ಸಮರ್ಪಕ ನೀರು ಪೂರೈಸಿ
ಗಜೇಂದ್ರಗಡ: ಸ್ಥಳೀಯ ಪುರಸಭೆಯಿಂದ ಪಟ್ಟಣದ ಜನತೆಗೆ ಸಮರ್ಪಕ ಕುಡಿವ ನೀರು ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಜನರು ನೀರಿಗಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಸಮರ್ಪಕ ಕುಡಿಯುವ ನೀರು ಪೂರೈಸಬೇಕೆಂದು ಒತ್ತಾಯಿಸಿ 7,8 ಹಾಗೂ 9ನೇ ವಾರ್ಡಿನ ಸಾರ್ವಜನಿಕರು ಖಾಲಿ ಕೊಡಗಳೊಂದಿಗೆ ಸೋಮವಾರ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೊಟ್ರೇಶ ಚಿಲಕಾ ಮಾತನಾಡಿ, ಪಟ್ಟಣದಲ್ಲಿ 2 ತಿಂಗಳಿಂದ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದರಿಂದ ಜನತೆಯು ದಿನದ ದುಡಿಮೆ ಬಿಟ್ಟು, ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಬಂದಿದೆ. ಇನ್ನು ಜಾನುವಾರುಗಳ ಸ್ಥಿತಿ ಹೇಳತೀರದಂತಾಗಿದೆ. ಪುರಸಭೆಯವರು ಪಟ್ಟಣದ ಜನತೆಗೆ ಸಮರ್ಪಕ ನೀರು ಒದಗಿಸದೆ, ನೀರಿನ ಕರವನ್ನು ರು. 960ಕ್ಕೆ ಏರಿಸುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆಯಾಗಿಸಿದ್ದಾರೆ. ಅಲ್ಲದೆ ಕೆಲ ವಾರ್ಡ್ಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಆದರೆ ಕರ ಮಾತ್ರ ತುಂಬಲೇ ಬೇಕಾದ ಅನಿವಾರ್ಯತೆ ಇದ್ದು, ಪುರಸಭೆಯ ಆಡಳಿತ ವೈಖರಿಯನ್ನು ಖಂಡಿಸಿದರು.ಪಟ್ಟಣದಲ್ಲಿ ಖಾಸಗಿ ಶುದ್ಧ ಕುಡಿವ ನೀರಿನ ಘಟಕಗಳು ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು 20 ಲೀಟರ್ ನೀರಿಗೆ ರು. 5 ಪಡೆಯುತ್ತಿದ್ದವರು, ಈಗ ರು. 15 ರಿಂದ 20ಕ್ಕೆ ಏರಿಕೆ ಮಾಡಿದ್ದಾರೆ. ಇಂತಹ ಘಟಕಗಳ ಮೇಲೆ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ಹಲವಾರು ಬಾರಿ ಪ್ರತಿಭಟನೆ ಮಾಡಿ ಜಿಲ್ಲಾಡಳಿತದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಕೂಡಲೇ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡಲು ಮುಂದಾಗದಿದ್ದರೆ ಸಾರ್ವಜನಿಕರಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕಾಗಮಿಸಿದ ಪ್ರಭಾರಿ ಮುಖ್ಯಾಧಿಕಾರಿ ಕೆ.ಓ. ಮುಲ್ಲಾ ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಕಳೆದೆರೆಡು ತಿಂಗಳಿಂದ ಪಟ್ಟಣದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸತತ ಬರಗಾಲದಿಂದ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಈಗ ಕೇವಲ 25 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ನಿತ್ಯ 6 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದ್ದು ಅನಿವಾರ್ಯವಾಗಿ ನೀರು ಸರಬರಾಜಿನಲ್ಲಿ ಸಮಸ್ಯೆಯಾಗಿದೆ. ಈ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಜತೆಗೆ ಪಟ್ಟಣದ ಹೊರ ವಲಯದಲ್ಲಿನ ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ಚರ್ಚಿಸಲಾಗಿದ್ದು, ಕೊಳವೆ ಬಾವಿ ಸ್ವಾದೀನಕ್ಕೆ ಪಡೆದುಕೊಂಡು ಪಟ್ಟಣದ ಜನತೆಗೆ ಸಮರ್ಪಕ ಕುಡಿವ ನೀರು ಸರಬರಾಜು ಮಾಡುತ್ತೇವೆ ಎಂದರು. ಸುಭಾಸ ಅಬ್ಬಿಗೇರಿ, ನಾಸೀರ ಸುರಪುರ, ಯಾಶೀನ ಮಾರನಬಸರಿ, ಕಳಕೂಸಾ ಶಿಂಗ್ರಿ, ಚೇತನ ಅಬ್ಬಿಗೇರಿ, ರಾಘವೇಂದ್ರ ಶ್ಯಾಮುಣಶಿ, ಶಿವು ಕುರಿ, ಆದಮ ಸುರಪುರ, ಮಮತಾಜ ರೋಣದ, ಕೈರುನ್ನಿಸಾ ಮನಿಯಾರ, ಸುಫಿಯಾ ಕರ್ನೂಲ, ಶಮಶಾದ ನಾಲಬಂದ, ಜರೀನಾಬೇಗಂ ಮೋಮಿನ್, ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

