ಅಂಗವಿಕಲರಲ್ಲಿ ಕೀಳರಿಮೆ ತೊಲಗಲಿ
ಕನ್ನಡಪ್ರಭ ವಾರ್ತೆ, ಗದಗ, ಆ. 10
ವಿಕಲಚೇತನರು ತಮ್ಮಲ್ಲಿರುವ ಕೀಳರಿಮೆ ತೆಗೆದು ಹಾಕಿ ಉತ್ತಮ ಕನಸು ಕಾಣಬೇಕು. ಅದರ ಸಾಕಾರಕ್ಕೆ ಪರಿಶ್ರಮ ಪಡಬೇಕು ಎಂದು ವಿಶ್ವಸಂಸ್ಥೆಯ ಯುವ ಶೌರ್ಯ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ಹೇಳಿದರು.
ಅವರು ಶನಿವಾರ ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಅವ್ವ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರತಿಭಾವಂತ ಅಂಧ, ವಿಕಲಚೇತನ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲತೆ ಎನ್ನುವುದು ಒಂದು ಶಾಪವಲ್ಲ. ಇದಕ್ಕಾಗಿ ನಾವು ದೂಷಿಸುವ ಅಗತ್ಯವಿಲ್ಲ. ಆದರೆ, ಎಲ್ಲರಂತೆ ನಮಗೂ ಸೌಲಭ್ಯಗಳಿವೆ. ಹಕ್ಕುಗಳಿವೆ. ಆ ನಮ್ಮ ಹಕ್ಕುಗಳನ್ನು ನಾವು ಸಮರ್ಥವಾದ, ಗಟ್ಟಿ ಧ್ವನಿಯಲ್ಲಿ ಕೇಳುವ ಕೆಲಸ ನಡೆಯಬೇಕಿದೆ. ಅಂಗವಿಕಲತೆ ಇರುವವರು ಹೆದರಬೇಕಾಗಿಲ್ಲ. ಮನೆಯಲ್ಲಿ ಮುದುಡಿಕೊಂಡು ಕುಳಿತಲ್ಲಿ ಮತ್ತಷ್ಟು ಕೀಳರಿಮೆ ಬೆಳೆಯುತ್ತದೆ. ನಾವು ಮನೆಯವರಿಗೆ ಹೊರೆಯಾಗುತ್ತಿದ್ದೇವೆ ಎನ್ನುವ ಆತಂಕ ನಮ್ಮಲ್ಲಿಯೇ ಮೂಡುತ್ತದೆ. ಇದಕ್ಕೆಲ್ಲಾ ಅವಕಾಶ ಕೊಡಬೇಡಿ.
ಸಾಮಾನ್ಯರಂತೆ ನಾವೆಲ್ಲ ಜೀವಿಸುತ್ತೇವೆ. ಅವರಂತೆಯೇ ಬದುಕುತ್ತೇವೆ. ಹಾಗಿದ್ದಲ್ಲಿ ನಾವೇಕೆ ಅವರಂತಾಗಬಾರದು ಎನ್ನುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಾನು ಈಗಾಗಲೇ ದೇಶದ 5 ಪ್ರಮುಖ ನಗರಗಳಲ್ಲಿನ ಅಂಗವಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದೇನೆ. ನಿಮಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ನನ್ನನ್ನು ಸಂಪರ್ಕಿಸಿ, ನಾನು ದಿನದ 24 ಗಂಟೆ ನಿಮ್ಮ ಸೇವೆಗೆ ಸಿದ್ಧ ಎನ್ನುವ ಮೂಲಕ, ನಾನು ಸದಾ ಬ್ಯುಜಿಯಾಗಿರುತ್ತೇನೆ ಎಂದು ಹೇಳಿ ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ರಾಜಕೀಯ ನಾಯಕರಿಗೆ ಚಾಟಿ ಏಟು ಬೀಸಿದ ಅಶ್ವಿನಿ, ತಮ್ಮ 26 ನಿಮಿಷದ ಭಾಷಣದಲ್ಲಿ ಅವರ ಜೀವನ, ಹೋರಾಟ, ಪ್ರಶಸ್ತಿ ಸೇರಿದಂತೆ ಸಮಗ್ರವಾಗಿ ಮಾತನಾಡಿದ್ದು ವಿಶೇಷವಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಹೊರಟ್ಟಿ ಅವರ ಅವ್ವ ಟ್ರಸ್ಟ್ ರಾಷ್ಟ್ರಕಟ್ಟುವ ಕೆಲಸ ಮಾಡುತ್ತಿದ್ದು, ಅವರನ್ನು ಅಭಿನಂದಿಸುತ್ತೇನೆ. ನಮ್ಮ ದೇಶದಲ್ಲಿ ಪ್ರತಿಭೆಗಳನ್ನು ಗುರುತಿಸುವ ಮನೋಭಾವನೆ ಕಡಿಮೆಯಾಗುತ್ತಿದೆ. ಇತರ ದೇಶಗಳು ಗುರುತಿಸಿದ ನಂತರವೇ ನಾವು ಅವರ ಸಾಧನೆಗಳನ್ನು ಸ್ವೀಕರಿಸುತ್ತೇವೆ. ಇದು ಮಹಾತ್ಮಾಗಾಂಧಿಯವರ ಕಾಲದಿಂದ ಅಶ್ವಿನಿ ಅಂಗಡಿ ಅವರವರೆಗೂ ನಡೆದುಕೊಂಡು ಬಂದಿದೆ. ಇದಕ್ಕೆ ನಾವೆಲ್ಲಾ ರಾಜಕೀಯ ನಾಯಕರೂ ಕಾರಣರಾಗಿದ್ದೇವೆ. ಹೊರಟ್ಟಿ ಅವರ ಅವಿಭಕ್ತ ಕುಟುಂಬದ ಕಲ್ಪನೆ ಮತ್ತು ಅದರ ಸಾಕಾರಕ್ಕಾಗಿ ಅವರು ಮಾಡುತ್ತಿರುವ ಕೈಂಕರ್ಯ ಈಗಾಗಲೇ ಸಾಕಷ್ಟು ಪ್ರಭಾವ ಬೀರಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಬಸವರಾಜ ಹೊರಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ಹುಟ್ಟು ಹಾಗೂ ಬೆಳವಣಿಗೆ ಇದರ ಕಾರ್ಯವೈಖರಿಯಲ್ಲಿ ಕುಟುಂಬ ಸದಸ್ಯರು ಹಾಗೂ ಗೆಳೆಯರು ಮಾಡಿದ ಸಹಾಯವನ್ನು ಸ್ಮರಿಸಿದರು. ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು, ರಾಜ್ಯ ಸರ್ಕಾರ ಅಶ್ವಿನಿ ಅಂಗಡಿಯಂತಹ ಅಂಗವಿಕಲ ಸಹೋದರಿಯ ಹೋರಾಟದ ಬದುಕನ್ನು ಗುರುತಿಸಿ ಇನ್ನೂ ಹೆಚ್ಚಿನ ಧನ ಸಹಾಯ ಮಾಡಿದಲ್ಲಿ ರಾಜ್ಯದಲ್ಲಿ ವಿಕಲಚೇತನರಿಗೆ ಹೆಚ್ಚಿನ ಸಹಾಯವಾಗಲಿದೆ ಎಂದರು.
ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳ 46 ಜನ ಸಾಧಕ ಅಂಗವಿಕಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ವಿಶೇಷ ಉಪನ್ಯಾಸ ನೀಡಿದರು. ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಡಾ. ಬಸವರಾಜ ಧಾರವಾಡ ಸ್ವಾಗತಿಸಿದರು. ಶಶಿ ಸಾಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

