ಗದಗ

ಜ. 12ರಂದು ಬೆಂಗಳೂರಿನಲ್ಲಿ ಹಿಂದುಳಿದ ಒಕ್ಕೂಟದ ದಶಮಾನೋತ್ಸವ

Published On :

ಗದಗ: ರಾಜ್ಯದಲ್ಲಿ ಶೇ. 50ರಷ್ಟು ಭಾಗ ಹಿಂದುಳಿದ ವರ್ಗದ ಜನರು ವಾಸವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸೌಲಭ್ಯಗಳಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಸರ್ವ ಹಿಂದುಳಿದ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನವರಿ 12ರಂದು ಬೆಂಗಳೂರಿನಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ದಶಮಾನೋತ್ಸವ ಹಾಗೂ ಐತಿಹಾಸಿಕ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಸುರೇಶ ಲಾಥೋರ್ ಹೇಳಿದರು.
ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದರು. ಈ ಜಾಗೃತಿ ಸಮಾವೇಶ ಮೇಲ್ವರ್ಗದ ವಿರೋಧಕ್ಕಾಗಿ ಅಲ್ಲ ಹಾಗೂ ಇನ್ನುಳಿದ ಸಮಾಜಗಳಿಗೆ ಸ್ಪರ್ಧೆ ನೀಡುವುದು ಒಕ್ಕೂಟದ ಉದ್ದೇಶವಲ್ಲ. ಹಿಂದುಳಿದ ವರ್ಗಗಳಲ್ಲಿ ಜಾಗೃತಿಯ ಮೂಲಕ ಶೋಷಿತ ವರ್ಗದಲ್ಲಿ ಸಮಾನತೆ ತರುವ ದೃಷ್ಟಿಯಿಂದ ಈ ಸಮಾವೇಶವನ್ನು ಪಕ್ಷಾತೀತವಾಗಿ ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರ 2014ರ ಏಪ್ರಿಲ್ ತಿಂಗಳಲ್ಲಿ ಜಾತಿವಾರು ಜನಗಣತಿಯನ್ನು ನಡೆಸಲು ತೀರ್ಮಾನಿಸಿರುವುದನ್ನು ಒಕ್ಕೂಟ ಸ್ವಾಗತಿಸುತ್ತದೆ. ಈ ಗಣತಿಯಿಂದ ಹರಿದು ಹಂಚಿ ಹೋಗಿರುವ ಹಿಂದುಳಿದ ಜಾತಿಗಳನ್ನು ಗುರುತಿಸಲು ಸಾಧ್ಯವಾಗಲಿದೆ.
ಹಿಂದುಳಿದ ಪ್ರವರ್ಗ-1 ಮತ್ತು 2ಎ ದಲ್ಲಿನ ಜನಾಂಗದವರು ರಾಜ್ಯದಲ್ಲಿ ಸುಮಾರು 65 ಸಾವಿರಕ್ಕೂ ಹೆಚ್ಚು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಮೀಸಲಾತಿಯ ದುರುಪಯೋಗಪಡಿಸಿಕೊಂಡಿರುತ್ತಾರೆ. ಇವುಗಳ ರದ್ದತಿಗೆ ಸಮಾವೇಶದ ಮೂಲಕ ಆಗ್ರಹಿಸಲಾಗುತ್ತದೆ. ಸರ್ಕಾರ ಹಲವಾರು ಜಾತಿ, ಜನಾಂಗಗಳನ್ನು ಪ್ರವರ್ಗ-2ರಲ್ಲಿ ಸೇರಿಸುವ ಆಶ್ವಾಸನೆ ನೀಡುತ್ತಿರುವುದು ಒಕ್ಕೂಟದ ಗಮನಕ್ಕೆ ಬಂದಿರುತ್ತದೆ. ವೈಜ್ಞಾನಿಕ ಸಮೀಕ್ಷೆ ಇಲ್ಲದೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೇ ಇತರ ಜನಾಂಗಗಳನ್ನು ಪ್ರವರ್ಗ-2ಕ್ಕೆ ಸೇರಿಸುವುದನ್ನು ಒಕ್ಕೂಟ ಬಲವಾಗಿ ವಿರೋಧಿಸುತ್ತದೆ. ವಿಧಾನಸಭೆ ಹಾಗೂ ಲೋಕಸಭೆಗಳಲ್ಲಿ ಹಿಂದುಳಿದ ಜಾತಿಗೆ ರಾಜಕೀಯ ಮೀಸಲಾತಿ ಹಾಗೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಬೇಕೆಂಬ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸುತ್ತ, ಅದರಲ್ಲಿ ಹಿಂದುಳಿದ ವರ್ಗದ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಜಾಗೃತಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಜನವರಿ 12 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ ಜಾಗೃತಿ ಸಮಾವೇಶದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸೇರಿದಂತೆ ಸಂಸತ್ ಸದಸ್ಯರು, ಶಾಸಕರು, ಹಿಂದುಳಿದ ವರ್ಗದ ನೇತಾರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 6 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದ್ದು, ಈಗಾಗಲೇ ರಾಜ್ಯದ 8 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಹಿಂದುಳಿದ ವರ್ಗದ ಜನರಲ್ಲಿ ಜಾಗೃತಿ ಹಾಗೂ ಸಮಾವೇಶದ ಅವಶ್ಯಕತೆಯ ಕುರಿತು ಮನವರಿಕೆ ಮಾಡಲಾಗಿದೆ ಎಂದರು. ಕೆ.ಎಂ. ರಾಮಚಂದ್ರಪ್ಪ, ಎಸ್.ಜಿ. ಕಾಳೇಗೌಡ, ರಾಮಕೃಷ್ಣಪ್ಪ, ಚೌಗಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಈಶಣ್ಣ ಮೇರವಾಡೆ, ನಾಗಪ್ಪ ಗುಗ್ಗರಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.