ಗದಗ

ಎಲ್ಲರೂ ಸಮಗ್ರ ಕರ್ನಾಟಕದ ಪರಿಕಲ್ಪನೆಯಲ್ಲಿ ಜೀವಿಸಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 1
ಸಮಗ್ರ ಕರ್ನಾಟಕದ ಪರಿಕಲ್ಪನೆಯಲ್ಲಿಯೇ ನಾವೆಲ್ಲರೂ ಬದುಕಬೇಕು. ಕರ್ನಾಟಕ ಇಬ್ಬಾಗದ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ಭಾನುವಾರ ನಗರದ ಶಹಾಪುರ ಪೇಟೆ ಬಡಾವಣೆಯಲ್ಲಿರುವ ಹಿರಿಯ ರಂಗಭೂಮಿ ಕಲಾವಿದೆ ಪ್ಲೋರಿನಾಬಾಯಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಹಲವಾರು ಜನರ ಶ್ರಮದಿಂದ ಕರ್ನಾಟಕ ಏಕೀಕರಣವಾಗಿದೆ. ಇಬ್ಬಾಗದ ಕುರಿತು ಮಾತನಾಡುವುದು ಸರಿಯಲ್ಲ ಎಂದರು. ಶಾಸ್ತ್ರೀಯ ಸ್ಥಾನಮಾನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ತಮಿಳುನಾಡು ಮಾದರಿಯಲ್ಲಿ ಅನುಷ್ಠಾನಕ್ಕೆ ಚಿಂತನೆ ನಡೆಸಿದ್ದು, ಸದ್ಯದಲ್ಲಿಯೇ ಸರ್ಕಾರ ಈ ಕುರಿತು ಕ್ರಮ ತೆಗೆದುಕೊಳ್ಳಲಿದೆ ಎಂದರು. ಪ್ಲೋರಿನಾ ಬಾಯಿ ತಮ್ಮ 11ನೇ ವರ್ಷದಿಂದಲೇ ರಂಗಭೂಮಿಯಲ್ಲಿ ಸಾಕಷ್ಟು ದುಡಿದಿದ್ದು, ಅವರ ಜೀವಮಾನದ ಸಾಧನೆಗಾಗಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಅವರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಲು ಬಂದಿದ್ದೇನೆ. ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿದ್ದು, ಈಗಾಗಲೇ ಅವರು ವೈದ್ಯಕೀಯ ವೆಚ್ಚಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದು, ಅದನ್ನೆಲ್ಲ ಸರ್ಕಾರವೇ ಭರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಪ್ಲೋರಿನಾ ಬಾಯಿ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಿದ್ದು, ಅವರ ನಿವಾಸಕ್ಕೆ ಸರ್ಕಾರವೇ ಬಂದು ಪ್ರಶಸ್ತಿ ಮಾಡಿದ್ದು ಸಂತಸದ ವಿಷಯವಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಜಿಪಂ ಸಿಇಒ ವೀರಣ್ಣ ತುರಮರಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬನಶಂಕರಿ ಅಂಗಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ತಡವಾಗಿ ಆಗಮಿಸಿದ ಸಚಿವೆ
ಉಮಾಶ್ರೀ ರಾಜ್ಯದಲ್ಲಿ ಗುರುತಿಸಿಕೊಂಡಿದ್ದೇ ರಂಗಭೂಮಿ ಹಾಗೂ ನಟನೆಯಿಂದ. ಆದರೆ ಭಾನುವಾರ ಬೆಳಗ್ಗೆಯೇ ಗದಗ ನಗರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿ, ಹಿರಿಯ ರಂಗಭೂಮಿ ಕಲಾವಿದೆ ಪ್ಲೋರಿನಾ ಬಾಯಿ ಅವರ ಮನೆಗೆ ಹೋಗುತ್ತೇನೆ ಎಂದು ಹೇಳಿ ಸಾಕಷ್ಟು ಪ್ರಚಾರ ಪಡೆದಿದ್ದರು. ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಿದ್ದ ಸಚಿವೆ ಉಮಾಶ್ರೀ, ಪ್ಲೋರಿನಾ ಬಾಯಿ ಅವರ ಮನೆಗೆ ಬಂದದ್ದು 6.15ಕ್ಕೆ. ಒಂದು ಗಂಟೆಗೂ ಅಧಿಕ ಸಮಯ ತಡವಾಗಿ ಬಂದ ಸಚಿವೆ ಉಮಾಶ್ರೀ ಹಿರಿಯ ರಂಗ ಕಲಾವಿದರನ್ನು ಕಾಯಿಸಿದ್ದು ಮಾತ್ರ ನೆರೆದಿದ್ದ ಸಾರ್ವಜನಿಕರಲ್ಲಿ ತೀವ್ರ ಬೇಸರಕ್ಕೆ ಕಾರಣವಾಯಿತು. ಸಂಜೆ 5 ಗಂಟೆಯಿಂದ ನಗರದ ಪ್ರವಾಸಿ ಮಂದಿರದಲ್ಲಿಯೇ ಕಾಲ ಕಳೆದರೂ ಕಲಾವಿದೆಯ ಮನೆಗೆ ತಡವಾಗಿ ಬಂದದ್ದು ಮಾತ್ರ ಯಾವ ಕಾರಣಕ್ಕೆ ಎನ್ನುವುದು ತಿಳಿಯಲಿಲ್ಲ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.