ಗದಗ

ಪೊಲೀಸ್ ಇಲಾಖೆಯಲ್ಲಿ ಕಾಗದ ರಹಿತ, ಪಾರದರ್ಶಕ ವ್ಯವಸ್ಥೆಗೆ ಆದ್ಯತೆ

Published On :

ಗದಗ: ಕಾಗದ ರಹಿತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ತೆಗೆದುಕೊಂಡಿದೆ ಎಂದು ಬೆಳಗಾವಿ ವಿಭಾಗದ ಐಜಿಪಿ ಕೆ.ಎಸ್.ಆರ್. ಚರಣರಡ್ಡಿ ಹೇಳಿದರು.
ಅವರು ಶನಿವಾರ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಇಲಾಖೆಯ ವಾಹನಗಳಿಗೆ ಸ್ಮಾರ್ಟ್ ಪ್ಲೀಟ್ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ವಾಹನವು ಹೆಚ್ಚಾಗಿ ಬೆಳಕೆಯಾಗುತ್ತಿದೆ. ಅಲ್ಲದೇ ವಾಹನಕ್ಕೆ ಬೇಕಾಗುವ ಡೀಸೆಲ್, ಪೆಟ್ರೋಲ್ ಭರಿಸುವ ವೇಳೆ ಪ್ರತಿ ಬಾರಿಯೂ ಪೊಲೀಸ್ ಸಿಬ್ಬಂದಿಯವರು ಪೆಟ್ರೋಲ್, ಪ್ರತ್ಯೇಕ ಕಾಗದ ಪತ್ರಗಳನ್ನು ನೀಡುವುದು ಕಡ್ಡಾಯವಾಗಿತ್ತು. ಇಂದಿನ ಆಧುನಿಕ ದಿನಗಳಲ್ಲಿ ಹಲವು ರೀತಿಯ ಹೊಸ ಹೊಸ ತಂತ್ರಜ್ಞಾನ ಬರುತ್ತಿದ್ದು, ಇದರ ಸದುಪಯೋಗವನ್ನು ಪೊಲೀಸ್ ಇಲಾಖೆಯು ಸಮರ್ಪಕವಾಗಿ ಅಳವಡಿಸಿಕೊಳ್ಳುತ್ತಿದೆ.  ಉತ್ತರ ವಲಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿನ 160 ಪೊಲೀಸ್ ವಾಹನಗಳಲ್ಲಿ 100 ವಾಹನಗಳಿಗೆ ಬಿಪಿಸಿಎಲ್ (ಭಾರತ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್) ಸಂಸ್ಥೆಯ ನೇತೃತ್ವದಲ್ಲಿ ಸ್ಮಾರ್ಟ್ ಪ್ಲೀಟ್‌ಕಾರ್ಡ್ ವಿತರಿಸಲಾಗುತ್ತಿದೆ. ಇದೊಂದು ಅತ್ಯಂತ ಸುಲಭ ಬಳಕೆಯ ವಿಧಾನವಾಗಿದೆ. ಅಲ್ಲದೇ ಈ ಮೂಲಕ ಅನಗತ್ಯ ಕಾಗದ ಬಳಕೆಗಳಿಗೆ ಕಡಿವಾಣ ಹಾಕಲು ಸಹಕಾರಿಗಲಿದೆ. ಅಲ್ಲದೇ ಪೊಲೀಸ್ ಇಲಾಖೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯ ಪೊಲೀಸ್ ಇಲಾಖೆ ತಂತ್ರಜ್ಞಾನಗಳ ಸದ್ಬಳಕೆಯಲ್ಲಿ ಮುಂದೆ ಸಾಗಿರುವುದು ಸ್ವಾಗತಾರ್ಹ ಎಂದರು. ಕಳೆದ ಒಂದು ವರ್ಷದ ಹಿಂದೆ ಟೆಲಿಕಾನ್ಫರೆನ್ಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ 30 ಅಧಿಕಾರಿಗಳು ಏಕಕಾಲದಲ್ಲಿ ಈ ಟೆಲಿಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳುವ ವ್ಯವಸ್ಥೆಯಿದೆ. ಒಂದು ವರ್ಷದಲ್ಲಿ 39 ಟೆಲಿಕಾನ್ಫರೆನ್ಸ್‌ಗಳನ್ನು ನಡೆಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಮಾತನಾಡಿ, ಬಿಪಿಸಿಎಲ್ ಸಂಸ್ಥೆಯು ಕೆಲವೇ ದಿನಗಳಲ್ಲಿ ಉತ್ತಮ ಸ್ಮಾರ್ಟ್ ಪ್ಲೀಟ್‌ಕಾರ್ಡ್‌ಗಳನ್ನು ತಯಾರಿಸಿ ಕೊಡಲಾಗಿದ್ದು, ಈ ಕಾರ್ಡ್‌ಗಳ ಬಳಕೆ ಕುರಿತು ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಅಲ್ಲದೆ 2 ದಿನಗಳಿಂದ ಕೆಲವು ವಾಹನಗಳಿಗೆ ಈ ಸ್ಮಾರ್ಟ್‌ಪ್ಲೀಟ್ ಕಾರ್ಡ್‌ನಿಂದ ಇಂಧನ ಹಾಕಿಸಲಾಗಿದ್ದು, ಇದರಲ್ಲಿ ಯಾವುದೇ ರೀತಿಯ ತೊಂದರೆಗಳು ಕಂಡುಬಂದಿಲ್ಲ. ಜಿಲ್ಲೆಯಲ್ಲಿರುವ 160 ವಾಹನಗಳ ಪೈಕಿ 100 ವಾಹನಗಳಿಗೆ ಈ ಸ್ಮಾರ್ಟ್‌ಪ್ಲೀಟ್ ಕಾರ್ಡ್ ವಿತರಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಇನ್ನುಳಿದ 60 ವಾಹನಗಳಿಗೆ ಕಾರ್ಡ್ ವಿತರಿಸಲಾಗುವುದು ಎಂದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಡಿ.ಎಸ್.ಪಿ. ವಿ.ವಿ. ಕುಂಬಾರ ಸ್ವಾಗತಿಸಿದರು. ಗದಗ ಆರ್‌ಪಿಐ ವಿದ್ಯಾನಂದ ನಾಯಕ ನಿರೂಪಿಸಿದರು. ಬಿ.ಎಸ್. ನ್ಯಾಮಗೌಡ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.