ಗದಗ

ಮಾನಸಿಕ ಕಾಯಿಲೆ ನಿರ್ಲಕ್ಷಿಸಬೇಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಏ. 21
ದೇಶಾದ್ಯಂತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರನ್ನು ನಿರ್ಲಕ್ಷಿಸದೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮನೋರೋಗಿಗಳು ಗುಣಮುಖರಾಗುತ್ತಾರೆ ಎಂದು ಧಾರವಾಡದ ಡಾ. ಆನಂದ ಪಾಂಡುರಂಗಿ ಹೇಳಿದರು.
ಅವರು ಭಾನುವಾರ ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜ. ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಐಎಂಎ ಗದಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ದೇಶಾದ್ಯಂತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಾರ್ವಜನಿಕರು ಈ ಕುರಿತು ಜಾಗೃತಿ ಹೊಂದುವುದು ಅತ್ಯವಶ್ಯಕವಾಗಿದೆ. ದೆವ್ವ, ಭೂತ ಬಂದಿದೆ ಎಂದು ಮಾನಸಿಕ ರೋಗಿಗಳನ್ನು ದೂಷಿಸುವುದು ಸರಿಯಲ್ಲ. ಮಾನಸಿಕ ಖಿನ್ನತೆಯಿಂದಾಗಿ ಅವರು ಈ ರೀತಿ ವರ್ತನೆ ಮಾಡುತ್ತಾರೆಯೇ ಹೊರತು, ಯಾವುದೇ ದೆವ್ವ, ಭೂತ ಬಂದಿರುವುದಕ್ಕಲ್ಲ. ಆದರೆ, ಇಂದಿನ ಆಧುನಿಕ ದಿನಮಾನಗಳಲ್ಲಿ ಹಲವು ಕಡೆಗಳಲ್ಲಿ ಇದೇ ಪ್ರವೃತ್ತಿ ಇರುವುದರಿಂದ ಮಾನಸಿಕ ಖಿನ್ನತೆ ಸಮಸ್ಯೆ ಹೊಂದಿರುವವರು ಹೆಚ್ಚಾಗುತ್ತಿದ್ದಾರೆ.
ಈಗ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವವರಲ್ಲಿ ಯುವಕರು ಅದರಲ್ಲಿಯೂ ವಿಶೇಷವಾಗಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಓದುವಂತೆ ಒತ್ತಡ ಹೇರುವುದು. ಮಕ್ಕಳ ಶಿಕ್ಷಣದಲ್ಲಿ ಹಿನ್ನಡೆಯಾದಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬದೆ ಅವರನ್ನು ಗದರಿಸುತ್ತಾರೆ. ಇದರಿಂದಾಗಿ ಮಕ್ಕಳು ಗುಣವಂತರಾಗದೆ ಅವರಲ್ಲಿ ಮಾನಸಿಕ ಖಿನ್ನತೆ ಉಂಟಾಗುವುದು. ಹಾಗಾಗಿ ಪಾಲಕರು, ಶಿಕ್ಷಕರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ ಪ್ರೊತ್ಸಾಹಿಸಬೇಕು. ಇಂದು ಹಮ್ಮಿಕೊಂಡಿರುವ ಈ ಆರೋಗ್ಯ ತಪಾಸಣಾ ಕಾರ್ಯಕ್ರಮವು ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದರು.
ಬಸವಾನಂದ ಶ್ರೀಗಳು ಮಾತನಾಡಿ, ಜಾತ್ರೆಯ ನಿಮಿತ್ತ ಶ್ರೀ ಮಠದಿಂದ ಹಮ್ಮಿಕೊಳ್ಳುತ್ತಿರುವ ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಸಹಕಾರಿಯಾಗಲಿವೆ ಎಂದರು. ಸಾನ್ನಿಧ್ಯವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಡಾ. ಆನಂದ ಪಾಂಡುರಂಗಿ, ಅನುಪಮಾ ಪಾಂಡುರಂಗಿ ಅವರು ಮನೋರೋಗಿಗಳಿಗೆ ಹಾಗೂ ಡಾ. ವಿಶ್ವನಾಥ ಶಿವನಗುತ್ತಿ, ಡಾ. ಸುಶ್ಮಾ ಬಿ. ಬಂಜೆತನ ನಿವಾರಣೆ, ಡಾ. ವಿಕ್ರಮ ಹರಿದಾಸ ಅವರು ಕೀಲು ನೋವುಗಳು, ಡಾ. ಪ್ರಭು ಬೂಸನೂರಮಠ ಅವರಿಂದ ಚಿಕ್ಕಮಕ್ಕಳ ಹೃದಯ ರೋಗ ತಪಾಸಣೆ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಜಾತ್ರಾ ಕಮಿಟಿ ಅಧ್ಯಕ್ಷ ಕೆ.ಎಸ್. ಚೆಟ್ಟಿ, ಡಾ. ಅನಂತ ಶಿವಪುರ, ಡಾ. ಆರ್.ಟಿ. ಪವಾಡಶೆಟ್ಟರ ಮುಂತಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ 250ಕ್ಕೂ ಹೆಚ್ಚು ರೋಗಿಗಳನ್ನು ತಪಾಸಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.