ಗದಗ

ಸಾಧನೆಗೆ ಪರಿಶ್ರಮ ಅವಶ್ಯ: ದಂಡಿನ

Published On :

ಗದಗ: ವಿದ್ಯಾರ್ಥಿಗಳು ಸರಳ ಜೀವನ ನಡೆಸಿ, ಸತತ ಪರಿಶ್ರಮ, ತ್ಯಾಗದಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರವಿ ದಂಡಿನ ಹೇಳಿದರು. ಈಚೆಗೆ ಅವರು ಸ್ಥಳೀಯ ಭೀಮಾಂಬಿಕಾ ಡಿಇಡಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಬ್ರಹ್ಮಚರ್ಯ ಪಾಲಿಸಿ, ನಿಷ್ಠೆಯಿಂದ ಅಭ್ಯಾಸ ಮಾಡುವುದರ ಜತೆಗೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಶ್ರಮ, ಗೌರವದ ಮಹತ್ವ ತಿಳಿದುಕೊಂಡು ತಮ್ಮ ಪ್ರಗತಿಯ ಜತೆಗೆ ದೇಶದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಕರೆ ನೀಡಿದರು. ಪ್ರಾಚಾರ್ಯ ಬಿ.ಎಸ್. ರಘುವೀರ ಶಿಬಿರಾರ್ಥಿಗಳು ಡಯಟ್ ಆವರಣದಲ್ಲಿ ಮಾಡಿದ ಶ್ರಮದಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಡಯಟ್‌ನ ಉಪ ಪ್ರಾಚಾರ್ಯ ಪಿ.ಎನ್. ಕ್ಯಾಸನೂರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಅಭ್ಯಸಿಸುವುದರೊಂದಿಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು. ಹುಬ್ಬಳ್ಳಿಯ ವಿಜಯನಗರ ಬಿಇಡಿ ಮಹಾವಿದ್ಯಾಲಯದ ಉಪನ್ಯಾಸಕಿ ಜಯಶ್ರೀ ಬೆನಕವಾರಿ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಸುಭಾಸ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಡಿ. ದೇಶಪಾಂಡೆ, ಪ್ರೊ. ಕಿರಣ ಕೋರ್ಪಡೆ ಮುಂತಾದವರು ಉಪಸ್ಥಿತರಿದ್ದರು. ರೇಣುಕಾ ಕಾಶಪ್ಪನವರ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಭೀಮವ್ವ ತಳವಾರ ಸ್ವಾಗತಿಸಿದರು. ರೇಣುಕಾ ತಳವಾರ ನಿರೂಪಿಸಿದರು. ಶಿವಾನಂದ ತಳವಾರ ವಂದಿಸಿದರು.
ವ್ಯಕ್ತಿತ್ವ ವಿಕಾಸ ಶಿಬಿರ
ಗದಗ: ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಬೇಕಾದಲ್ಲಿ ಶಿಬಿರಗಳ ಪಾತ್ರ ಪ್ರಮುಖ. ಯುವಕರು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಹೇಳಿದರು. ಈಚೆಗೆ ಅವರು ಸ್ಥಳೀಯ ಬಸವೇಶ್ವರ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರದಲ್ಲಿ ಮಾತನಾಡಿದರು. ಮಕ್ಕಳನ್ನು ಬುದ್ದಿವಂತರನ್ನಾಗಿ, ವಿದ್ಯಾವಂತರನ್ನಾಗಿ ಮಾಡುವಂತಹ ಶಿಕ್ಷಣ ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ವಿನಯದಿಂದ ಬಾಳುವುದು ಅವಶ್ಯ. ಭಗವಂತನ, ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ, ಯೋಗದ ಬಗ್ಗೆ ಶ್ರದ್ಧೆ ಹೊಂದುವುದು ಆವಶ್ಯಕವಾಗಿದೆ ಎಂದರು. 10 ದಿನಗಳ ಕಾಲ ಜರುಗಿದ ಶಿಬಿರದಲ್ಲಿ ಮಕ್ಕಳಿಗೆ ನೈತಿಕತೆ, ವರ್ತನೆಯ ಪರಿವರ್ತನೆ, ಆರೋಗ್ಯ ಜ್ಞಾನ, ಶ್ಲೋಕಗಳ ಪಠಣ ಮತ್ತು ಗೀತೆಗಳು, ವಚನ ಮತ್ತು ಸಂಗೀತ, ಯೋಗಾಸನ ಮುಂತಾದವುಗಳ ತರಬೇತಿ ನೀಡಲಾಯಿತು. ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿ.ವಿ. ಕುಷ್ಟಗಿ, ಜಯದೇವ ಮೆಣಸಗಿ, ಕವಿವಿಯ ಸಿಂಡಿಕೇಟ್ ಸದಸ್ಯ ಬಿ.ಎಸ್. ಗೌಡರ ಉಪಸ್ಥಿತರಿದ್ದರು.
ನಾಳೆ ಲಕ್ಕುಂಡಿಗೆ ಸಂಸದ ಗದ್ದಿಗೌಡರ
ಗದಗ:  ಸಂಸದ ಪಿ.ಸಿ. ಗದ್ದಿಗೌಡರ ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಪರ ಚುನಾವಣೆ ಪ್ರಚಾರಾರ್ಥವಾಗಿ ಏ. 24ರ ಸಂಜೆ 6.30 ಗಂಟೆಗೆ ತಾಲೂಕಿನ ಲಕ್ಕುಂಡಿ ಗ್ರಾಮದ ಗ್ರಾಪಂ ಮುಂಭಾಗದಲ್ಲಿ ನಡೆಯುವ ಬಹಿರಂಗ ಸಭೆಯನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಪೂರ್ವ ಗದಗ ತಾಲೂಕಿನ ಹುಯಿಲಗೋಳ, ಹಿರೇಕೊಪ್ಪ, ಚಿಕ್ಕೇನಕೊಪ್ಪ, ನರಸಾಪುರ, ನಾಗಸಮುದ್ರ, ನೀರಲಗಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.