ನಿಯಮ ಉಲ್ಲಂಘಿಸಿ ಕಾರ್ಯಕರ್ತೆಯರ ನೇಮಕ
ಯಲಬುರ್ಗಾ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ನಿಮಯದಂತೆ ಮೀಸಲಾತಿ ನೀಡದೆ ಅಕ್ರಮವಾಗಿ ನೇಮಿಸಿಕೊಳ್ಳಲಾಗಿದೆ ಎಂದು ಕುಕನೂರು ಕ್ಷೇತ್ರದ ಜಿಪಂ ಸದಸ್ಯ ಈರಪ್ಪ ಕುಡಗುಂಟಿ ಆರೋಪಿಸಿದರು.
ಸ್ಥಳೀಯ ತಾಪಂ ಸಭಾಂಗಣದಲ್ಲಿ ಮಂಗಳವಾರ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆರ ನೇಮಕದಲ್ಲಿ ಭಾರಿ ಅವ್ಯವಹಾರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶೇ. 70 ಅಂಕ ಗಳಿಸಿದ ತಾಲೂಕಿನ ಸೋಂಪುರದ ಪರಿಶಿಷ್ಟ ಜಾತಿ ಮಹಿಳೆಯನ್ನು ಕಡೆಗಣಿಸಿ ಶೇ. 55 ಅಂಕ ಪಡೆದ ಜಂಗಮ ಸಮಾಜದ ಮಹಿಳೆಯನ್ನು ಆಯ್ಕೆ ಮಾಡಿದ್ದಾರೆಂದು ಸಿಡಿಪಿಓ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗಾದ ಆಯ್ಕೆಯನ್ನು ರದ್ದುಪಡಿಸಿ, ಅರ್ಹರನ್ನು ಆಯ್ಕೆ ಮಾಡಬೇಕು. ಹಾಗೆ ಉಳಿದೆಡೆ ನಡೆದಿದೆ ಎನ್ನಲಾದ ಅಕ್ರಮವನ್ನು ಬಯಲಿಗೆಳೆದು ಅರ್ಹರನ್ನು ನೇಮಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಜಿ. ಲಕ್ಷ್ಮೀ ಮಾತನಾಡಿ, ನೇಮಕಾತಿ ಅಧಿಕಾರ ಜಿಲ್ಲಾಧಿಕಾರಿ, ಉಪನಿರ್ದೆಶಕರಿಗಿದೆ. ಸಿಡಿಪಿಓ ಅಧಿಕಾರಿಗಳು ಇಲಾಖೆ ತರಬೇತಿಗೆ ಹೋಗಿದ್ದರಿಂದ ನನ್ನನ್ನು ಈ ಸಭೆಗೆ ಕಳಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲ ಎಂದಾಗ ಸದಸ್ಯರು, ಮುಂದಿನ ಸಭೆಗೆ ನೀವು ಬರದೆ, ಅವರನ್ನೇ ಕಳಿಸಿ ಎಂದರು.
ತಾಲೂಕಿನ ಚಿಕ್ಕೇನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಗೈರು ಹಾಜರಾತಿಯಿಂದ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಅವರನ್ನು ಬೇರೆಡೆ ವರ್ಗಾವಣೆ ಮಾಡಿ ಹೊಸಬರನ್ನು ನೇಮಿಸಬೇಕೆಂದು ಜಿಪಂ ಸದಸ್ಯ ಕುಡಗುಂಟಿ ಅವರು ತಾಲೂಕು ಆರೋಗ್ಯ ನಿರೀಕ್ಷಕ ಬೋಳನರನ್ನು ಒತ್ತಾಯಿಸಿದರು.
ಪಶು ಸಂಗೋಪನೆ ಇಲಾಖೆ ಅಧಿಕಾರಿ ಡಾ. ಅನಂತ ಮಾತನಾಡಿ, ಈ ವರ್ಷ ರೈತರಿಗೆ ಗಿರಿರಾಜ ಕೋಳಿಗಳು ಬಂದಿವೆ ಎಂದಾಗ, ಜಿಪಂ ಸದಸ್ಯರಾದ ಅಶೋಕ ತೋಟದ, ಈರಪ್ಪ ಕುಡಗುಂಟಿ, ರಾಮಣ್ಣ ಸಾಲಭಾವಿ ಅವುಗಳ ಸಾಕಾಣಿಕೆಯಿಂದ ರೈತರಿಗೆ ಲಾಭವಿಲ್ಲ, ರದ್ದುಗೊಳಿಸಿ ಎಮ್ಮೆ ಅಥವಾ ಆಕಳು ಕೊಡುವ ಯೋಜನೆ ಜಾರಿಗೊಳಿಸಿ ಎಂದರು.
ತಾಪಂ ಇಓ ಪಿ.ಎಲ್. ಚಲವಾದಿ ಮಾತನಾಡಿ, ಯಲಬುರ್ಗಾದಿಂದ ಚಿಕ್ಕೋಪ್ಪ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಬೇಕು ಎಂದರು.
ತಾಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ ತಳವಾರ ಮಾತನಾಡಿ, ತಾಲೂಕಿನ ಕಡಲಕಟ್ಟಿಯಿಂದ ಚಿಕ್ಕಬನ್ನಿಗೋಳ ವರೆಗಿನ ರಸ್ತೆ ಮೆಟ್ಲಿಂಗ್ ಕಾಮಗಾರಿಗೆ ಸಮರ್ಪಕ ನೀರು, ರೂಲರ್, ಸಣ್ಣ ಕಡಿ ಹಾಕದೆ ಡಾಂಬರೀಕರಣ ಮಾಡಲಾಗುತ್ತಿದೆ. ಅದರಿಂದ ರಸ್ತೆ ಮತ್ತೆ ಹದಗೆಡುತ್ತದೆ ಎಂದು ಜಿಪಂ ಅಧಿಕಾರಿಗಳಿಗೆ ಹೇಳಿದರು.
ಆ ಕಾಮಗಾರಿ ನಮ್ಮ ಇಲಾಖೆಯದ್ದಲ್ಲ; ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಂತೆ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಮುಂದಿನ ಸಭೆಗೆ ಕರೆಸುವಂತೆ ತಾಪಂ ಇಓಗೆ ಸದಸ್ಯರು ಹೇಳಿದರು.
ತಾಪಂ ಉಪಾಧ್ಯಕ್ಷೆ ಮಹಾದೇವಿ ಕೆ. ಕಂಬಳಿ ಮಾತನಾಡಿ, ಬಿನ್ನಾಳ, ಯರೇಹಂಚಿನಾಳ ಮಾರ್ಗ ಮಧ್ಯದ ಆಶ್ರಯ ಮನೆಗಳ ಮೇಲೆ ಕೈಗೆಟುವಂತೆ ವಿದ್ಯುತ್ ತಂತಿ ಹಾದು ಹೋಗಿದ್ದು, ಅವುಗಳನ್ನು ಬೇರೆಡೆ ಬದಲಾಯಿಸುವಂತೆ ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು.
ಜೆಸ್ಕಾಂ ತಾಲೂಕು ಅಧಿಕಾರಿ ಡಿ. ಮಹೇಶ ಮಾತನಾಡಿ, ವಿದ್ಯುತ್ ತಂತಿ ಬದಲಾವಣೆಗೆ ಆಯಾ ಗ್ರಾಪಂದವರು ಜೆಸ್ಕಾಂಗೆ ಹಣ ಭರಿಸಿದರೆ ಮಾಡಿಕೊಡುವುದಾಗಿ ತಿಳಿಸಿದರು.
ಬಳಿಕ ವಿವಿಧ ಇಲಾಖೆಗಳ ಪ್ರಗತಿ ವರದಿಯನ್ನು ಅಧಿಕಾರಿಗಳು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮವ್ವ ಹಂ. ರಾಠೋಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ, ತಾಪಂ ಸದಸ್ಯರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

