ಗದಗ

ಆರಂಭದಲ್ಲೇ ಮುಗ್ಗರಿಸಿದ ಕ್ಷೀರಭಾಗ್ಯ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಆ. 8
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ 3 ದಿನ ಹಾಲು ಕೊಡುವ 'ಕ್ಷೀರಭಾಗ್ಯ' ಯೋಜನೆ ಪ್ರಾರಂಭವಾದ ಎರಡೇ ದಿನಗಳಲ್ಲಿ ಮುಗ್ಗರಿಸಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಸೇರಿದಂತೆ ಅನೇಕ ತಾಲೂಕುಗಳಲ್ಲಿ ಹಾಲಿನ ಪುಡಿ ಲಭ್ಯವಿಲ್ಲದೆ ಮಕ್ಕಳಿಗೆ ಹಾಲು ನೀಡಲು ಸಾಧ್ಯವಾಗಿಲ್ಲವೆಂದು ತಿಳಿದು ಬಂದಿದೆ. ಹೀಗಾಗಿ ಸರ್ಕಾರದ ಈ ಯೋಜನೆಗೆ ಪ್ರಾರಂಭದಲ್ಲಿಯೇ ವಿಘ್ನ ಎದುರಾಗಿದೆ.
ಹಾಲಿನಪುಡಿ ವಿತರಣೆಯ ಬಗ್ಗೆ ಸರಿಯಾದ ಯೋಜನೆ ರೂಪಿಸದೇ ಹಾಗೂ ಮುಂದೆ ಎದುರಾಗುವ ಸಮಸ್ಯೆಗಳ ಬಗ್ಗೆ ಮುಂದಾಲೋಚನೆ ಮಾಡದೇ ಸರ್ಕಾರ ತರಾತುರಿಯಲ್ಲಿ ಯೋಜನೆಗೆ ಚಾಲನೆ ನೀಡಿದೆ. ಈಗ ಮಕ್ಕಳಿಗೆ ಹಾಗೂ ಪಾಲಕರಿಗೆ ಈ ಕುರಿತು ಶಿಕ್ಷಕರು ಏನು ಹೇಳಬೇಕು ಎಂದು ತಿಳಿಯದೇ ಗೊಂದಲದಲ್ಲಿದ್ದಾರೆ.
ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡದೇ ಇರುವುದು ಸಾರ್ವಜನಿಕರಲ್ಲಿ ಈ ಯೋಜನೆಯ ಬಗ್ಗೆ ಅನುಮಾನ ಮೂಡುವಂತಾಗಿದೆ.
ಒಪ್ಪಂದ ಸಾಧ್ಯವಾಗಿಲ್ಲ
ಸರ್ಕಾರದ ಪ್ರತಿನಿಧಿಗಳು ಹಾಗೂ ಹಾಲೂ ಒಕ್ಕೂಟದ ಅಧಿಕಾರಿಗಳ ಮಧ್ಯೆ ಇನ್ನೂ ಹಾಲಿನ ಪುಡಿಯ ಸಾಗಾಣಿಕೆಯ ಬಗ್ಗೆ ಒಪ್ಪಂದ ಸಾಧ್ಯವಾಗಿಲ್ಲ ಎನ್ನುವ ಮಾಹಿತಿಯು ಕೇಳಿ ಬರುತ್ತಿದೆ. ಹಾಲಿನ ಪುಡಿಯನ್ನು ಎಲ್ಲಿಗೆ ಸಾಗಿಸಬೇಕು ಎನ್ನುವ ಕುರಿತು ತೀರ್ಮಾನವಾಗಿಲ್ಲ. ನೇರವಾಗಿ ಶಾಲೆಗಳಿಗೆ ಸಾಗಿಸಬೇಕೋ ಅಥವಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಸಾಗಿಸಬೇಕೊ ಎನ್ನುವ ಬಗ್ಗೆ ಕೂಡ ಖಚಿತವಾಗಿಲ್ಲ. ಹೀಗಾಗಿ ಮಕ್ಕಳಿಗೆ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ ಗೊಂದಲದ ಗೂಡಾಗಿ ಕಂಡು ಬರುತ್ತಿದೆ. ಸರ್ಕಾರದ ಯೋಜನೆಗಳೇ ಹೀಗೆ ಎಂದು ಸಾರ್ವಜನಿಕರು ಅಣಕಿಸುವಂತಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ 3 ದಿನ ಹಾಲು ಪೂರೈಸುವ ಯೋಜನೆ ಉತ್ತಮವಾದ ಯೋಜನೆಯಾಗಿದೆ. ಮಕ್ಕಳಲ್ಲಿನ ಅಶಕ್ತತೆ ನಿವಾರಣೆ ಮಾಡುವಲ್ಲಿ ಹಾಲು ತುಂಬಾ ಉಪಯೋಗಕಾರಿಯಾಗಿದೆ. ಆದರೆ, ಶಾಲಾ ಮಕ್ಕಳಿಗೆ ಪೂರೈಸ ಬೇಕಾದ ಹಾಲಿನ ಪುಡಿ ಮಾತ್ರ ಇನ್ನೂ ಬರುತ್ತಿಲ್ಲ. ಇದರಿಂದಾಗಿ ಮಕ್ಕಳು ಹಾಗೂ ಶಿಕ್ಷಕರಲ್ಲಿ ಬೇಸರ ತಂದಿದೆ.
ಮಕ್ಕಳಿಗೆ ಹಾಲು ನೀಡುತ್ತೇವೆಂದು ಹೇಳಿ ಭ್ರಮೆ ಹುಟ್ಟಿಸಿ, ಈಗ ಹಾಲು ನೀಡದೇ ಮಕ್ಕಳಲ್ಲಿ ನಿರಾಸೆ ಮೂಡಿಸಿರುವ ಸರ್ಕಾರದ ಈ ಯೋಜನೆ ಆರಂಭದಲ್ಲೇ ಮುಗ್ಗರಿಸಿದೆ. ಸರ್ಕಾರ ಯೋಜನೆ ಜಾರಿ ಮಾಡುವ ಮೊದಲು ಸೂಕ್ತವಾದ ಯೋಜನೆ ರೂಪಿಸುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಧಿಕಾರಿಗಳು ಮತ್ತು ಸರ್ಕಾರದ ನಡುವೆ ಸಮನ್ವಯದ ಕೊರತೆಯನ್ನು ತೋರಿಸುತ್ತಿದೆ.
ಟ ನೂರಅಹ್ಮದ್ ಮಕಾನದಾರ
(ಮಂಜಲಾಪುರ ಗ್ರಾಮದ ನಿವಾಸಿ)  
ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದು ಉತ್ತಮವಾಗಿದೆ. ಆದರೆ, ಕೇವಲ ಒಂದು ದಿನ ಮಾತ್ರ ಹಾಲು ನೀಡಲಾಗಿದೆ. ಮರು ದಿನ ಹಾಲು ನೀಡಲು ಹಾಲಿನ ಪುಡಿಯ ಸ್ಟಾಕ್ ಇಲ್ಲದಿರುವುದು ಯೋಜನೆಯ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಾಗಿದೆ. ಅಲ್ಲದೆ ಯೋಜನೆಯನ್ನು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಈ ಯೋಜನೆ ಜಾರಿಗೆ ತರುವ ಬದಲು ಸಾಕಷ್ಟು ಹಾಲಿನ ಪುಡಿಯನ್ನು ವ್ಯವಸ್ಥಿತವಾಗಿ ಶಾಲೆಗಳಿಗೆ ಪೂರೈಸಿ ನಂತರ ಈ ಯೋಜನೆ ಜಾರಿಗೆ ತರಬೇಕಾಗಿತ್ತು.
- ಎಂ.ಎಸ್. ದೊಡ್ಡಗೌಡ್ರ
(ಗದಗ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ)

-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.