ಗದಗ

ಇಂದಿನಿಂದ ಜಾಗ್ರತ ರೇಖೆ, ಸವಿನಯ ಕಾನೂನುಭಂಗ ಚಳವಳಿ: ಹಿರೇಮಠ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 12
ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಯ ದುರಾಡಳಿತ ತೊಲಗಿಸಿ, ರೈತರಿಗೆ ಆದ ಹಾನಿ ಭರಿಸುವ 1942 ಆಗಸ್ಟ್ ಕ್ರಾಂತಿಯ 71ನೇ ದಿನಾಚರಣೆಯ ಸ್ಮರಣಾರ್ಥ ಆಗಸ್ಟ್ 13 ಮತ್ತು 14 ರಂದು ಸಮಾಜ ಪರಿವರ್ತನಾ ಸಮುದಾಯದ ವತಿಯಿಂದ ಸಂಡೂರು ತಾಲೂಕಿನ ಬಸಾಪುರ ಗ್ರಾಮದಲ್ಲಿರುವ ಎನ್‌ಎಂಡಿಸಿ ಟೌನ್‌ಶಿಪ್ ಎದುರುಗಡೆ ಜಾಗ್ರತ ರೇಖೆ, ಸವಿನಯ ಕಾನೂನು ಭಂಗ ಚಳವಳಿಯನ್ನು ಆಯೋಜಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಹಿರೇಮಠ, ಕಾರ್ಯದರ್ಶಿ ಐ.ಜಿ. ಪುಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯುರೋಪಿನ ಔದ್ಯೋಗಿಕ ಕಾರಣಕ್ಕಾಗಿ ಅಂದು ಪರಕೀಯರು ದೇಶದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದರೆ, ಇಂದು ನಮ್ಮವರೇ ದೇಶದ ಅತ್ಯಮೂಲ್ಯವಾದ ನೀರು, ಅರಣ್ಯ, ಭೂಮಿ, ಖನಿಜ, ಹಾಗೂ ಬೀಜಗಳನ್ನು ವಿದೇಶ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಭಾರತದ ಗ್ರಾಮ ಜನ ಸಮುದಾಯ ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ದುರ್ದೈವಶಾತ್ ಗ್ರಾಮ ಸಮುದಾಯವನ್ನು ಕಡೆಗಣಿಸಿ, ನೈಸರ್ಗಿಕ ಸಂಪನ್ಮೂಲಗಳನ್ನು ಅವ್ಯಾಹತವಾಗಿ ಲೂಟಿ ಮಾಡಲಾಗುತ್ತಿದೆ. ಇವುಗಳನ್ನು ಸಂರಕ್ಷಿಸಲು ಗ್ರಾಮಸಭೆಯನ್ನು ಸಶಕ್ತೀಕರಣಗೊಳಿಸಬೇಕು. ಹಾಗೂ ಭ್ರಷ್ಟರು ಸಾರ್ವಜನಿಕ ಜೀವನ ಬಿಟ್ಟು ತೊಲಗಿಸಲು ಜನಜಾಗೃತಿ ಮೂಡಿಸಬೇಕಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶ (18-4-2013) ರಂತೆ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಅರಣ್ಯ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕು. ಲೂಟಿ ಮಾಡಿದ ಎಲ್ಲ ಗಣಿ ಮಾಲೀಕರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಡೋಣಿ ಮಲೈನಲ್ಲಿ ಗಣಿಗಾರಿಕೆ ನಡೆಸುತ್ತಿರುವ ಸಾರ್ವಜನಿಕ ಉದ್ಯಮ ಎನ್‌ಎಂಡಿಸಿಯು ತನ್ನ ಗಣಿಗಾರಿಕೆ ಪ್ರದೇಶದಲ್ಲಿನ ಭುಜಂಗ ನಗರದಲ್ಲಿ ಚೆಕ್‌ಡ್ಯಾಮ್ ಒಂದನ್ನು ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಿಸಿ ಅದು ಒಡೆದ ಪರಿಣಾಮದಿಂದ ರು. 1 ಕೋಟಿ 25 ಲಕ್ಷ ಅಧಿಕ ಆಸ್ತಿ ನಾಶವಾಗಿದೆ.
450 ಎಕರೆ ಕೃಷಿ ಭೂಮಿ ಹಾನಿಯಾಗಿದೆ. ಇಂತಹ ಹತ್ತು ಹಲವು ಸಮಸ್ಯೆಗಳನ್ನು ಹುಟ್ಟುಹಾಕಿ ರೈತರಿಗೆ ತೊಂದರೆ ಕೊಡುತ್ತಿರುವ ಎನ್‌ಎಂಡಿಸಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ರೈತರಿಗೆ ಆದ ಹಾನಿಯನ್ನು ತುಂಬಿಕೊಡಲು ಒತ್ತಾಯಿಸಿ ಜಾಗೃತ ರೇಖೆ ಸವಿನಯ ಕಾನೂನು ಭಂಗ ಚಳವಳಿ ಆಯೋಜಿಸಲಾಗಿದೆ.
ಸಾರ್ವಜನಿಕರೆಲ್ಲರೂ ಚಳವಳಿಗೆ ಬೆಂಬಲಿಸಲು ಸಂಘಟನೆಯ ಪದಾಧಿಕಾರಿಗಳಾದ ರಾಘವೇಂದ್ರ ಕುಷ್ಟಗಿ, ಡಾ. ಬಸವರಾಜ ಧಾರವಾಡ. ಎನ್. ಮಲ್ಲಿಕಾರ್ಜುನ ರಡ್ಡಿ, ಪೆನ್ನಪ್ಪ ಕಮತೂರ, ಆಲ್ದಳ್ಳಿ ಬಸವರಾಜ, ಸತೀಶ, ನೆಹರು ದೇಸಾಯಿ, ಎಂ. ಸಿದ್ಧಪ್ಪ, ಗಂಗಮ್ಮ ಅಣ್ಣೇಣ್ಣವರ, ಎಸ್.ಎ. ಮಕ್ಕಾಬಿ, ಜಿ.ಎನ್. ಸಿಂಹ, ಡಾ. ಎಸ್.ಎಲ್. ಪವಾರ್, ಜಿ.ಎನ್. ಅರ್ಕಾಚಾರಿ, ನಾಗಪ್ಪ ದೊಡ್ಡಮನಿ, ವೀರಣ್ಣ ಜೋತಿ, ಎಂ.ಸಿ. ಹಾವೇರಿ, ಯತಿರಾಜು, ನಾಗರತ್ನ ಕೊಂಡ್ಲಿ, ಎಫ್.ಬಿ. ಭಾವನಾ ಪಾಟೀಲ, ಡಾ.ಎಂ.ಪಿ.ವರ್ಷ ಮುಂತಾದವರು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.