ಮೂಢನಂಬಿಕೆ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಲಿ
ಗದಗ: ರಾಜ್ಯ ಸರ್ಕಾರ ಮೂಢನಂಬಿಕೆ ಆಚರಣೆ ನಿಷೇಧ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವವರು ಸೇರಿದಂತೆ ಎಲ್ಲರನ್ನೂ ಒಂದೆಡೆ ಸೇರಿಸಿ, ಗಂಭೀರ ಚರ್ಚೆ ನಡೆಸಲು ಮುಂದಾಗಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರ ಈ ಕಾನೂನು ಜಾರಿಗೆ ಚಿಂತನೆ ನಡೆಸಿತ್ತು. ಆದರೆ, ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಸರ್ಕಾರ ಅದೇಕೋ ಇದರಿಂದ ವಿಮುಖವಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ, ಸಿದ್ಧಗೊಂಡಿದ್ದ ಕರಡಿನಲ್ಲಿ 13 ಪ್ರಮುಖ ವಿಷಯಗಳ ಬಗ್ಗೆ ತಿಳಿಸಲಾಗಿತ್ತು. ಪ್ರಾಣಿಬಲಿ, ನರಬಲಿ, ಸಾಮಾಜಿಕ ಅನಿಷ್ಟಗಳು ಎಂದು ಗುರುತಿಸಿಕೊಂಡಿರುವ ಕೆಲ ಪದ್ಧತಿಗಳಿವೆ. ಆದರೆ, ಇದರಲ್ಲಿ ಹತ್ತಾರು ನಮ್ಮ ಪಾರಂಪರಿಕ ವಿಷಯಗಳು ಸೇರಿವೆ ಎನ್ನುವ ಗೊಂದಲ ಸೃಷ್ಟಿಸಿದ್ದು ಸರಿಯಾದ ಬೆಳವಣಿಗೆಯಲ್ಲ.
ಈ ಕಾನೂನು ಜಾರಿ ವಿಷಯದಲ್ಲಿ ಉಂಟಾಗುತ್ತಿರುವ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಒಂದು ವಿಶೇಷ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಿ, ಪೇಜಾವರ, ಶೃಂಗೇರಿ, ರಂಭಾಪುರಿ, ತೋಂಟದಾರ್ಯ ಸ್ವಾಮೀಜಿ ಹೀಗೆ ಎಲ್ಲ ಪ್ರಮುಖರನ್ನು ಒಳಗೊಂಡ ಸಭೆ ನಡೆಸಬೇಕು. ಅಲ್ಲಿ ಚರ್ಚೆಯಾಗುವ ವಿಷಯವನ್ನಾಧರಿಸಿ ಸರ್ಕಾರ ಈ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಇದನ್ನು ವಿರೋಧಿಸುವವರು ಸಮಾಜದಲ್ಲಿ ಮೂಢನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು ಬಡವರ ಜೀವದೊಂದಿಗೆ ಆಟವಾಡುತ್ತಿರುವುದನ್ನು ನಿಲ್ಲಿಸಬೇಕಾದ ಅವಶ್ಯಕತೆ ಇದೆ ಎಂದರು. ಕೆ.ಎಚ್. ಬೇಲೂರ ಮುಂತಾದವರು ಹಾಜರಿದ್ದರು.
ಜಿಲ್ಲಾಡಳಿತ ಸ್ಪಂದಿಸಿಲ್ಲ: ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ 3 ತಿಂಗಳಿಂದ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ. ಈ ಕುರಿತು ಅಲ್ಲಿ ಸಭೆಗಳನ್ನು ನಡೆಸಿ, ಎಲ್ಲರೂ ಒಗ್ಗಟ್ಟಿನಿಂದ ಬಾಳ್ವೆ ಮಾಡುವ ವಾತಾವರಣ ನಿರ್ಮಾಣ ಮಾಡುವಲ್ಲಿ ಅಲ್ಲಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಕೂಡಲೇ ಸಮಾಜ ಕಲ್ಯಾಣ ಸಚಿವರಾಗಲಿ, ಸಿಎಂ ಆಗಲಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು. ಇಲ್ಲವಾದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರು. 2ಕ್ಕೆ ಅಕ್ಕಿ ನೀಡಲಿ: ರಾಜ್ಯ ಸರ್ಕಾರ ಪೌರ ಕಾರ್ಮಿಕರಿಂದ ಇಂದಿಗೂ ಗುತ್ತಿಗೆ ಆಧಾರದಲ್ಲಿಯೇ ಕೆಲಸ ಪಡೆಯುತ್ತಿದ್ದು, ತಕ್ಷಣವೇ ಅವರನ್ನು ಕಾಯಂ ನೌಕರರು ಎಂದು ಪರಿಗಣಿಸಬೇಕು. ಇದಕ್ಕೆ ಹಣಕಾಸಿನ ಕೊರತೆ ಇದೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಈಗಾಗಲೇ ರು. 1ಕ್ಕೆ ಕೆಜಿ ಅಕ್ಕಿ ನೀಡುವುದು ಉತ್ತಮ ಬೆಳವಣಿಗೆಯೇ, ಅದನ್ನೇ ಮುಂಬರುವ ವರ್ಷದಿಂದ ರು. 2ಕ್ಕೆ ಕೆಜಿ ಅಕ್ಕಿ ಮಾಡಿ, ಅದರಿಂದ ಬರುವ ಹಣದಲ್ಲಿ ರಾಜ್ಯದಲ್ಲಿನ ಪೌರ ಕಾರ್ಮಿಕರನ್ನು ಕಾಯಂಗೊಳಿಸಿರಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಮಠಗಳು ಸಮಾಜಮುಖಿಯಾಗಿರಲಿ: ನಮ್ಮ ಸಮಾಜದಲ್ಲಿ ಮಠಗಳಿಗೆ ಅತ್ಯುತ್ತಮವಾದ ಬೆಲೆ ಇದೆ. ಆದರೆ, ರಾಜ್ಯದಲ್ಲಿನ ಕೆಲ ಮಠಗಳು ಮಟ್ಕಾದ ನಂಬರ್ಗಳನ್ನು ಹೇಳುತ್ತಿದ್ದು, ಅದರಿಂದ ಭಕ್ತರಿಗೆ ಅನುಕೂಲವಾದಲ್ಲಿ, ಅದರ ಪಾಲು ಆ ಮಠಾಧೀಶರಿಗೂ ಸಲ್ಲುತ್ತದೆ. ಈ ಬಗ್ಗೆ ನಾನು ಮೊದಲು ಮಾತನಾಡಿದ್ದೇ. ಅದನ್ನು ಕೆಲವರು ವಿರೋಧಿಸಿದರು, ಮತ್ತೆ ಕೆಲವರು ಸ್ವಾಗತಿಸಿದರು. ಮಠಗಳು ಸಮಾಜಮುಖಿಯಾಗಿರಬೇಕು ಎನ್ನುವುದು ನನ್ನ ಉದ್ದೇಶವೇ ಹೊರತು, ಯಾರನ್ನೂ ದೂಷಿಸುವುದು, ದ್ವೇಷಿಸುವುದು ಅಲ್ಲ. ಈಗಲೂ ನಾನು ನನ್ನ ಮಾತಿಗೆ ಬದ್ಧನಾಗಿದ್ದು, ರಾಜ್ಯದ 10ಕ್ಕೂ ಹೆಚ್ಚು ಮಠಗಳಲ್ಲಿ ಮಟ್ಕಾ ನಂಬರ್ಗಳನ್ನು ಹೇಳಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

