ಬಜೆಟ್: ಹೆಚ್ಚಿನ ಸೌಲಭ್ಯ ಕಲ್ಪಿಸಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 22
ಪ್ರಸಕ್ತ ವರ್ಷದ ಪುರಸಭೆ ಆಯವ್ಯಯದಲ್ಲಿ ಸ್ಥಳೀಯ ಬಡ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಜತೆಗೆ ಉಚಿತ ನಿವೇಶನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಹಾಗೂ ಭಾರತ್ ಪ್ರಜಾಸತ್ತಾತ್ಮಕ ಯುವ ಜನ ಫೆಡರೇಶನ್ (ಡಿವೈಎಫ್‌ಐ) ನೇತೃತ್ವದಲ್ಲಿ ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘಟನೆಯ ತಾಲೂಕಾಧ್ಯಕ್ಷ ಬಿ.ಎಸ್. ಶೀಲವಂತರ ಮಾತನಾಡಿ, ಪಟ್ಟಣದ ಬಡ ಕೂಲಿ ಕಾರ್ಮಿಕರು ವಾಸಿಸುತ್ತಿರುವ ಜನತಾ ಪ್ಲಾಟಿನ ಮತ್ತು ಉಣಚಗೇರಿ ಹೊರ ವಲಯದಲ್ಲಿ ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಈ ಸ್ಥಳದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಗಳು ಆರ್ಥಿಕವಾಗಿ ತುಂಬಾ ದುರ್ಬಲರಿದ್ದು, ಈ ಸಮುದಾಯಗಳಿಗೆ ಪಡಿತರ ಸೇರಿದಂತೆ ಸರ್ಕಾರದ ಸೌಲತ್ತುಗಳು ಮರೀಚಿಕೆಯಾಗಿವೆ.
ಇಂತಹ ಬಡ ಕುಟುಂಬಗಳಿಗೆ ನೆರವು ನೀಡುವಂತೆ ಹಾಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ಆಗ್ರಹಿಸಿ ಸ್ಥಳೀಯ ಆಡಳಿತಕ್ಕೆ ಸಂಘಟನೆಯ ವತಿಯಿಂದ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದನ್ನು ಖಂಡಿಸಿ ಸಂಘಟನೆಯು ಉಗ್ರ ಪ್ರತಿಭಟನೆ ಕೈಗೊಳ್ಳಲು ನಡೆಸಿದ ಪೂರ್ವಬಾವಿ ಸಭೆಯ ಸುದ್ದಿ ಪುರಸಭಾ ಆಡಳಿತಕ್ಕೆ ತಿಳಿದು ತರಾತುರಿಯಲ್ಲಿ ಭಾನುವಾರ ಕೆಲ ಕುಟುಂಬಗಳಿಗೆ ಮನೆ ನಿವೇಶನ ಹಕ್ಕುಪತ್ರ ನೀಡಿ ಕೈ ತೊಳೆದುಕೊಂಡಿದೆ.
ಮಾಧ್ಯಮದಲ್ಲಿ 403 ಫಲಾನುಭವಿಗಳಿಗೆ ಉಚಿತ ನಿವೇಶನ ಹಕ್ಕುಪತ್ರ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಸೋಮವಾರ ಹಕ್ಕುಪತ್ರ ಪಡೆಯಲು ಪುರಸಭೆಗೆ ಆಗಮಿಸಿದ ಫಲಾನುಭವಿಗಳಿಗೆ ಸರ್ಕಾರ ನಿಗದಿಪಡಿಸಿದ ರು. 25 ಸಾವಿರ ವಂತಿಗೆಯನ್ನು ತುಂಬಿದರೆ ಮಾತ್ರ ಹಕ್ಕುಪತ್ರ ನೀಡಲಾಗುವುದು ಎಂದು ಹೇಳುವ ಅಧಿಕಾರಿಗಳ ಮಾತಿಗೂ ಹಾಗೂ ಜನಪ್ರತಿನಿಧಿಗಳ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿರುವುದು ಜನರಲ್ಲಿ ಅನುಮಾನಕ್ಕೆಡೆ ಮಾಡಿದೆ. ಆದ್ದರಿಂದ ಕೂಡಲೇ ಜನಪ್ರತಿನಿಧಿಗಳು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ನಿರತರ ಸ್ಥಳಕ್ಕಾಗಮಿಸಿದ ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ ಹಾಗೂ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಕಡು ಬಡವರಿಗೆ ಆಶ್ರಯ ಒದಗಿಸುವ ಕುರಿತು ಆಶ್ರಯ ಸಮಿತಿ ಸಭೆಯಲ್ಲಿ ಚರ್ಚಿಸಿ ಜ. 31ರಂದು ನಡೆಯಲಿರುವ 2013-14ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಮೀಸಲಿಡಲು ಆಡಳಿತ ಮಂಡಳಿಗೆ ಪ್ರಾಸ್ತಾಪಿಸಲಾಗುವುದೆಂದರು. ಅದರಂತೆ ಪಡಿತರ ಅವ್ಯವಸ್ಥೆ ಕುರಿತು ಜ. 28ರಂದು ಪಡಿತರ ವಿತರಕರ ಸಭೆ ಕರೆಯಲಾಗಿದೆ ಎಂದು ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು. ಬಾಲು ರಾಠೋಡ, ಮಾರುತಿ ಚಿಟಗಿ, ಪೀರು ರಾಠೋಡ, ಕರಿಯಮ್ಮ ಗುರಿಕಾರ, ಮೈಬು ಹವಾಲ್ದಾರ್, ಫಯಾಜ ತೋಟದ, ಎಂ.ಬಿ. ಸೋಂಪೂರ ಇನ್ನಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

