು ಜಯಘೋಷ ಹಾಕುತ್ತಿದ್ದರೂ ಅವರ ತೂಕಡಿಕೆ ಮಾತ್ರ ನಿಲ್ಲಲಿಲ್ಲ.
ಕೈ ಮುಗಿದು ಮನವಿ: ಕೇವಲ ತಮ್ಮ ಭಾಷಣದ ಮೂಲಕವಷ್ಟೇ ಅಲ್ಲ, ಭಾಷಣ ಕೊನೆಗೊಳ್ಳುತ್ತಿದ್ದಂತೆ ಜನರತ್ತ ಕೈ ಮುಗಿದು, ದಯವಿಟ್ಟು ರಾಜ್ಯದಲ್ಲಿ ಉತ್ತಮ ಹಾಗೂ ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರಿ ಎಂದು ಬೇಡಿಕೊಂಡಿದ್ದು ವಿಶೇಷವಾಗಿತ್ತು. ಅವರು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದ ರೇಸ್‌ನಲ್ಲಿದ್ದು, ಗದಗ ಜಿಲ್ಲೆಯಿಂದಲೂ ಪಕ್ಷ ಹೆಚ್ಚಿನ ಸ್ಥಾನಗಳಿಸಿದಲ್ಲಿ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿರಬೇಕು. ಆದರೆ, ಒಂದಂತೂ ನಿಜ.. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಜ್ಞಾವಂತ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಸಿದ್ರಾಮಣ್ಣಾ ಸಿಎಂ ಸ್ಥಾನಕ್ಕಾಗಿ ಬದ್ಲಾದ್ರಾ ಎಂದು ಮಾತನಾಡಿಕೊಳ್ಳುತ್ತಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.