ಮನಃ ಪರಿವರ್ತನೆಗೆ ವಿವೇಕ ಸಂದೇಶ ಸಹಕಾರಿ: ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಗದಗ, ಆ. 28
ಸ್ವಾಮಿ ವಿವೇಕಾನಂದರು ಈ ಯುಗದ ಉತ್ಸಾಹವಾಗಿದ್ದು, ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಅಮಾನವೀಯ ಘಟನೆಗಳಿಂದ ಸಂಸ್ಕೃತಿ, ನೈತಿಕತೆ ಅಧಃಪತನವಾಗುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಸಂದೇಶಗಳು ನಾಡಿನಲ್ಲಿ ಮೌಲ್ಯಗಳ ಮರುಹುಟ್ಟಿಗೆ ಸಹಕಾರಿಯಾಗಲಿದೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಬುಧವಾರ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶ್ರೀರಾಮಕೃಷ್ಣ ಮಠ, ಶ್ರೀರಾಮಕೃಷ್ಣ ಮಿಷನ್, ಶ್ರೀರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಅಂಗವಾಗಿ ಜರುಗಿದ ವಿವೇಕಾನಂದರ ರಥಯಾತ್ರೆ ಸಾರ್ವಜನಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚಿಗೆ ದೆಹಲಿ ಮತ್ತು ಮುಂಬೈಗಳಲ್ಲಿ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳು ದೇಶದ ಗೌರವಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದು, ಅಮಾನವೀಯ ಕೃತ್ಯಗಳಲ್ಲಿ ತೊಡಗಿರುವ ಕುತ್ಸಿತ ಮನೋಭಾವದ ವ್ಯಕ್ತಿಗಳ ಮನಃ ಪರಿವರ್ತನೆಗೆ ವಿವೇಕರ ಸಾಹಿತ್ಯ, ಸಂದೇಶಗಳು ಸದ್ಯದ ಅವಶ್ಯಕತೆಗಳಾಗಿವೆ. ಈ ಹಿನ್ನೆಲೆಯಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸುತ್ತಿರುವ ವಿವೇಕರ ರಥಯಾತ್ರೆ ದೇಶದ ಸದೃಢತೆ ಮತ್ತು ಬಲಿಷ್ಠ ಯುವಜನಾಂಗದ ಸೃಷ್ಟಿಗೆ ಸಹಕಾರಿಯಾಗಲಿ ಎಂದರು.
ಬೆಳಗಾವಿಯ ಶ್ರೀರಾಮಕೃಷ್ಣ ಮಠದ ಮುಖ್ಯಸ್ಥ ಹಾಗೂ ರಥಯಾತ್ರೆಯ ಮಾರ್ಗದರ್ಶಿ ತ್ಯಾಗೇಶ್ವರಾನಂದ ಶ್ರೀಗಳು ಮಾತನಾಡಿ, ನವಭಾರತ ನಿರ್ಮಾಣದ ಅಪೂರ್ವ ಕನಸುಗಳೊಂದಿಗೆ ಪ್ರಾರಂಭಿಸಲಾದ ರಥಯಾತ್ರೆ ಯುವಶಕ್ತಿಯಲ್ಲಿ ಅನಂತ ವಿಶ್ವಾಸ ಹಾಗೂ ಆತ್ಮಚೈತನ್ಯ ತುಂಬುವ ಗುರಿ ಹೊಂದಿದೆ. ಶ್ರದ್ಧೆ, ಸೇವೆ ಮತ್ತು ವಿಶ್ವಾಸ ಹೊಂದಿ ಜಗತ್ತನ್ನು ಎದುರಿಸುವ ಭಾರತೀಯ ಯುವಶಕ್ತಿ ದೇಶದ ಇಂದಿನ ಅತ್ಯವಶ್ಯಕತೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಸಂಚಾರ ಕೈಗೊಂಡು 103ನೇ ಸಮಾರಂಭ ನಡೆಯುತ್ತಿರುವ ನಗರದಲ್ಲಿ ಯುವಕರು ತಂಡೋಪತಂಡವಾಗಿ ಪಾಲ್ಗೊಂಡಿದ್ದು ದೇಶಾಭಿಮಾನಕ್ಕೆ ಕಾರಣವಾಗಿದೆ ಎಂದರು.
ಹೊಣೆಗಾರಿಕೆ ನಾವೇ ಹೊರಬೇಕು
ಗದಗನ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಸ್ವಯಂ ನಾವೇ ಹೊರಬೇಕಾಗಿದೆ. ಭಾರತೀಯರ ವಿಚಾರಧಾರೆಗಳು ಬದಲಾಗಬೇಕಿದೆ. ಇದರಿಂದ ನಮ್ಮ ಧೋರಣೆಗಳಲ್ಲಿ ಬದಲಾವಣೆ ಕಾಣಲು ಸಾಧ್ಯವಿದ್ದು, ಸಮಗ್ರ ಭಾರತವನ್ನು ಅರಿಯುವ ಗುರಿ ಹೊಂದಿದ ಯುವಪೀಳಿಗೆ ಮೊದಲು ವಿವೇಕಾನಂದರ ಸಾಹಿತ್ಯ ಹಾಗೂ ಸಂದೇಶವನ್ನು ಓದಿ ಮನವರಿಕೆ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯಾನಂತರ ವಿವೇಕಾನಂದರನ್ನು ಮರತದ್ದೇ ಭಾರತದ ಇಂದಿನ ದುರ್ಗತಿಗೆ ಕಾರಣವಾಗಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ರಥಯಾತ್ರೆಯ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ ಮಾತನಾಡಿ, ದೀನ, ದಲಿತರಲ್ಲಿ ಭಗವಂತನನ್ನು ಕಂಡ ಮಹಾನ್ ಚೈತನ್ಯ ವಿವೇಕಾನಂದರ ಸಂದೇಶಗಳ ಅನುಕರಣೆಯಿಂದ ಉತ್ತಮ ಬದುಕು ಸಾಧ್ಯವಾಗಲಿದ್ದು, ಭವ್ಯ ರಾಷ್ಟ್ರ ಕಟ್ಟುವಲ್ಲಿ ವಿವೇಕಾನಂದರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ. ಭಾರತದ ಅದ್ವಿತೀಯ ಶಕ್ತಿಯಾಗಿ ಭಾರತೀಯರಲ್ಲಿ ನಾವೆಲ್ಲ ಒಂದು ಎಂಬ ಧರ್ಮದ ಬಾಂಧವ್ಯ ಬೆಸೆಯುವ ಮೂಲಕ ಜಾತೀಯತೆಯನ್ನು ದೂರಗೊಳಿಸಿ ಎಲ್ಲರನ್ನು ಒಂದುಗೂಡಿಸಲು ಶ್ರಮಿಸಿದ ಅವರ ಸಾಹಿತ್ಯ ಆಧ್ಯಾತ್ಮಿಕ ಸಂದೇಶಗಳು ಪ್ರತಿ ಮನ, ಮನೆಗೂ ತಲುಪಿಸುವ ಕಾರ್ಯ ನಿರಂತರವಾಗಿ ಹಾಗೂ ಸುದೀರ್ಘವಾಗಿ ನಡೆಯಬೇಕಿದೆ ಎಂದರು.
ಬೆಳಗಾವಿಯ ರಾಮಕೃಷ್ಣ ಆಶ್ರಮದ ತದ್ಯುಕ್ತಾನಂದ ಶ್ರೀಗಳು, ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ, ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಸ್ಥಳೀಯ ಜಾಮಿಯಾ ಮಸ್ಜೀದ್ನ ಮೌಲಾನಾ ಶಮಸುದ್ದೀನ್ ಅಣ್ಣಿಗೇರಿ, ಕ್ರೈಸ್ತಗುರು ಫಾದರ್ ಎಬನೈಜರ್, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಾಜಿ ಶಾಸಕ ಡಿ.ಆರ್.ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು. ಜೆ.ಕೆ. ಜಮಾದಾರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

