ಅಸಮರ್ಪಕ ನೀರು ಪೂರೈಕೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರೋಣ, ಏ. 25
20 ದಿನಗಳಿಂದ ನೀರು ಬಂದಿಲ್ಲ. ಹನಿ ನೀರಿಗಾಗಿ ತೀವ್ರ ಪರದಾಡುತ್ತಿದ್ದೇವೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲವೆಂದು ಆಕ್ರೋಶಗೊಂಡು ಪಟ್ಟಣದ 17, 18 ಮತ್ತು 19ನೇ ವಾರ್ಡ್ನ ಜನತೆ ಗುರುವಾರ ದಿಢೀರ್ ರಾಜ್ಯ ಹೆದ್ದಾರಿ ತಡೆ ನಡೆಸಿ, ಪ್ರತಿಭಟಿಸಿದರು.
ಮೂರು ದಿನಕ್ಕೊಮ್ಮೆ ನೀರು ಬಿಡುವುದಾಗಿ ಪುರಸಭೆಯವರು ಡಂಗುರ ಸಾರಿದ್ದು, 20 ದಿನಗಳಾದರೂ ನೀರು ಬಿಟ್ಟಿಲ್ಲ. ಇಂದು, ನಾಳೆ ಬರುತ್ತವೆ ಎಂದು ನೀರಿಗಾಗಿ ಉದ್ಯೋಗ ಬಿಟ್ಟು ನಿತ್ಯ ಕಾಯುವುದಾಗಿದೆ. ಜಾನುವಾರುಗಳಿಗೆ ನೀರಿಲ್ಲದೆ ತೊಂದರೆಯಾಗಿದೆ. ಪುರಸಭೆಯವರು ಸಮಸ್ಯೆಗೆ ಕ್ರಮ ಕೈಗೊಳ್ಳದೆ ಚುನಾವಣೆಯ ನೆಪ ಒಡ್ಡುತ್ತಾ ಮುಂದೂಡುತ್ತಿದ್ದಾರೆ. ಮನೆ, ನೀರಿನ ಕರ ಕಟ್ಟದಿದ್ದಲ್ಲಿ ದಂಡ ಹಾಕಿ ವಸೂಲಿ ಮಾಡುತ್ತಾರೆ. ಆದರೆ, ನೀರು ಪೂರೈಕೆಯಲ್ಲಿ ವಿಳಂಭ ಮಾಡಿದರೆ ನಾವು ಏನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜನರ ಸಮಸ್ಯೆ ಕೇಳುವವರಿಲ್ಲ: ಜನತೆಯ ಸಮಸ್ಯೆಗೆ ಪುರಸಭೆಯವರು ಕಿಮ್ಮತ್ತು ನೀಡುತ್ತಿಲ್ಲ. ನೀರು ಸರಬರಾಜಿಗಾಗಿ ಲಕ್ಷಾಂತರ ಹಣ ಅನವಶ್ಯಕ ಖರ್ಚು ಹಾಕುತ್ತಿದ್ದಾರೆ. ವಾಸ್ತವದಲ್ಲಿ ನೀರಿನ ಸಮಸ್ಯೆ ಇತ್ಯರ್ಥವಾಗಿಲ್ಲ. ಯಾವುದೇ ಸಮಸ್ಯೆ ಪರಿಹಾರಕ್ಕಾಗಿ ಜನತೆ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿಯಿದೆ. ಪುರಸಭೆ ಅಧಿಕಾರಿಗಳು ನೀರಿನ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನಾ ನಿರತರನ್ನು ರಸ್ತೆ ತಡೆ ನಡೆಸದಂತೆ ಪಿಎಸ್ಐ ಎಂ.ಎನ್. ಹತ್ತಿಕಟಗಿ ಕೋರಿದರು. ಅಲ್ಲದೆ ಇದು ಚುನಾವಣಾ ಸಂದರ್ಭವಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದಾಗ, ಕೆರಳಿದ ಪ್ರತಿಭಟನಾಕಾರರು, 20 ದಿನಗಳಿಂದ ನೀರು ಬಂದಿಲ್ಲ. ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ. ಯಾರಿಗೆ ಹೇಳಬೇಕು. ವಾರ್ಡಿನಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಇತ್ಯರ್ಥವಾಗಬೇಕು. ಆ ನಿಟ್ಟಿನಲ್ಲಿ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಬಂದು ಲಿಖಿತವಾಗಿ ಭರವಸೆ ನೀಡಬೇಕು. ನೀರಿಗಾಗಿ 2 ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿಎಸ್ಐ ಜತೆ ಕೆಲಕಾಲ ಮಾತಿನ ಚಕಮಕಿ ನಡೆಸಿದರು. ಪಿಎಸ್ಐ ಎಂ.ಎನ್. ಹತ್ತಿಕಟಗಿ ಪುರಸಭೆ ಮುಖ್ಯಾಧಿಕಾರಿ ವಿ. ರಾಮಸ್ವಾಮಿಯವರನ್ನು ಸ್ಥಳಕ್ಕೆ ಕರೆಸಿದಾಗ ಕೆರಳಿದ ಪ್ರತಿಭಟನಾಕಾರರು ಮುಖ್ಯಾಧಿಕಾರಿ ವಿ. ರಾಮಸ್ವಾಮಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಧ್ಯಾಹ್ನ 2 ಗಂಟೆಯೊಳಗೆ 17,18 ಮತ್ತು 19ನೇ ವಾರ್ಡ್ಗೆ ನೀರು ಸಮರ್ಪಕವಾಗಿ ಪೂರೈಕೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದ ಪ್ರತಿಭಟನಾಕಾರರು ಮುಖ್ಯಾಧಿಕಾರಿಯನ್ನು ವಾರ್ಡ್ಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳ ಕುರಿತು ತಿಳಿಸಿದರು. ಪ್ರತಿಭಟನೆಯಲ್ಲಿ ಅನ್ನಕ್ಕ ಬಳಗೋಡ, ಸಂಗಮ್ಮ ಕೊಪ್ಪದ, ಶೋಭಾ ಗುಡಿ, ಅಶೋಕ ಸಾತನೂರ, ಕೋಮಾಬಾಯಿ ಮಧುಕರ, ಸುನಿಲ ಬಿಸಾಟಿ, ಹನುಮಂತ ಬಾಗಲಿ, ಇಮಾಮಸಾಬ ನಧಾಪ, ನಾಗರಾಜ ಓಡೆಯರ, ಪಾಂಡಪ್ಪ ಬಳಗೋಡ, ಚನ್ನಪ್ಪ ಬಂದಿಕೇರಿ ಮುಂತಾದವರು ಭಾಗವಹಿಸಿದ್ದರು.
ರೋಣ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಮುದೇನಗುಡಿ ರಸ್ತೆಯಲ್ಲಿನ ನೀರಿನ ಪೈಪ್ಲೈನ್ಗಳು ಸುಮಾರು 30 ಕಡೆ ಸೋರಿಕೆಯಾಗುತ್ತಿವೆ. ಸದ್ಯ ಅವುಗಳ ದುರಸ್ತಿ ಕಾರ್ಯ ನಡೆದಿದ್ದರಿಂದ ಪಟ್ಟಣಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಶೀಘ್ರ ದುರಸ್ತಿ ಕಾರ್ಯ ಪೂರ್ಣಗೊಳಿಸಿ, ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
-ವಿ. ರಾಮಸ್ವಾಮಿ
(ರೋಣ ಪುರಸಭೆ ಮುಖ್ಯಾಧಿಕಾರಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

