ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯ
ರೋಣ: ಸಮರ್ಪಕ ಮಳೆಯಾಗದೇ ಅಲ್ಪ ಸ್ವಲ್ಪ ಬಂದಂತಹ ಬೆಳೆಯೂ ಜಿಂಕೆ ಹಾವಳಿಗೆ ತುತ್ತಾಗಿದ್ದರಿಂದ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸಿದ್ದರು. ಆದರೆ, ಅರಣ್ಯ ಅಧಿಕಾರಿಗಳು ಪರಿಹಾರ ಚೆಕ್ ವಿತರಣೆಯಲ್ಲಿ ರೈತರಿಗೆ ತಾರತಮ್ಯ ಮಾಡಿ ಅನ್ಯಾಯವೆಸಗಿದ್ದಾರೆಂದು ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗಂಭೀರ ಆರೋಪ ಮಾಡಿದರು.
ಈ ವಿಷಯ ಕರಿತು ಸದಸ್ಯ ಅಂದಪ್ಪ ಬಿಚ್ಚೂರ ಮತ್ತು ಬಸವರಾಜ ಮಲ್ಲಾಪುರ ಮಾತನಾಡಿ, ಪರಿಹಾರ ಧನ ವಿತರಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಕೂಡಲೇ ಸಮರ್ಪಕವಾಗಿ ಪರಿಹಾರ ನೀಡಬೇಕು. ಪರಿಹಾರ ವಿತರಣೆಯಲ್ಲಿ ಯಾವ ಮಾನದಂಡವನ್ನು ಅನುಸರಿಸಲಾಗಿದೆ ಹಾಗೂ ಯಾವ ಅಧಿಕಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಇದೊಂದು ಅವೈಜ್ಞಾನಿಕ ಸಮೀಕ್ಷೆಯಾಗಿದೆ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ಬಿಳಗಿಯವರನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರತಿಸಭೆಗೆ ಅರಣ್ಯ ಅಧಿಕಾರಿಗಳು ಬರದೇ ಇರುವುದರಿಂದ ಈ ವಿಷಯವು ನೆನೆಗುದಿಗೆ ಬಿದ್ದಿದೆ. ಆದ್ದರಿಂದ ನಾವು ಕೇಳಿದ ಮಾಹಿತಿಗೆ ಸಮರ್ಪಕ ಉತ್ತರ ನೀಡಬೇಕು. ರೈತರಿಗಾದ ಅನ್ಯಾಯವನ್ನು ನಿವಾರಿಸಬೇಕೆಂದು ಸದಸ್ಯರು ಪಟ್ಟು ಹಿಡಿದರು. ಆಗ ತಾಪಂ ಇಓ ಎಸ್.ಎಂ. ರುದ್ರಸ್ವಾಮಿ ಮಾತನಾಡಿ, ಸಭೆಗೆ ಬರುವಾಗ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತರಬೇಕು. ಸದಸ್ಯರ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಬೇಕು ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದರು.ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಶಂಕಿತ ಡೆಂಘಿಜ್ವರ ನಿಯಂತ್ರಣದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಯಿತು. ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಸ್ಥಾಯಿ ಸಮಿತಿ ಚೇರಮನ್ ರೇಣುಕಾ ಹಟ್ಟಿಮನಿ, ಸದಸ್ಯ ಶಿವುಕುಮಾರ ಸಾಲಮನಿ, ಆರ್.ಕೆ. ಚವ್ಹಾನ, ಧರ್ಮಣ್ಣ ಭೂಸಗೌಡ್ರ, ಗಾಯತ್ರಿ ನಾಗನೂರ, ಮಾಲಾನಬಿ ಗಡಾದ, ಅಭಿಯಂತರ ರಮೇಶ ಪತ್ತಾರ ಸೇರಿದಂತೆ ತಾಪಂ ಸದಸ್ಯರು ಮತ್ತು ತಾಲೂಕಿನ ವಿವಿಧ ಇಲಾಖೆಯ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

