ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಗಜೇಂದ್ರಗಡ: ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ಗೊಗೇರಿ, ಕುಂಟೋಜಿ, ವದೇಗೊಳ, ಕಣವಿ, ಮಾಟರಂಗಿ, ನಾಗರಸಕೊಪ್ಪ, ಬೆಣಚಮಟ್ಟಿ, ಗ್ರಾಮಗಳ ನೂರಾರು ರೈತರು ಸ್ಥಳೀಯ ಹೆಸ್ಕಾಂ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರದೇಶದಲ್ಲಿ ಸತತ 6 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಸಬೇಕೆಂಬ ಇಲಾಖೆಯ ಆದೇಶವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಹಳ್ಳಿಗಳಲ್ಲಿ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗಿತ್ತಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅಧಿಕಾರಿಗಳು ಬೆಳಗ್ಗೆ 4 ಗಂಟೆ ಹಾಗೂ ರಾತ್ರಿ 2 ಗಂಟೆ ತ್ರೀಫೇಸ್ ಕರೆಂಟ್ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ ವಿದ್ಯುತ್ ಯಾವಾಗ ಬರುತ್ತದೆಯೋ ಎಂದು ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದೊದಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾತಿನ ಚಕಮಕಿ: ಬಳಿಕ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ ಹಾಗೂ ಸ್ಥಳೀಯ ಹೆಸ್ಕಾಂ ಅಧಿಕಾರಿ ಎಸ್.ಬಿ. ಮಹಾಮನಿ ಮಧ್ಯೆ ಪ್ರವೇಶಿಸಿ ಮೇಲಧಿಕಾರಿಗಳ ಆದೇಶದಂತೆ ಬೆಳಗ್ಗೆ 4 ಗಂಟೆ, ರಾತ್ರಿ 2 ಗಂಟೆ ತ್ರೀಫೇಸ್ ವಿದ್ಯುತ್ ನೀಡಲಾಗುತ್ತಿದೆ ಎಂದರು. ಅಧಿಕಾರಿಗಳ ಮಾತಿಗೆ ಜಗ್ಗದ ರೈತರು ಪ್ರತಿಭಟನೆ ಮುಂದುವರೆಸಿದರು. ಮೇಲಧಿಕಾರಿಗಳು ಸ್ಥಳಕ್ಕಾಗಮಿಸಿ ಲಿಖಿತ ಆದೇಶ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು. ರೈತರು ಮತ್ತು ಹೆಸ್ಕಾಂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪ್ರಾಂತ ರೈತ ಸಂಘ ಬೆಂಬಲ: ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹಿಸಿ ಗೊಗೇರಿ ಗ್ರಾಪಂ ವ್ಯಾಪ್ತಿಯ ರೈತರು ಕೈಗೊಂಡ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡ ಬಾಲು ರಾಠೋಡ, ಬಿ.ಎಸ್. ಶೀಲವಂತರ ಬೆಂಬಲ ವ್ಯಕ್ತಪಡಿಸಿ, ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು. ಪ್ರತಿಭಟನಾ ನಿರತ ಸ್ಥಳಕ್ಕೆ ಹೆಸ್ಕಾಂನ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರ ಎಸ್. ಮುಕ್ಕಣ್ಣಯ್ಯ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಒಂದು ವಾರದೊಳಗೆ ಸಮರ್ಪಕ ವಿದ್ಯುತ್ ಪೂರೈಸುವುದಾಗಿ ಲಿಖಿತ ಹೇಳಿಕೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಲಾಲಪ್ಪ ರಾಠೋಡ, ಮುದಿಯಪ್ಪ ಕರಡಿ, ಹನುಮಪ್ಪ ಹೊರಪೇಟಿ, ಇಮಾಮಸಾಬ್ ಭಾಗವಾನ, ಮೌನೇಶಪ್ಪ ಭೋಸಲೆ, ಹನುಮಪ್ಪ ಕೊಡಕೇರಿ, ಶೇಖಪ್ಪ ಭೋಸಲೆ, ಮಾರ್ತಾಂಡಪ್ಪ ಹದ್ದಣ್ಣನವರ, ಶಂಬಾಜಿ ಗಾರಗಿ, ಕಳಕಪ್ಪ ಮಾದರ, ಬಸವರಾಜ ಗುಂಡೆ, ಕುಮಾರ ರಾಠೋಡ, ಷಣ್ಮುಕಪ್ಪ ಕರಡಿ, ಬಸಪ್ಪ ಕೊಟ್ಟೂರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

