ತುಂಗಭದ್ರೆ ತುಂಬಿದರೂ ನೀರಿಗೆ ಬರ
ಕನ್ನಡಪ್ರಭ ವಾರ್ತೆ, ಗದಗ, ಆ. 19
ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆಯ ಮೂಲವೇ ತುಂಗಭದ್ರಾ ನದಿ. ಕಳೆದ ವರ್ಷದಲ್ಲಿ ಮಳೆ ಕೊರತೆಯಿಂದ ನದಿ ತುಂಬಿರದೇ ಇದ್ದುದರಿಂದ ಅವಳಿ ನಗರದ ಜನತೆ ಸಾಕಷ್ಟು ಸಮಸ್ಯೆ ಎದುರಿಸಿದರು. ಆದರೆ, ವಿಪರ್ಯಾಸದ ಸಂಗತಿಯೆಂದರೆ ಸದ್ಯ ನದಿಯಲ್ಲಿ ಅಪಾರ ಪ್ರಮಾಣದ ನೀರಿದ್ದರೂ ಇಲ್ಲಿನ ಜನತೆ ಕೊಡ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಯಾರನ್ನು ದೂಷಿಸಬೇಕು ಎನ್ನುವ ಗೊಂದಲ ಸಾರ್ವಜನಿಕರಲ್ಲಿ ಮೂಡಿದೆ. ಒಂದು ತಿಂಗಳಿಂದ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿ ಇಂದು ತುಂಬಿ ಹರಿಯುತ್ತಿದೆ. ನದಿ ಇಕ್ಕೆಲಗಳಲ್ಲಿರುವ ನೂರಾರು ರೈತರ ಸಾವಿರಾರು ಹೆಕ್ಟೇರ್ ಪ್ರದೇಶ ಜಾಲಾವೃತವಾಗಿ ರೈತರಿಗೆ ಹಾನಿಯಾಗುತ್ತಿದ್ದು, ನದಿಯಲ್ಲಿನ ನೀರಿನ ಹರವಿನ ಪ್ರಮಾಣ ಅದ್ಯಾವಾಗ ಕಡಿಮೆಯಾಗುತ್ತದೆಯೋ ಎಂದು ರೈತರು ಕಾಯುತ್ತಿದ್ದಾರೆ. ಆದರೆ, ಮತ್ತೊಂದೆಡೆ ಗದಗ-ಬೆಟಗೇರಿ ಅವಳಿ ನಗರದಲ್ಲಿನ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ.
ನಿರೀನ ಸಮಸ್ಯೆ ಬಗೆಹರಿಯುವುದೇ ?: ಗದಗ-ಬೆಟಗೇರಿ ಅವಳಿ ನಗರಕ್ಕೆ ಸದ್ಯ 15-20 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅದು 20 ರಿಂದ 30 ನಿಮಿಷ ಮಾತ್ರ. ಇಷ್ಟೊಂದು ಕಡಿಮೆ ಅವಧಿಯಲ್ಲಿ 15 ದಿನಗಳಿಗಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಸ್ಥಿತಿ ಇದೆ. ಶ್ರೀಮಂತರಾದರೆ ದೊಡ್ಡ ದೊಡ್ಡ ಟ್ಯಾಂಕ್ಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಆದರೆ, ಬಡ ಮತ್ತು ಮಧ್ಯಮ ವರ್ಗದವರು ಅಷ್ಟೊಂದು ದಿನಗಳಿಗಾಗುವಷ್ಟು ನೀರು ಸಂಗ್ರಹಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ನದಿಯಲ್ಲಿ ನೀರಿಲ್ಲ ಎನ್ನುವ ಕಾರಣವೊಡ್ಡುತ್ತಿದ್ದ ನಗರಸಭೆ, ಇನ್ನಾದರೂ ಅವಳಿ ನಗರಕ್ಕೆ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಿ ನೀರಿನ ಸಮಸ್ಯೆ ಬಗೆಹರಿಸುವುದೇ ಕಾದು ನೋಡಬೇಕು.
ವ್ಯವಸ್ಥೆ ಸುಧಾರಣೆಯಾಗಲಿ: ಸದ್ಯ ಅವಳಿ ನಗರದ ಜನಸಂಖ್ಯೆ ಅನುಗುಣವಾಗಿ ನಿತ್ಯ 21 ಎಂಎಲ್ಡಿ ನೀರು ಬೇಕು. ಆದರೆ, ಸದ್ಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಗರಸಭೆಯವರು ನಿರ್ಮಿಸಿರುವ ಜಾಕ್ವೆಲ್ ಮತ್ತು ಪೈಪ್ಲೈನ್ನಿಂದ ಕೇವಲ 11 ಎಂಎಲ್ಡಿ ನೀರು ಮಾತ್ರ ಲಭ್ಯವಾಗುತ್ತಿದೆ. ಲಭ್ಯವಾಗುವ ನೀರು ಮತ್ತು ಅವಳಿ ನಗರದ ಜನಸಂಖ್ಯೆಯನ್ನು ಹೋಲಿಕೆ ಮಾಡಿದಲ್ಲಿ ಪ್ರತಿ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯ. ಆದರೆ, ಅವಳಿ ನಗರದಲ್ಲಿ ಮನೆ ಮನೆಗಳಿಗೆ ನೀರು ಪೂರೈಕೆ ಮಾಡಲು ಹಾಕಲಾಗಿರುವ ಆಂತರಿಕ ನೀರು ಪೂರೈಕೆ ಪೈಪ್ಲೈನ್ ಅತ್ಯಂತ ಹಳೆಯದಾಗಿದ್ದು, ಹಲವಾರು ನಳಗಳು ಮುಖ್ಯ ಪೈಪ್ಲೈನ್ನಿಂದಲೇ ಸಂಪರ್ಕ ಪಡೆದಿದ್ದು, ಸಾಕಷ್ಟು ಪ್ರಮಾಣದ ನೀರು ಪೋಲಾಗುತ್ತಿದೆ. ಈ ವ್ಯವಸ್ಥೆಗೆ ಸುಧಾರಣೆ ತರುವ ಅನಿವಾರ್ಯತೆ ಇದೆ.
ಪ್ರತಿಭಟನೆ ನಿಂತಿಲ್ಲ: ನದಿಯಲ್ಲಿ ಅಪಾರ ಪ್ರಮಾಣದ ನೀರಿದ್ದರೂ ಅವಳಿ ನಗರದ ಸಾರ್ವಜನಿಕರು ನೀರಿಗಾಗಿ ಕೊಡಗಳೊಂದಿಗೆ ರೊಡ್ಗಿಳಿದು ಹೋರಾಟ ಮಾಡುವುದು ಬೇಸಿಗೆಯಲ್ಲಿ ಸಾಮಾನ್ಯ. ಆದರೆ ಈ ಬಾರಿ ಮಳೆಗಾಲದಲ್ಲಿಯೂ ಅತಂಹ ಪರಿಸ್ಥಿತಿ ಮುಂದುವರಿದಿದ್ದು, ನದಿಯಲ್ಲಿ ನೀರಿದ್ದರೂ ಸಾರ್ವಜನಿಕರು ಈಗಾಗಲೇ ಆಗಸ್ಟ್ ತಿಂಗಳಲ್ಲಿಯೇ 2 ಬಾರಿ ನೀರಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

