ಧರ್ಮದ ಹಾದಿಯಲ್ಲಿ ನಡೆಯುವುದು ಅವಶ್ಯ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 21
ಶಿಕ್ಷಣದಿಂದ ಬುದ್ಧಿ ಬೆಳೆಯುವುದು, ಧರ್ಮದಿಂದ ಮನುಷ್ಯ ಬೆಳೆಯುತ್ತಾನೆ. ಮನುಷ್ಯನಿಗೆ ಧರ್ಮದ ಸಂಪ್ರದಾಯ ಅವಶ್ಯ ಎಂದು ಫಕೀರೇಶ್ವರ ಸಂಸ್ಥಾನ ಮಠದ ಜ. ಫಕೀರ ಸಿದ್ಧರಾಮ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಸಮೀಪದ ಹರಿಪುರ ಗ್ರಾಮದ ಶ್ರೀ ವೀರಭದ್ರೇಶ್ವರ ಅಗ್ನಿ ಕಾರ್ಯಕ್ರಮದ ರಜತ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ನಡೆದಾಗ ಧರ್ಮ ಉಳಿಯಲು ಸಾಧ್ಯ. ಆಧುನಿಕತೆ ಅಬ್ಬರದಿಂದಾಗಿ ಜನರಲ್ಲಿ ಭಕ್ತಿ ಭಾವ ಕಡಿಮೆಯಾಗುತ್ತಿದೆ. ಮಹಾತ್ಮರು, ಸಂತರು, ಶರಣರು ಸಾರಿದ ತತ್ವ ಆದರ್ಶದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜನರು ಜೀವನದಲ್ಲಿ ಅನೇಕ ಸಮಸ್ಯೆ ನಿತ್ಯ ಎದುರಿಸುತ್ತಾ ಮಾನಸಿಕ ನೆಮ್ಮದಿ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆತ್ಮ ಶುದ್ಧಿಯಿಂದ ದೇವರಿಗೆ ಭಕ್ತಿ ಸೇವೆಗೈದಾಗ ಸರ್ವರಿಗೂ ಭಗವಂತ ಒಳಿತನ್ನು ಕರುಣಿಸಬಲ್ಲ. ಸಂಕಟ ಬಂದಾಗ ಮಾತ್ರ ದೇವರನ್ನು ನೆನೆಯದೇ, ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಿಸಬೇಕು ಎಂದರು.
ನೇತೃತ್ವವಹಿಸಿದ್ದ ಸುಜ್ಞಾನದೇವ ಶಿವಾಚಾರ್ಯ ಶ್ರೀಗಳು ಮಾತನಾಡಿ, ಒಳ್ಳೆಯ ಮನಸ್ಸು, ಭಾವನೆ ಎಲ್ಲಿ ಇದೆಯೋ ಅಲ್ಲಿ ದೇವರಿದ್ದಾನೆ. ಬಾಲ್ಯದಿಂದಲೇ ಭಕ್ತಿ, ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು. ಆಧ್ಯಾತ್ಮ ಜ್ಞಾನದಿಂದ ಮನಸ್ಸಿನ ದುಗುಡ, ದುಮ್ಮಾನ ದೂರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಬಾಳಿನ ಭಾಗ್ಯೋದಯಕ್ಕೆ ಧರ್ಮಾಚರಣೆ ಅಗತ್ಯ. ಮಾನವನು ಅಂತರಂಗ ಬಹಿರಂಗವನ್ನು ಶುದ್ಧಿ ಮಾಡಿಕೊಂಡು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದರಿಂದ ದೇವರನ್ನು ಕಾಣಬಹುದು. ಚಂಚಲವಾದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಪರಿಶುದ್ಧವಾದ ಮನಸ್ಸಿನಿಂದ ನೆಮ್ಮದಿಯ ಬದುಕು ಸಾದಿಸಲು ಸಾಧ್ಯ. ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಬೆಲೆ ಬರುವುದಿಲ್ಲ. ಮಾನಸಿಕ ಆರೋಗ್ಯ ಮತ್ತು ನೆಮ್ಮದಿಗಾಗಿ ಸರ್ವರೂ ಧರ್ಮಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ, ಪಪಂ ಸದಸ್ಯ ಎಚ್.ಡಿ. ಮಾಗಡಿ, ಬಾಲಚಂದ್ರ ಇಟಗಿ, ಎನ್.ಆರ್. ಕುಲಕರ್ಣಿ, ಕೆ.ಎ. ಬಳಿಗೇರ, ಎಂ.ಕೆ. ಲಮಾಣಿ, ವೀರಣ್ಣ ಮಠಪತಿ ಮಾತನಾಡಿದರು. ಗಂಗಪ್ಪ ದೇಸಾಯಪಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೈ.ಎಸ್. ಪಾಟೀಲ, ಕೆ.ಎನ್. ಸ್ವಾಮಿ, ಎಂ.ಸಿ. ಹಿರೇಮಠ, ಚನ್ನಪ್ಪ ಕಾಳಗಿ, ಬಸವಣ್ಣೆಪ್ಪ ಮೂರಶಿಳ್ಳಿನ, ಈರಣ್ಣ ಪಲ್ಲೇದ ಮುಂತಾದವರು ಹಾಜರಿದ್ದರು. ಸಿ.ಪಿ. ಕಾಳಗಿ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಕಾಳಗಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

