ವೀರಭದ್ರ ಪರಂಪರೆ: 14ರಿಂದ ವಿಚಾರ ಸಂಕಿರಣ
ಗದಗ: 'ವೀರಭದ್ರ ಪರಂಪರೆ ಮತ್ತು ಸಂಸ್ಕೃತಿ' ಕುರಿತು ಗುಲ್ಬರ್ಗಾದ ವಿಶ್ವವಿದ್ಯಾಲಯದಲ್ಲಿ ಮಾ. 14, 15ರಂದು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಸೋಮವಾರ ನಗರದ ಜ. ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿ ವೀರಭದ್ರನಿಗೆ ವಿಶಿಷ್ಟ ಸ್ಥಾನವಿದೆ. 2 ವಿಭಿನ್ನ ಪುರಾತನ ಸಂಸ್ಕೃತಿಗಳ ಸಂಘರ್ಷದ ಸಂಕೇತವಾಗಿ ನಿಂತ ವೀರಭದ್ರನು ಸಹಸ್ರ ಸಹಸ್ರ ವರ್ಷಗಳಿಂದ ಶಿವಾರಾಧಕ ಭಾರತೀಯ ಭಕ್ತರ ಆರಾಧ್ಯ ದೈವನಾಗಿದ್ದಾನೆ. ವೀರಭದ್ರನ ಕುರಿತು ವಿಪುಲ ಜನಪದ ಸಾಹಿತ್ಯ, ಗ್ರಾಂಥಿಕ ಸಾಹಿತ್ಯ ಹಲವು ಭಾಷೆಗಳಲ್ಲಿ ಸೃಷ್ಟಿಯಾಗಿವೆ. ವೀರಭದ್ರನ ಕುರಿತು ಬಹುಮುಖಿ ಅಧ್ಯಯನ, ಸಂಶೋಧನೆ ಅಲ್ಪ ಪ್ರಮಾಣದಲ್ಲಿ ನಡೆದಿದ್ದರೂ ಅಖಿಲ ಭಾರತ ಮಟ್ಟದಲ್ಲಿ ಕನ್ನಡದಲ್ಲಿ ಗಂಭೀರ ಸಂಶೋಧನೆ ನಡೆದಿಲ್ಲ.
ವೀರಭದ್ರನ ಪರಂಪರೆ, ಸಂಪ್ರದಾಯ, ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳ ಕೊಂಡಿ ಬೆಸೆದುಕೊಂಡ ಬಗೆ, ಶಿಲ್ಪ, ವಾಸ್ತುಶಿಲ್ಪ, ಚಿತ್ರ, ಶಾಸನ, ಹಸ್ತಪ್ರತಿ, ಸ್ಥಳೀಯ ಐತಿಹ್ಯ, ವರ್ತಮಾನದಲ್ಲಿನ ಆಚರಣೆಗಳು ಇತ್ಯಾದಿ ಕುರಿತು ಸದ್ಯ ಒಂದು ಹಂತದಲ್ಲಿ ರಾಜ್ಯಮಟ್ಟದ, 2ನೇ ಹಂತದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗುತ್ತದೆ. ಅಲ್ಲಿ ಮಂಡಿಸಿದ ನಾಡಿನ ಮತ್ತು ರಾಷ್ಟ್ರದ ಪ್ರಖ್ಯಾತ ವಿದ್ಯಾಂಸರ ಸಂಶೋಧನೆ ಪ್ರಬಂಧಗಳನ್ನು ವ್ಯವಸ್ಥಿತವಾಗಿ ಪ್ರಕಟಿಸುವ ಯೋಜನೆಯನ್ನು ಬಾಳೆಹೊನ್ನೂರಿನ ಸಂಸ್ಥೆ ಹಮ್ಮಿಕೊಂಡಿದೆ. ಗುಲ್ಬರ್ಗಾ ವಿವಿ ಸಹಯೋಗದಲ್ಲಿ ಮಾ. 14 ಮತ್ತು 15ರಂದು ವಿವಿಯಲ್ಲಿ 2 ದಿನಗಳ ಕಾಲ ಈ ಶೈಕ್ಷಣಿಕ ಸಂಕಿರಣ ನಡೆಯಲಿದೆ.
ಡಾ. ಎಂ.ಜಿ. ನಾಗರಾಜ, ಡಾ. ಎಸ್. ವಿದ್ಯಾಶಂಕರ, ಡಾ. ಸಂಗಮೇಶ ಸವದತ್ತಿ ಸೇರಿದಂತೆ 25ಕ್ಕೂ ಹೆಚ್ಚು ವಿದ್ವಾಂಸರು ವಿವಿಧ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಆಸಕ್ತ ಶಿಕ್ಷಕರಿಗೆ ಅವರ ಪ್ರಬಂಧಗಳ ಗುಣಮಟ್ಟ ಆಧರಿಸಿ ಭಾಗವಹಿಸಲು ಅವಕಾಶ ನೀಡಲಾಗುವುದು. ಆಸಕ್ತರು ತಮ್ಮ ಪ್ರಬಂಧವನ್ನು ಫೆ. 20ರೊಳಗೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ನಾಗೇಂದ್ರ ಮಸೂತಿ-9901495121, ಡಾ. ಎಚ್.ಟಿ. ಪೋತೆ - 9449163751 ಅವರನ್ನು ಸಂಪರ್ಕಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

