ಕೆಜೆಪಿಗೆ ಮತ ಹಾಕೋದು ವ್ಯರ್ಥ
ಕನ್ನಡಪ್ರಭ ವಾರ್ತೆ, ಗದಗ, ಏ. 22
ಕೆಜೆಪಿ ಒಂದು ರಾಜಕೀಯ ಪಕ್ಷ ಎಂದು ಜನತೆ ಸ್ವೀಕರಿಸುವುದಿಲ್ಲ. ಅದಕ್ಕೆ ಮತ ಹಾಕಬೇಡಿ, ಹಾಕಿದಲ್ಲಿ ನಿಮ್ಮ ಮತ ವೇಸ್ಟ್ ಆಗುತ್ತದೆ ಎಂದು ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಸೋಮವಾರ ರೋಣ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶೆಟ್ಟರ್, ಈ ಮಾತನ್ನು ನಾನು ಹೇಳುತ್ತಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿದ ವೇಳೆ ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯವಿದು. ನಾನು ಇದಕ್ಕೆ ಇನ್ನೊಂದು ದಾಖಲೆ ನೀಡಲು ಬಯಸುತ್ತೇನೆ. ನಮ್ಮ ಪಕ್ಷ ಈಗಷ್ಟೇ ಹುಟ್ಟಿದೆ, ನಾವು ಅಧಿಕಾರಕ್ಕೆ ಬರುವುದಿಲ್ಲ. ಆದರೆ ಬಿಜೆಪಿಯನ್ನು ಮಣಿಸುವುದೇ ಅವರ ಗುರಿಯಂತೆ ಎಂದು ಆ ಪಕ್ಷದ ನಾಯಕರೇ ಸುದ್ದಿಗೋಷ್ಠಿ ಮತ್ತು ಬಹಿರಂಗ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ನಾನು ಎಲ್ಲ ಮತದಾರರಲ್ಲಿ ಕೈ ಮುಗಿದು ಬೇಡುತ್ತೇನೆ. ರಾಜ್ಯದ ಹಿತಕ್ಕಿಂತ ಒಂದು ಪಕ್ಷವನ್ನು ಸೋಲಿಸುವುದಕ್ಕಾಗಿ ಪಕ್ಷ ಸ್ಥಾಪಿಸಿರುವವರಿಗೆ ಮತ ಹಾಕಿ, ನಿಮ್ಮ ಮತವನ್ನು ವೇಸ್ಟ್ ಮಾಡಿಕೊಳ್ಳಬೇಡಿ. ಅಭಿವೃದ್ಧಿ ಪರವಾದ ಚಿಂತನೆ ಹೊಂದಿರುವ, ಅದನ್ನು 5 ವರ್ಷದಲ್ಲಿ ಕಾಮಗಾರಿಗಳ ಮೂಲಕ ಮಾಡಿ ತೋರಿಸಿರುವ ಬಿಜೆಪಿಯನ್ನು ಬೆಂಬಲಿಸಿ, ನಮ್ಮನ್ನು ಬಲಪಡಿಸಿ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಹಲವಾರು ವರ್ಷಗಳ ನಂತರ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನ ಲಭ್ಯವಾಗಿದೆ. ಮತ್ತೆ 5 ವರ್ಷಗಳ ಕಾಲ ಉತ್ತರ ಕರ್ನಾಟಕದವರೇ ಸಿಎಂ ಆಗಬೇಕಾದಲ್ಲಿ ನೀವೆಲ್ಲ ಬಿಜೆಪಿಯನ್ನು ಬೆಂಬಲಿಸಬೇಕು. ಗದಗ ಜಿಲ್ಲೆಯ 4 ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತೆ ಮಾಡಿದಲ್ಲಿ ಜಗದೀಶ ಶೆಟ್ಟರ್ ಮತ್ತೆ ಸಿಎಂ ಆಗುತ್ತಾರೆ. ನಿಮ್ಮ ಕ್ಷೇತ್ರ ಹಾಗೂ ರಾಜ್ಯ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ನಾನು ಸಿಎಂ ಆಗಿ 8 ತಿಂಗಳ ಗತಿಸಿದೆ. ಈ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ನೆಮ್ಮದಿ ಆಡಳಿತ ನೀಡಿದ ತೃಪ್ತಿ ನನಗಿದೆ. ಇಂತಹ ಆಡಳಿತ ರಾಜ್ಯಕ್ಕೆ ಬೇಕಾಗಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ, ಭ್ರಷ್ಟಾಚಾರ ಮಾಡಿದವರೆಲ್ಲ ನಮ್ಮ ಪಕ್ಷದಿಂದ ಹೊರಹೋಗಿದ್ದಾರೆ. ಪಕ್ಷ ಈಗ ಸ್ವಚ್ಛವಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿರಿ ಎಂದು ವಿನಂತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

