ಗದಗ

ವೀಳ್ಯದೆಲೆಗೆ ಹೆಚ್ಚಿದ ಬೇಡಿಕೆ

Published On :

ಕನ್ನಡಪ್ರಭ ವಾರ್ತೆ, ಗದಗ, ಆ. 30
ಶ್ರಾವಣ ಮಾಸ ಹಬ್ಬಗಳ ಸಾಲು ಸಾಲನ್ನೇ ಹೊತ್ತುಕೊಂಡು ಬರುತ್ತದೆ. ಪ್ರತಿಯೊಂದು ಶುಭ ಕಾರ್ಯಕ್ಕೆ ವೀಳ್ಯದೆಲೆ ಬೇಕೆ ಬೇಕು. 20 ದಿನಗಳಿಂದ ವೀಳ್ಯದೆಲೆಗೆ ಭಾರೀ ಬೇಡಿಕೆ ಬಂದಿದೆ.
ಬೆಲೆಯಲ್ಲಿಯೂ ಹೆಚ್ಚಳವಾಗಿ, ಎಲೆ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ಎಲೆಗಳನ್ನು ಕೊಳ್ಳುವ ಸಾರ್ವಜನಿಕರಿಗೆ ಮಾತ್ರ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಕಳೆದ ತಿಂಗಳು ಪ್ರತಿ ಒಂದು ಸಾವಿರ ಎಲೆಗಳ ಕಟ್ಟಿಗೆ ರು. 1000-2000 ಸಾವಿರದಷ್ಟಿದ್ದ ಬೆಲೆ ಈಗ ರು. 4 ಸಾವಿರಕ್ಕೆ ಮುಟ್ಟಿದೆ. ಇನ್ನು ಕೆಲವೆಡೆ ರೈತರ ಹೊಲಕ್ಕೆ ಖರೀದಿದಾರರೇ ತೆರಳಿ ಎಲೆಗಳನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸುತ್ತಿರುವುದು ಸಾಮಾನ್ಯವಾಗಿದ್ದು, ಇದು ವೀಳ್ಯದೆಲೆಯ ಅವಶ್ಯಕತೆ ಸಾದರ ಪಡಿಸುತ್ತಿದೆ. ಸಾವಿರ ಎಲೆಗೆ ರು. 4 ಸಾವಿರದಷ್ಟಾಗಿದ್ದು, ಇದನ್ನು ಮಧ್ಯವರ್ತಿಗಳು ಖರೀದಿಸಿ, ಬಿಡಿ ಮಾರಾಟಗಾರರಿಗೆ ನೀಡುವುದರಿಂದ ವೀಳ್ಯದೆಲೆ ಗ್ರಾಹಕರನ್ನು ತಲುಪುವ ವೇಳೆಗೆ ಮತ್ತಷ್ಟು ಹೆಚ್ಚಳವಾಗುತ್ತದೆ.
ರೈತರಿಗೆ ಅನುಕೂಲ: ಗದಗ ಹಾಗೂ ರೋಣ ತಾಲೂಕಿನ ಕೆಲವು ಗ್ರಾಮಗಳ ರೈತರು ಕೊಳವೆಬಾವಿ ನೀರಾವರಿಯನ್ನು ಆಧರಿಸಿ ವೀಳ್ಯದೆಲೆ ನಾಟಿ ಮಾಡಿದ್ದಾರೆ. ವಿದ್ಯುತ್ ಕೊರತೆ, ಅಂತರ್ಜಲ ಕುಸಿತ ಹೀಗೆ ಹಲವಾರು ಸಮಸ್ಯೆಗಳ ಮಧ್ಯೆಯೇ ಬೆಳೆದ ಬೆಳೆಗೆ ಇಲ್ಲಿಯವರೆಗೆ ಉತ್ತಮ ಬೆಲೆ ಸಿಗದೇ ವೀಳ್ಯದೆಲೆ ಬೆಳೆದ ರೈತರು ಕಂಗಾಲಾಗಿದ್ದರು. ಆದರೆ, ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಎಲೆಗೆ ಉತ್ತಮ ಬೇಡಿಕೆ ಬಂದಿರುವುದರಿಂದ ರೈತ ಬೆಳೆದ ಎಲೆಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ಹಬ್ಬದಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ.
ಗ್ರಾಹಕರಿಗೆ ಬಿಸಿ: ಹಬ್ಬಗಳ ಪ್ರಭಾವದಿಂದ ವೀಳ್ಯದೆಲೆಯ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಕೇವಲ ಗದಗ ಜಿಲ್ಲೆ ಮಾತ್ರವಲ್ಲ ಪಕ್ಕದ ಹಾವೇರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಿಂದಲೂ ವೀಳ್ಯದೆಲೆ ವ್ಯಾಪಾರಸ್ಥರು ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಬೆಲೆ ಹೆಚ್ಚಳದಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇನ್ನೊಂದೆಡೆ ಮಹಿಳೆಯರ ಪ್ರತಿಯೊಂದು ಪೂಜೆಗಳಲ್ಲಿಯೂ ವೀಳ್ಯದೆಲೆಯು ಅವಶ್ಯಕವಾಗಿರುವುದರಿಂದ ಎಷ್ಟೇ ಬೆಲೆ ಹೆಚ್ಚಳವಾದರೂ ಅನಿವಾರ್ಯವಾಗಿ ಕೊಂಡುಕೊಳ್ಳುವಂತಾಗಿದೆ.


 ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.