ಪರಿಸರ ರಕ್ಷಣೆ ಎಲ್ಲರ ಹೊಣೆ: ಪರಿಮಳ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 23
ನಾವು ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಬಹುತೇಕವಾಗಿ ಎಲ್ಲ ಹಸಿರು ಮರಗಳು ನಿತ್ಯ ನಮಗೆ ಬೇಕಾಗುವ ಆಮ್ಲಜನಕವನ್ನು ಕೊಡುತ್ತವೆ. ಗಂಡು, ಹೆಣ್ಣು, ಜಾತಿ, ಭೇದವೆನ್ನದೇ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ಕಪ್ಪತ್ತ ಹಿಲ್ಸ್ ವಲಯ ಅರಣ್ಯಾಧಿಕಾರಿ ವಿ.ಎಚ್. ಪರಿಮಳ ಹೇಳಿದರು.
ಅವರು ಶುಕ್ರವಾರ ಕಪ್ಪತ್ತ ಹಿಲ್ಸ್ ವಲಯ ಅರಣ್ಯ ಇಲಾಖೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಮ್ಮಿಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಗು ಹುಟ್ಟಿದಾಗ ಮಲಗುವುದಕ್ಕೆ ಕಟ್ಟುವ ತೊಟ್ಟಿಲು, ನಂತರ ಆಟಿಕೆಗೆ ಚಕ್ಕಡಿ, ಉಳಿಕೆ, ನಂತರ ಕಾಲುಗಾಡಿ ಕೊನೆಯಲ್ಲಿ ಚಟ್ಟದವರೆಗೆ ಎಲ್ಲ ಸಂದರ್ಭಗಳಲ್ಲಿಯೂ ಮನುಷ್ಯನಿಗೆ ಪರಿಸರದಲ್ಲಿ ಹುಟ್ಟಿಬೆಳೆಯುವ ಗಿಡಮರಗಳು ನಿತ್ಯದ ಜೀವನಕ್ಕೆ ಅವಶ್ಯವಾಗಿ ಬೇಕಾಗುತ್ತವೆ. ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲರಿಗೂ ಶುದ್ದವಾದ ಪರಿಸರ ಹಾಗೂ ಆಮ್ಲಜನಕವನ್ನು ನೀಡುತ್ತದೆ. ಆದ್ದರಿಂದ ಎಲ್ಲರೂ ತಪ್ಪದೇ ತಮ್ಮ ಮನೆಗಳ ಪಕ್ಕದಲ್ಲಿ ಹಾಗೂ ಜಮೀನುಗಳ ಬದುವುಗಳಲ್ಲಿ ತಪ್ಪದೇ ಗಿಡಮರಗಳನ್ನು ಬೆಳೆಸಬೇಕು. ಇಲಾಖೆಯಿಂದ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲು ಹಾಗೂ ಅಲ್ಲಲ್ಲಿ ಗಿಡಗಳನ್ನು ನೆಡುವುದಕ್ಕಾಗಿ ಪ್ರತಿವರ್ಷ 2 ರಿಂದ 3 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ. ಕಾರಣ ಗಿಡಮರಗಳ ಬಗ್ಗೆ ಎಲ್ಲರೂ ಕಾಳಜಿವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರಕಾಶ ಹೊಸಮನಿ ಮಾತನಾಡಿ, ನಮ್ಮ ಆವರಣದಲ್ಲಿ ಹಚ್ಚಿದ ಎಲ್ಲ ಗಿಡಮರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿಯನ್ನು ನಾನು ಹಾಗೂ ನನ್ನೆಲ್ಲ ಸಿಬ್ಬಂದಿ ನಿರ್ವಹಿಸುವುದಾಗಿ ತಿಳಿಸಿ, ತಮ್ಮ ಪಿ.ಎಚ್.ಸಿ.ವ್ಯಾಪ್ತಿಗೆ ಬರುವ ಹಮ್ಮಿಗಿ, ಗುಮ್ಮಗೋಳ, ಶಿಂಗಟಾಲೂರ, ಕೊರ್ಲಹಳ್ಳಿ, ಗಂಗಾಪೂರ, ಶೀರನಹಳ್ಳಿ, ಬೀಡನಾಳ, ಬೀಡನಾಳತಾಂಡಾ ಎಲ್ಲ ಆಶಾ ಕಾರ್ಯಕರ್ತೆಯರು ಆಸ್ಪತ್ರೆ ಆವರಣದಲ್ಲಿರುವ ಒಂದೊಂದು ಗಿಡಗಳನ್ನು ದತ್ತು ತೆಗೆದುಕೊಂಡು ಆ ಗಿಡದ ನಿರ್ವಹಣೆಯನ್ನು ತಾವೇ ಮಾಡಲಿದ್ದಾರೆ. ಉಳಿದೆಲ್ಲ ಗಿಡಗಳನ್ನು ತಾವೇ ದತ್ತು ಪಡೆದು ಅವುಗಳ ಪೋಷಣೆ ಮಾಡುವುದಾಗಿ ತಿಳಿಸಿ, ಮುಂಬರುವ ದಿನಗಳಲ್ಲಿ ಇದೊಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯಾನವನವನ್ನಾಗಿ ಮಾಡುವ ಜವಾಬ್ದಾರಿ ತಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ರಾಜೇಶ್ವರಿ, ಎಸ್.ಎಂ.ಮಾಂಡ್ರೆ, ಎಂ.ಕೆ.ಸ್ವಾಮಿ, ಮಂಜುನಾಥ ಭಜಂತ್ರಿ, ಪುಷ್ಟಲತಾ, ಕೆ.ವಿ.ಬಡಿಗೇರ, ಎಸ್.ಐ.ಪರಪ್ಪನವರ, ಅರಣ್ಯ ಇಲಾಖೆಯ ಎಂ.ಜಿ.ಕಮತರ, ಎಸ್.ಎಸ್.ಕುಕನೂರ ಹಾಗೂ ಪಿ.ಎಚ್.ಸಿ.ಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಹೇಮಾ ದೈವಜ್ಞ ಸ್ವಾಗತಿಸಿದರು. ಕಳಕಪ್ಪ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಎಸ್.ಐ.ಪರಪ್ಪನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

