ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಮಹನೀಯರು ಜೀವಾರ್ಪಣ ಮಾಡಿದ್ದಾರೆ: ಸಿದ್ಧಲಿಂಗ ಶ್ರೀ
ಗದಗ: ಈ ದೇಶದ ಸ್ವಾತಂತ್ರ್ಯ ಬರಿ ಶಾಂತಿಮಂತ್ರದ ಹೋರಾಟದಿಂದ ಸಿಕ್ಕಿದೆ ಎಂಬುದು ಪೂರ್ಣ ಸತ್ಯವಲ್ಲ, ಅದಕ್ಕೂ ಮೊದಲು ಅಸಂಖ್ಯ ಜನ ಹೋರಾಟಗಾರರು ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತ-ಜೀವತರ್ಪಣಗೈದಿರುವರೆಂಬುದನ್ನು ಭಾರತೀಯರು ಮರೆಯುವಂತಿಲ್ಲ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ರಾತ್ರಿ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ 2103ನೇ ಶಿವಾನುಭವದಲ್ಲಿ ನಡೆದ ಸುಭಾಸಚಂದ್ರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಲು ಭಗತ್‌ಸಿಂಗ್, ಮೈಲಾರ ಮಹದೇವ, ಚಂದ್ರಶೇಖರ ಆಜಾದ್, ದುರ್ಗಾದೇವಿ, ಮದನಲಾಲ್ ದಿಂಗಾರಂತಹ ಅಸಂಖ್ಯ ಮಹನೀಯರು ತಮ್ಮ ವೈಯಕ್ತಿಕ ಜೀವನ-ಸಂತೋಷಗಳನ್ನು ತ್ಯಾಗ ಮಾಡಿದರು. ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಇತಿಹಾಸ ಬರೆದರು.
ದೇಶ ಕಂಡ ಅಪ್ರತಿಮ ವಿಚಾರವಾದಿ, ಹೋರಾಟವಾದಿ, ಕ್ರಾಂತಿಕಾರಿಯಾಗಿ ನೇತಾಜಿ ವಿಶ್ವದ ಗಮನಸೆಳೆಯುವುದು ಭಾರತೀಯರಿಗೆ ಹೆಮ್ಮೆ ಸಂತಸದ ವಿಷಯ. ತ್ರಿಪುರಾದಲ್ಲಿ ಗಾಂಧಿ ಬೆಂಬಲಿತ ಪಟ್ಟಾಭಿಸೀತಾರಾಮಯ್ಯ ಅವರನ್ನು ಹಿಂದಿಕ್ಕಿ ಕಾಂಗ್ರೆಸ್ ಅಧ್ಯಕ್ಷರಾದ ಸುಭಾಸಚಂದ್ರ ಭೋಸ್ ಅವರಿಗೆ ಗಾಂಧಿ ಹಾಗೂ ನೆಹರೂ ಅವರಂತಹ ಧೀಮಂತ ನಾಯಕರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲವೆಂಬುದು ಕಹಿ ಸತ್ಯವಾಗಿದೆ.
ಇದೇ ಸಂದರ್ಭದಲ್ಲಿ ನೇತಾಜಿ ಸುಭಾಸ್‌ಚಂದ್ರ ಭೋಸ್ ಜೀವನ ಸಾಧನೆ ಕುರಿತು ಪ್ರೊ. ಕೆ.ಪಿ. ಕಾಜಗಾರ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ಎಸ್.ಎಸ್. ಪಾಟೀಲ, ನಿಂಗನೌಡ ಪಾಟೀಲ, ಡಾ. ಬಿ.ಎಫ್.ದಂಡಿನ, ಶರಣುಗೌಡ ಬೇಲೇರಿ, ಮಂಜುನಾಥ ಬೊಮ್ಮನಕಟ್ಟಿ ಮಾತನಾಡಿದರು. ಅಮರೇಶ ಅಂಗಡಿ, ಸಿದ್ದಲಿಂಗೇಶ ಹಿರೇಮಠ, ಪ್ರಕಾಶ ಕರಿಸೋಮನಗೌಡ್ರ, ಅನ್ನಪೂರ್ಣಕ್ಕ ಬಡಿಗಣ್ಣವರ, ವೀರೇಶ ಮುನವಳ್ಳಿ, ತೊಂಟೇಶ ಕುರಡಗಿ ಮುಂತಾದವರು ಉಪಸ್ಥಿತರಿದ್ದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

